ಪಂಚಮಸಾಲಿಗೆ ಮೀಸಲಾತಿ : ಅಧ್ಯಯನ ವರದಿ ನೀಡಲು ಹಿಂದುಳಿದ ವರ್ಗಗಳ ಆಯೋಗಕ್ಕೆ ಸಿಎಂ ಆದೇಶ

ಬೆಂಗಳೂರು : ಪಂಚಮಸಾಲಿ ಮಠಾಧೀಶರ ಹೋರಾಟಕ್ಕೆ ಸಿಎಂ ಯಡಿಯೂರಪ್ಪ ಕೊನೆಗೂ ಮಣಿದಿದ್ದಾರೆ. ಪಂಚಮಸಾಲಿ ಜನಾಂಗವನ್ನು ಹಿಂದುಳಿದ ವರ್ಗ 2ಎ ಮೀಸಲಾತಿಗೆ ಒಳಪಡಿಸುವ ಕುರಿತು ಸಮಗ್ರ ಅಧ್ಯಯನ ನಡೆಸಿ ವರದಿ ನೀಡುವಂತೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಿಎಂ ಯಡಿಯೂರಪ್ಪ ಪತ್ರ ಬರೆದಿದ್ದಾರೆ.

ವಿಧಾನಸಭಾ ಕಲಾಪದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಪಂಚಮಸಾಲಿ ಜನಾಂಗವನ್ನು ಹಿಂದುಳಿದ ವರ್ಗಕ್ಕೆ ಸೇರ್ಪಡೆ ಮಾಡುವ ಕುರಿತು ಮುಖ್ಯಮಂತ್ರಿ ಸ್ಪಷ್ಟನೆ ನೀಡುವಂತೆ ಆಗ್ರಹಿಸಿದ್ದರು. ಯತ್ನಾಳ್ ವಿರುದ್ದ ಕೋಪ ಪ್ರದರ್ಶಿಸಿದ್ದ ಸಿಎಂ ಯಡಿಯೂರಪ್ಪ ತನ್ನಿಂದ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ ಎಂದಿದ್ದರು. ಯಡಿಯೂರಪ್ಪ ನೀಡಿದ ಹೇಳಿಕೆ ಪಂಚಮಸಾಲಿ ಮಠಾಧೀಶರನ್ನು ಕೆರಳಿಸಿದ್ದು, ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಸಿಎಂ ಪಂಚಮ ಸಾಲಿ ಜನಾಂಗದವರು ತಮ್ಮನ್ನು ಹಿಂದುಳಿದ ವರ್ಗ 2ಎ ಗೆ ಸೇರ್ಪಡೆಗೊಳಿಸುವಂತೆ ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಮಗ್ರ ಅಧ್ಯಯನ ನಡೆಸಿ ವರದಿಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಸುವಂತೆ ಆದೇಶ ಹೊರಡಿಸಿದ್ದಾರೆ.

ಇನ್ನು ವಿಧಾನಸಭಾ ಅಧಿವೇಶನದಲ್ಲಿ ತಾನು ನೀಡಿರುವ ಹೇಳಿಕೆಯ ಕುರಿತು ಶ್ರೀಜಯ ಮೃತ್ಯುಂಜಯ ಸ್ವಾಮೀಜಿ ಅವರು ಅಪಾರ್ಥ ಮಾಡಿಕೊಂಡಿದ್ದಾರೆ. ಪಂಚಮಸಾಲಿ ಸಮಾಜವನ್ನು 2ಎ ಗೆ ಸೇರ್ಪಡೆಗೊಳಿಸುವ ಕುರಿತು ನಾನು ಈಗಾಗಲೇ ಪಂಚಮಸಾಲಿ ಸಮುದಾಯದ ಸಚಿವರಾದ ಮುರುಗೇಶ್ ನಿರಾಣಿ, ಸಿಸಿ ಪಾಟೀಲ್ ಹಾಗು ಸಮುದಾಯದ ಶಾಸಕರ ಜೊತೆಗೆ ಚರ್ಚಿಸಿದ್ದೇನೆ.

ಈ ಹಿಂದೆ ನಮ್ಮದೇ ಸರಕಾರ ಪಂಚಮಸಾಲಿ ಸಮಾಜವನ್ನು 3ಬಿಗೆ ಸೇರ್ಪಡೆಗೊಳಿಸಿತ್ತು. ನಮ್ಮದು ರಾಷ್ಟ್ರೀಯ ಪಕ್ಷ ಹೀಗಾಗಿ ಸಂಸತ್ ಸದಸ್ಯರ ಜೊತೆಗೆ ಚರ್ಚಿಸಿ ರಾಷ್ಟ್ರೀಯ ನಾಯಕರಿಗೆ ವಿಷಯವನ್ನು ಮನವರಿಕೆ ಮಾಡಿಕೊಡುತ್ತೇನೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Comments are closed.