ಬೆಂಗಳೂರು: ಬೈಎಲೆಕ್ಷನ್ ಅಖಾಡದಲ್ಲಿ ಆರ್.ಆರ್.ನಗರ ಕ್ಷೇತ್ರ ಹೈವೋಲ್ಟೆಜ್ ಕ್ಷೇತ್ರವಾಗಿ ಮಾರ್ಪಟಿದ್ದು, ಮೂರು ರಾಜಕೀಯ ಪಕ್ಷಗಳು ತಮ್ಮ-ತಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ಸರ್ಕಸ್ ಆರಂಭಿಸಿದ್ದಾರೆ. ಈ ಮಧ್ಯೆ ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ಕೈಗೊಂಡ ಮಾಜಿಸಿಎಂ ಎಚ್ಡಿಕೆ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ನಾನು ನೊಂದಿದ್ದೇನೆ. ಹೀಗಾಗಿ ನೊಂದ ಕ್ಷೇತ್ರದ ಬಡಜನರ ಅಭಿವೃದ್ಧಿಗೆ ಬಂದಿದ್ದೇನೆ ಎನ್ನುತ್ತಾರೆ. ಆದರೆ ಹಳ್ಳಿಯಲ್ಲಿರುವ ದಿ.ಡಿ.ಕೆ.ರವಿಯವರ ತಂದೆ-ತಾಯಿಯನ್ನೇ ನೋಡಲಿಲ್ಲ. ಅವರ ಬದುಕಿಗೆ ಒಂದು ದಾರಿ ಮಾಡಿಕೊಡಲಿಲ್ಲ. ಈಗ ನಿಮ್ಮ ಕಷ್ಟಗಳನ್ನು ಕೇಳುತ್ತಾರಾ? ನಿಮ್ಮ ಸಮಸ್ಯೆಗಳನ್ನು ಬಗೆಹರಿಸುತ್ತಾರಾ ಎಂದು ಎಚ್ಡಿಕೆ ಪ್ರಶ್ನಿಸಿದ್ದಾರೆ.

ಆಮೂಲಕ ಡಿ.ಕೆ.ರವಿಯವರ ತಾಯಿ-ತಂದೆ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಕುಸುಮಾಹನುಮಂತರಾಯಪ್ಪ ನಡುವಿನ ವೈಮನಸ್ಸನ್ನು ಮತ್ತೆ ಕೆಣಕಿದ್ದಾರೆ. ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಪರ ಪ್ರಚಾರ ಕೈಗೊಂಡ ಮಾತನಾಡುತ್ತಿದ್ದ ಎಚ್ಡಿಕೆ ಇದೇ ವೇಳೆ ಮಾಜಿ ಸಿಎಂ ಸಿದ್ಧರಾಮಯ್ಯ ವಿರುದ್ಧವೂ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಜೆಡಿಎಸ್ ಆಟಕ್ಕುಂಟು, ಲೆಕ್ಕಕ್ಕಿಲ್ಲ ಎಂದವರೇ 2018 ರಲ್ಲಿ ನಮ್ಮ ಮನೆ ಬಾಗಿಲಿಗೆ ಬಂದು ನೀವೆ ರಾಜ್ಯದ ಮುಖ್ಯಮಂತ್ರಿಯಾಗಿ ಎಂದಿದ್ದನ್ನು ಈ ರಾಜ್ಯವೇ ನೋಡಿದೆ ಎನ್ನುವ ಮೂಲಕ ಸಿದ್ಧರಾಮಯ್ಯನವರಿಗೆ ಚಾಟಿ ಬೀಸಿದ್ದಾರೆ. ಜೆಡಿಎಸ್ ನಿಂದಲೇ ಬೆಳೆದು ಬಂದ ಸಿದ್ಧರಾಮಯ್ಯ ಈಗ ವಿಲನ್ ಆಗಿದ್ದಾರೆ. ಕಾಂಗ್ರೆಸ್ ನಲ್ಲಿ ಸಿದ್ಧರಾಮಯ್ಯನವರೂ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗುವ ದಿನಗಳು ದೂರವಿಲ್ಲ ಎಂದು ಎಚ್ಡಿಕೆ ಭವಿಷ್ಯ ನುಡಿದಿದ್ದಾರೆ.

ಬಿಜೆಪಿ ವಿರುದ್ಧವೂ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ ಮಾದರಿ ನಗರ ಮಾಡುತ್ತೇನೆ ಎಂದ ರಾಜ್ಯಸರ್ಕಾರ ಏನು ಮಾಡುತ್ತಿದೆಯೋ ಗೊತ್ತಿಲ್ಲ. ಆದರೆ ಮೊನ್ನೆ ಬಂದ ಮಳೆಗೆ ನಗರವೇ ಕೊಚ್ಚಿಕೊಂಡು ಹೋಗಿದ್ದು, ಜನತೆಗೆ ಸರ್ಕಾರ ನೆರವಾಗಿಲ್ಲ ಎಂದರು.