Sanchari Vijay:ಚಿಕಿತ್ಸೆಗೆ ಸ್ಪಂದಿಸದ ಸಂಚಾರಿ ವಿಜಯ್…! ಬ್ರೇನ್ ಡೆಡ್ ಹಿನ್ನೆಲೆ ಅಂಗಾಂಗ ದಾನಕ್ಕೆ ಕುಟುಂಬಸ್ಥರ ನಿರ್ಧಾರ…!!

ರಸ್ತೆ ಅಪಘಾತದಲ್ಲಿ ಗಾಯಗೊಂಡ ಆಸ್ಪತ್ರೆ ಸೇರಿದ್ದ ನಟ ಸಂಚಾರಿ ವಿಜಯ್ ಮೆದುಳು ಕೆಲಸ ಮಾಡುವುದನ್ನು ನಿಲ್ಲಿಸಿದ್ದು, ಆರೋಗ್ಯ ತೀವ್ರ ಹದಗೆಟ್ಟಿದೆ. ಸಂಚಾರಿ ವಿಜಯ್ ಮತ್ತೆ ಚೇತರಿಸಿಕೊಳ್ಳುವ ಸಾಧ್ಯತೆಗಳು ಕ್ಷೀಣಿಸಿರುವ ಹಿನ್ನೆಲೆಯಲ್ಲಿ ಅವರ ಕುಟುಂಬ ವಿಜಯ್ ಅಂಗಾಂಗ ದಾನಕ್ಕೆ ನಿರ್ಧರಿಸಿದೆ.

ನಿನ್ನೆ ತಡರಾತ್ರಿ ಸಂಚಾರಿ ವಿಜಯ್ ಆರೋಗ್ಯ ಕ್ಷೀಣಿಸಿದೆ ಎಂದು ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದ ಅಪೋಲೋ ವೈದ್ಯರು ಇಂದು ಸುದ್ದಿಗೋಷ್ಠಿ ನಡೆಸಿದ್ದು, ಶಸ್ತ್ರ ಚಿಕಿತ್ಸೆ ನಡೆಸಿ 36 ಗಂಟೆ ಕಳೆದರೂ ವಿಜಯ್ ದೇಹ ಚಿಕಿತ್ಸೆಗೆ ಸ್ಪಂದಿಸಿಲ್ಲ.  ಈ ಸ್ಥಿತಿಯನ್ನು ನಾವು ಬ್ರೇನ್ ಡೆಡ್ ಕಂಡಿಶನ್ ಎಂದು ಹೇಳುತ್ತೇವೆ. ಇಲ್ಲಿ ಮೆದುಳು ನಿಷ್ಕ್ರಿಯಗೊಂಡಿರೋದರಿಂದ ಮನುಷ್ಯ ಚಿಕಿತ್ಸೆಗೆ ಸ್ಪಂದಿಸುವುದಿಲ್ಲ. ಆದರೆ ಅಂಗಾಂಗಳು ಸುಸ್ಥಿತಿಯಲ್ಲಿರುತ್ತವೆ ಎಂದು ವಿವರಣೆ ನೀಡಿದ್ದಾರೆ.

ವೈದ್ಯರ ಮಾಹಿತಿ ಹಿನ್ನೆಲೆಯಲ್ಲಿ ಸಂಚಾರಿ ವಿಜಯ್ ಕುಟುಂಬ ಅವರ ಅಂಗಾಂಗ ದಾನಕ್ಕೆ ನಿರ್ಧರಿಸಿದೆ. ಅವರ ಸಹೋದರ  ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಬ್ರೇನ್ ಡೆಡ್ ಹಿನ್ನೆಲೆಯಲ್ಲಿ ಅಂಗಾಂಗ ದಾನ ಮಾಡಿ ಅಗತ್ಯ ಉಳ್ಳ ರೋಗಿಗಳಿಗೆ ನೆರವಾಗಲು ನಿರ್ಧರಿಸಿದ್ದೇವೆ ಎಂದಿದ್ದಾರೆ.

ಶನಿವಾರ ಕೊರೋನಾ ಸಂಕಷ್ಟದಲ್ಲಿರುವವರಿಗೆ ಫುಡ್ ಕಿಟ್ ವಿತರಿಸಿ ವಾಪಸ್ಸಾಗುತ್ತಿದ್ದ ವೇಳೆ ಸಂಚಾರಿ ವಿಜಯ್  ಹಾಗೂ ಅವರ ಸ್ನೇಹಿತನಿದ್ದ ಬೈಕ್ ಅಪಘಾತಕ್ಕಾಡಾಗಿತ್ತು. ಅಪಘಾತದ ತೀವ್ರತೆಗೆ ಸಂಚಾರಿ ವಿಜಯ್ ತೊಡೆ ಹಾಗೂ ಮೆದುಳಿಗೆ ಹೆಚ್ಚಿನ ಪೆಟ್ಟಾಗಿತ್ತು.

ಸಂಚಾರಿ ವಿಜಯ್ ಮೆದುಳಿನಲ್ಲಿ ರಕ್ತಸ್ರಾವ ಆಗಿದ್ದರಿಂದ ಆಸ್ಪತ್ರೆಗೆ ತರುತ್ತಿದ್ದಂತೆ ಅಪೋಲೋ ವೈದ್ಯರು ಬೆಳಗಿನ ಜಾವವೇ ಮೆದುಳಿನ ಶಸ್ತ್ರ ಚಿಕಿತ್ಸೆ ನಡೆಸಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದ ವಿಜಯ್ ಮೆದುಳು ನಿಷ್ಟ್ರಿಯವಾಗಿದೆ ಎನ್ನಲಾಗಿದೆ.

2007 ರಿಂದ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟ ಸಂಚಾರಿ ವಿಜಯ್ ಕನ್ನಡ, ತಮಿಳು ಹಾಗೂ ತೆಲುಗು ಚಿತ್ರದಲ್ಲಿ ನಟಿಸಿದ್ದರು.

ನಾನು ಅವನಲ್ಲ ಅವಳು ಸಿನಿಮಾಗಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಸಂಚಾರಿ ವಿಜಯ್ ತಮ್ಮ 38 ವಯಸ್ಸಿನಲ್ಲಿ ಅಪಘಾತಕ್ಕೆ ಬಲಿಯಾಗಿದ್ದು, ಅಭಿಮಾನಿಗಳ ಕಣ್ಣೀರಿಗೆ ಕಾರಣವಾಗಿದೆ.

Comments are closed.