ಸ್ಯಾಂಡಲ್ ವುಡ್ ನಲ್ಲಿ 2016 ರಲ್ಲಿ ತೆರೆಕಂಡು ಸೂಪರ್ ಹಿಟ್ ಎನ್ನಿಸಿದ ಕಿರಿಕ್ ಪಾರ್ಟಿ ಸಿನಿಮಾ ತಂಡಕ್ಕೆ ಕಾನೂನಿನ ಕಿರಿಕ್ ಎದುರಾಗಿದ್ದು, ತಂಡಕ್ಕೆ ತಂಡವೇ ಬಂಧನ ಭೀತಿ ಎದುರಿಸುತ್ತಿದೆ. ರಕ್ಷಿತ್ ಶೆಟ್ಟಿ-ರಿಷಬ್ ಶೆಟ್ಟಿ ಇಬ್ಬರನ್ನು ಬಂಧಿಸಿ ಹಾಜರುಪಡಿಸಲು ನ್ಯಾಯಾಲಯ ಆದೇಶಿಸಿದೆ.

ಹಾಡುಗಳನ್ನು ಅನುಮತಿ ಪಡೆಯದೇ ಬಳಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿವಾದಿಯಾಗಿರುವ ಕಿರಿಕ್ ಪಾರ್ಟಿ ಚಿತ್ರತಂಡ ಅಂದ್ರೇ ನಿರ್ದೇಶಕ ರಿಷಬ್ ಶೆಟ್ಟಿ, ನಟ ರಕ್ಷಿತ್ ಶೆಟ್ಟಿ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ ಹಾಗೂ ಪರಮ್ವಾ ಸ್ಟುಡಿಯೋ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಯಾಗಿದೆ.

ಬೆಂಗಳೂರಿನ 9 ನೇ ಎಸಿಎಂಎಂ ನ್ಯಾಯಾಲಯ ಅರೇಸ್ಟ್ ವಾರೆಂಟ್ ಜಾರಿಮಾಡಿದೆ. ಕಿರಿಕ್ ಪಾರ್ಟಿ ಸಿನಿಮಾಗೆ ಲಹರಿ ಸಂಸ್ಥೆಯಿಂದ ಅನುಮತಿ ಪಡೆಯದೇ, ಹಾಡುಗಳನ್ನು ಬಳಸಿದ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಲಹರಿ ಸಂಸ್ಥೆ ಕಾನೂನು ಹೋರಾಟ ಆರಂಭಿಸಿತ್ತು.

ಕಾಪಿರೈಟ್ ಆಕ್ಟ್ 63ಎ ಮತ್ತು 63ಬಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಸಪ್ಟೆಂಬರ್ 28 , 2019 ರಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ 8 ಸಲ ನ್ಯಾಯಾಲಯಕ್ಕೆ ಹಾಜರಾಗುವಂತೆ ನೋಟಿಸ್ ಜಾರಿಯಾಗಿತ್ತು. ಆದರೂ ರಿಷಬ್ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ.

ಈ ಹಿನ್ನೆಲೆಯಲ್ಲಿ ಎಲ್ಲರನ್ನು ಬಂಧಿಸಿ ಕರೆತರುವಂತೆ ನ್ಯಾಯಾಲಯ ಆದೇಶಿಸಿದೆ. ಇದರಿಂದ ಚಿತ್ರತಂಡ ಸಂಕಷ್ಟಕ್ಕೆ ಸಿಲುಕಿದೆ. ರಿಷಬ್,ರಕ್ಷಿತ್ ,ಅಜನೀಶ್ ಲೋಕನಾಥ ಸೇರಿದಂತೆ ಚಿತ್ರತಂಡವನ್ನು ಮೇ 27 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲು ಕೋರ್ಟ್ ಆದೇಶಿಸಿದೆ.