ಕಾಲ ಕೂಡಿಬಂದಾಗ ಶಿಲೆಯೂ ಕಲಾಕೃತಿಯಾಗುತ್ತದೆ ಅಂತಾರೆ. ಈ ಮಾತಿಗೆ ಸಾಕ್ಷಿ ಕನ್ನಡ ಮತ್ತು ತಮಿಳಿನ ಬಹುಬೇಡಿಕೆ ನಟ ಕತೆ. ಆತ ಮತ್ಯಾರೂ ಅಲ್ಲ, ಪ್ರಶಾಂತ್ ನೀಲ್ ನಿರ್ದೇಶನದ ಸೂಪರ್ ಹಿಟ್ ಮೂವಿ, ಕೆಜಿಎಫ್-1 ಸಿನಿಮಾದಲ್ಲಿ ವಿಲನ್ ರೋಲ್ ಮೂಲಕ ಮನಗೆದ್ದ ರಾಮಚಂದ್ರರಾಜು ಅಲಿಯಾಸ್ ಗರುಡ ರಾಮ್.

ಕೆಜಿಎಫ್ ಸಿನಿಮಾದಲ್ಲಿ ಸೂರ್ಯವರ್ಧನ್ ಹಿರಿಯ ಪುತ್ರನಾಗಿ ಗೋಲ್ಡ್ ಫಿಲ್ಡ್ ನ್ನು ತನ್ನ ಹಿಡಿತದಲ್ಲಿಟ್ಟುಕೊಂಡ ವಿಲನ್ ಆಗಿ, ನಟಿಸಿ ಮನಗೆದ್ದ ರಾಮಚಂದ್ರರಾಜು ನಟನೆಗೆ ಬಂದಿದ್ದೇ ಆಕಸ್ಮಿಕ. ಯಶ್ ನ ಡ್ರೈವರ್ ಕಮ್ ಬಾಡಿಗಾರ್ಡ್ ಆಗಿದ್ದ ರಾಮಚಂದ್ರರಾಜು, ನಟನೆಯ ಕನಸು ಕಂಡಿದ್ದರು.

ಯಶ್ ಜೊತೆ 12 ವರ್ಷಗಳ ಕಾಲ ಕೆಲಸ ಮಾಡಿದ ರಾಮಚಂದ್ರರಾಜುಗೆ ಸಹಜವಾಗಿಯೇ ನಟನಾಗುವ ಕನಸು ಹುಟ್ಟಿತ್ತು. ಆದರೆ ಹೇಳಿಕೊಳ್ಳುವ ಧೈರ್ಯವಿರಲಿಲ್ಲ. ಕೆಜಿಎಫ್-1 ಸ್ಕ್ರಿಪ್ಟ್ ಚರ್ಚೆಯ ಸಂದರ್ಭದಲ್ಲಿ ವಿಲನ್ ರೋಲ್ ಗೆ ಯಾರು ಎಂಬ ಚರ್ಚೆಯಲ್ಲಿದ್ದಾಗ ಪ್ರಶಾಂತ್ ನೀಲ್ ರಾಮಚಂದ್ರರಾಜುವನ್ನು ಆಯ್ಕೆ ಮಾಡಿದ್ದಾರೆ.

ಅಷ್ಟೇ ಅಲ್ಲ ಒಂದು ವರ್ಷಗಳ ಕಾಲ ರಾಮಚಂದ್ರರಾಜುವನ್ನು ಜಿಮ್ ಗೆ ಕಳುಹಿಸಿ ತರಬೇತಿ ಕೊಡಿಸಿ ಲುಕ್ ಬದಲಾಯಿಸಿ ಚಿತ್ರದ ಪಾತ್ರಕ್ಕೆ ಸರಿಹೊಂದುವಂತೆ ಸಿದ್ಧಪಡಿಸಿ ಬಳಸಿಕೊಂಡಿದ್ದಾರೆ. ರಾಮಚಂದ್ರರಾಜು ಈ ನಟನೆಯನ್ನು ಇಡಿ ಸಿನಿಮಾರಂಗವೇ ಮೆಚ್ಚಿದ್ದು, ಈ ರಾಮಚಂದ್ರರಾಜು ಅಲಿಯಾಸ್ ಗರುಡರಾಮ್ ಈಗ ಕನ್ನಡ ಹಾಗೂ ತಮಿಳಿನ ಬಹುಬೇಡಿಕೆಯ ನಟರಾಗಿದ್ದಾರೆ.

ಸದ್ಯ ಕೆಜಿಎಫ್-1 ಯಶಸ್ಸಿನ ಬಳಿಕ ತಮ್ಮ ಪಾರ್ಟಟೈಂ ಕೆಲಸವೆಲ್ಲವನ್ನು ಬಿಟ್ಟು ನಟನೆಯಲ್ಲಿ ಪೂರ್ಣಾವಧಿ ತೊಡಗಿಸಿಕೊಂಡಿರುವ ರಾಮಚಂದ್ರಾಜು, ಕೆಜಿಎಫ್-2, ತಮಿಳಿನ ವೇಟ್ರಿಗುರು ರಾಮಾನುಜಂ,ಜನಮನಗನ,ಸುಲ್ತಾನ್,ಎಸ್.ಕೆ.17, ಕನ್ನಡದ ಬಂಪರ್ ಸೇರಿದಂತೆ ಹಲವು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.