ಸರ್ಕಾರದ ನಿರ್ಧಾರಕ್ಕೆ ಯುವರತ್ನ್ ನ ತಕರಾರು…! ಶೇಕಡಾ 50 ರಷ್ಟು ಮಾತ್ರ ಪ್ರವೇಶ ಆದೇಶ ಹಿಂಪಡೆಯಲು ಒತ್ತಾಯ…!!

ರಾಜ್ಯದಲ್ಲಿ ಕೊರೋನಾ ಆರ್ಭಟ ಮುಂದುವರೆದಿರುವ ಹಿನ್ನೆಲೆಯಲ್ಲಿ ಸರ್ಕಾರ ಕಠಿಣ ನಿಯಮಗಳನ್ನು ರೂಪಿಸಿದೆ. ಧಾರ್ಮಿಕ ಕಾರ್ಯಕ್ರಮ, ಪಾರ್ಟಿ,ಜಿಮ್,ಮನೋರಂಜನೆಯ ಕಾರ್ಯಕ್ರಮಗಳ ಮೇಲೆ ನಿರ್ಭಂದ ಹೇರಿದೆ. ಆದರೆ ಚಲನಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಪ್ರವೇಶವನ್ನು ಶೇಕಡಾ 50 ಕ್ಕೆ ಇಳಿಸಿರುವುದು ಚಿತ್ರರಂಗದ ಕೆಂಗಣ್ಣಿಗೆ ಗುರಿಯಾಗಿದೆ.

ಚಿತ್ರಮಂದಿರಗಳಲ್ಲಿ ಶೇಕಡಾ 50 ರಷ್ಟು ಪ್ರೇಕ್ಷಕರಿಗೆ ಮಾತ್ರ ಪ್ರವೇಶಾವಕಾಶ ನೀಡಿ ಸರ್ಕಾರ ಆದೇಶ ಹೊರಡಿಸಿದೆ. ಈ ಆದೇಶವನ್ನು ಖಂಡಿಸಿ ನಟ ಪುನೀತ್ ರಾಜಕುಮಾರ್ ಫೇಸ್ ಬುಕ್ ಲೈವ್ ಬಂದಿದ್ದು, ಈ ಆದೇಶವನ್ನು ಸರ್ಕಾರ ಹಿಂಪಡೆಯಬೇಕೆಂದು ಒತ್ತಾಯಿಸಿದ್ದಾರೆ.

https://www.facebook.com/watch/?v=1594596187403473

ಮಾಲ್ ಗಳಲ್ಲಿ, ಚಿತ್ರಮಂದಿರಗಳಲ್ಲಿ ಜನರು ಕೊರೋನಾ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುತ್ತಿದ್ದಾರೆ. ಮಾಸ್ಕ್ ಧರಿಸಿ, ಸ್ಯಾನಿಟೈಶರ್ ಬಳಸುತ್ತಿದ್ದಾರೆ. ಆದರೂ ಈ ರೀತಿ ನಿರ್ಭಂದ ಹೇರೋದರಿಂದ ಜನರಲ್ಲಿ ಆತಂಕ ಮೂಡಲಿದೆ. ಇದರಿಂದ ಚಿತ್ರರಂಗವೂ ಸಂಕಷ್ಟಕ್ಕಿಡಾಗಲಿದೆ ಎಂದು ಮನವಿ ಮಾಡಿದ್ದಾರೆ.

ಪ್ರಸ್ತುತ ಕೊರೋನಾ ಎರಡನೇ ಅಲೆಯ ಸಂದರ್ಭದಲ್ಲಿ ಮುಂಜಾಗ್ರತೆ ಹಾಗೂ ಸುರಕ್ಷತೆ ಮುಖ್ಯ. ಅದರ ಜೊತೆ ಜೀವನವೂ ಸಾಗಬೇಕು. ಹೀಗಾಗಿ ದಯವಿಟ್ಟು ಚಿತ್ರಮಂದಿರಗಳನ್ನು ನಿರ್ಬಂಧದಿಂದ ಹೊರಗಿಡಿ ಎಂದು ಪುನೀತ್ ಮನವಿ ಮಾಡಿದ್ದಾರೆ. ಪುನೀತ್ ರಾಜಕುಮಾರ್ ಜೊತೆ ಯುವರತ್ನ ನಿರ್ದೇಶಕ ಸಂತೋಷ್ ಆನಂದ ರಾಮ್ ಕೂಡ ಆತಂಕ ವ್ಯಕ್ತಪಡಿಸಿದ್ದಾರೆ.

ಚಿತ್ರಮಂದಿರದಲ್ಲಿ ಜನರು ನಿಯಮ ಪಾಲಿಸುತ್ತಿದ್ದಾರೆ. ಅಲ್ಲದೇ ಜನರು ಫ್ಯಾಮಿಲಿ ಸಮೇತ ಬಂದು ಸಿನಿಮಾ ನೋಡುತ್ತಿದ್ದಾರೆ. ಚಿತ್ರಪ್ರದರ್ಶನವೂ ಒಳ್ಳೆಯ ರೀತಿಯಲ್ಲಿ ನಡೆಯುತ್ತಿದೆ. ಇಂತಹ ಹೊತ್ತಿನಲ್ಲಿ ಸರ್ಕಾರದ ಈ ನಿರ್ಧಾರ ಆಘಾತ ತಂದಿದೆ ಎಂದಿದ್ದಾರೆ.

ಚುನಾವಣಾ ರ್ಯಾಲಿಗೆ ಇಲ್ಲದ ನಿರ್ಬಂಧ ಕೇವಲ ಸಿನಿಮಾ ಮಂದಿರಕ್ಕೆ ಹೇರುವ ಮೂಲಕ ಚಿತ್ರೋದ್ಯಮವನ್ನು ನಡುನೀರಿಯಲ್ಲಿ ಕೈಬಿಡುವಂತೆ ಮಾಡುತ್ತಿದ್ದಾರೆ. ಇದರಿಂದ ಬಂಡವಾಳ ಹೂಡಿದ ನಿರ್ಮಾಪಕರು ಕಂಗಾಲಾಗುತ್ತಾರೆ ಎಂದಿದ್ದಾರೆ. ಪುನೀತ್ ರಾಜಕುಮಾರ್ ಅಭಿನಯದ ಯುವರತ್ನ್ ಸಿನಿಮಾ, ದರ್ಶನ್ ಅಭಿನಯದ ರಾಬರ್ಟ್, ಪ್ರಜ್ವಲ್ ಅಭಿನಯದ ಇನ್ಸಪೆಕ್ಟರ್ ವಿಕ್ರಂ ಸೇರಿದಂತೆ ಹಲವು ಚಿತ್ರಗಳು ಪ್ರದರ್ಶನದ ಮೇಲೆ ಸರ್ಕಾರದ ನಿರ್ಧಾರ ಹೊಡೆತ ನೀಡಲಿದೆ.

Comments are closed.