ಕೊರೋನಾ ಸಂಕಷ್ಟ ಕಾಲದಲ್ಲಿ ಎಲ್ಲರೂ ಸೋಂಕಿತರ ಸಹಾಯಕ್ಕೆ ನಿಂತಿದ್ದಾರೆ. ಈ ಮಧ್ಯೆ ಸ್ಯಾಂಡಲ್ ವುಡ್ ಸ್ಟಾರ್ ಗಳು ಕೂಡ ಸಂಕಷ್ಟಕ್ಕೆ ಸ್ಪಂದಿಸುತ್ತಿದ್ದಾರೆ. ಈ ಸಾಲಿಗೆ ರೋರಿಂಗ್ ಸ್ಟಾರ್ ಶ್ರೀಮುರುಳಿ ಸೇರ್ಪಡೆಗೊಂಡಿದ್ದು ಕೊರೋನಾ ಸೋಂಕಿತರ ಚಿಕಿತ್ಸೆಗೆ ಶ್ರಮಿಸುತ್ತಿರುವ ವೈದ್ಯರಿಗೆ ಸಹಾಯಹಸ್ತ ಚಾಚಿದ್ದಾರೆ.

ಕೊರೋನಾ ಸೋಂಕಿತರ ಚಿಕಿತ್ಸೆಗೆ ಹಗಲಿರುಳೆನ್ನದೇ ಶ್ರಮಿಸುತ್ತಿರುವ ಬೆಂಗಳೂರಿನ ಐದು ಸರ್ಕಾರಿ ಆಸ್ಪತ್ರೆಯ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗೆ ಊಟೋಪಚಾರ ಒದಗಿಸುತ್ತಿದ್ದಾರೆ.

ಕೊರೋನಾ ಎರಡನೇ ಅಲೆಯಲ್ಲಿ ಸೋಂಕಿನ ಪ್ರಮಾಣ ಹೆಚ್ಚುತ್ತಿದ್ದಂತೆ ರೋಗಿಗಳ ಸಂಖ್ಯೆ ಹೆಚ್ಚಿದೆ. ಹೀಗಾಗಿ ವೈದ್ಯಕೀಯ ಸಿಬ್ಬಂದಿ ವೈದ್ಯರು ಊಟೋಪಚಾರಕ್ಕೂ ಸಮಯವಿಲ್ಲದೇ ರೋಗಿಗಳ ಸೇವೆಯಲ್ಲಿ ತೊಡಗಿದ್ದಾರೆ.

ಹೀಗಾಗಿ ಕೆ.ಸಿ.ಜನರಲ್, ಇಎಸ್ಐರಾಜಾಜಿನಗರ,ಬೌರಿಂಗ್ ಆಸ್ಪತ್ರೆ,ಜಯನಗರ ಸರ್ಕಾರಿ ಆಸ್ಪತ್ರೆ,ಸಿವಿರಾಮನ್ ನಗರ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಗೆ ಶ್ರೀಮುರುಳಿ ಊಟ ಹಾಗೂ ತಿಂಡಿ ಒದಗಿಸುತ್ತಿದ್ದಾರೆ.

ಊಟದ ಜೊತೆಗೆ ಸಿಬ್ಬಂದಿಗೆ ಸ್ವಚ್ಛ ಕುಡಿಯುವ ನೀರನ್ನು ಒದಗಿಸುತ್ತಿದ್ದಾರೆ. ಕೇವಲ ಶ್ರೀಮುರುಳಿ ಮಾತ್ರವಲ್ಲದೇ ನಟಿ ರಾಗಿಣಿ ಕೂಡ ಕೊರೋನಾ ಡ್ಯೂಟಿಯಲ್ಲಿ ತೊಡಗಿರುವ ಪೊಲೀಸರಿಗೆ, ಸ್ಮಶಾನ ಸಿಬ್ಬಂದಿಗೆ ಊಟ ಒದಗಿಸುತ್ತಿದ್ದಾರೆ.

ಒಟ್ಟಿನಲ್ಲಿ ಕೊರೋನಾ ಸಂಕಷ್ಟದಲ್ಲಿರುವ ಜನರಿಗೆ, ರೋಗಿಗಳಿಗೆ ಸ್ಯಾಂಡಲ್ ವುಡ್ ಹಾಗೂ ಬಾಲಿವುಡ್ ನಟ-ನಟಿಯರು ನೆರವಾಗುತ್ತಿದ್ದಾರೆ.
