ಕಣ್ಣೇ ಅದಿರಿಂದಿ ಎನ್ನುತ್ತ ಮೋಡಿ ಮಾಡಿದ ಮಂಗ್ಲಿ…! ಕಪ್ಪುಸುಂದರಿ ಈಗ ಯುವಜನತೆಯ ಕ್ರಶ್ …!!

ದರ್ಶನ್ ಅಭಿನಯದ ಬಹುನೀರಿಕ್ಷಿತ ಚಿತ್ರ ರಾಬರ್ಟ್ ಬಿಡುಗಡೆಗೆ ಕೆಲವೇ ದಿನ ಇರುವಾಗಲೇ ಸಖತ್ ಹವಾ ಸೃಷ್ಟಿಸಿತ್ತು. ಇದೀಗ  ಈ ಚಿತ್ರದ ಕಣ್ಣು ಹೊಡಿಯಾಕ್ ಹಾಡಿನ ತೆಲುಗು ವರ್ಸನ್ ಹಾಗೂ ಆ ಹಾಡಿನ ಗಾಯಕಿ ಅಕ್ಷರಷಃ ಸೋಷಿಯಲ್ ಮೀಡಿಯಾದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ.

ಹೈದ್ರಾಬಾದ್ ನಲ್ಲಿ ನಡೆದ ರಾಬರ್ಡ್ ತೆಲುಗು ವರ್ಸನ್ ರಿಲೀಸ್ ಇವೆಂಟ್ ನಲ್ಲಿ ಕಣ್ಣು ಹೊಡಿಯಾಕ್ ಹಾಡಿನ ತೆಲುಗು ವರ್ಸನ್, ಕಣ್ಣೇ ಅದಿರಿಂದಿ ಹಾಡನ್ನು ಗಾಯಕಿ ಮಂಗ್ಲಿ ಪ್ರಸ್ತುತ ಪಡಿಸಿದರು. ಅಲ್ಲಿಂದ ಮಂಗ್ಲಿ ಹಾಗೂ ಕಣ್ಣೇ ಅದಿರಿಂದಿ ಹಾಡು ಹೊಸ ಅಲೆಯನ್ನೇ ಸೃಷ್ಟಿಸಿದ್ದು, ಸೋಷಿಯಲ್ ಮೀಡಿಯಾ, ಟಿವಿ,ಮೊಬೈಲ್ ಹೀಗೆ ಎಲ್ಲೆಡೆ ಮಂಗ್ಲಿ ಮೋಡಿ ಆವರಿಸಿಕೊಂಡಿದೆ.

ಮಂಗ್ಲಿ ಮೋಹಕ ಧ್ವನಿಗೆ, ಕಪ್ಪು ವರ್ಣದ ಸೌಂದರ್ಯಕ್ಕೆ ಯುವಜನತೆ ಮರುಳಾಗಿದ್ದು, ಡಿಪಿ,ಸ್ಟೇಟಸ್ ಹೀಗೆ ಎಲ್ಲೆಡೆ ಮಂಗ್ಲಿ ಕಾಣಸಿಗುತ್ತಿದ್ದಾರೆ. ಅಷ್ಟೇ ಅಲ್ಲ ಗೂಗಲ್ ನಲ್ಲಿ ಮಂಗ್ಲಿಯ ಹಿನ್ನೆಲೆಗಾಗಿ ಹುಡುಕಾಟವೂ ಆರಂಭಗೊಂಡಿದೆ.

ಬಂಜಾರಾ ಸಮುದಾಯದ ಹೆಣ್ಣುಮಗಳು ಮಂಗ್ಲಿ ಶಾಲಾ ದಿನಗಳಿಂದಲೂ ಹಾಡು,ನೃತ್ಯ ಹೀಗೆ ಸಾಂಸ್ಕೃತಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದು, ಈಗ ರಾಬರ್ಟ್ ಚಿತ್ರದ ಕಣ್ಣೇ ಅದಿರಿಂದಿ ಮಂಗ್ಲಿಗೆ ಜೀವಮಾನದ ಅತಿದೊಡ್ಡ ಹೆಸರು ತಂದುಕೊಟ್ಟಿದೆ.

ಅದೃಷ್ಟ ಹಾಗೂ ಜನಪ್ರಿಯತೆ ಅನ್ನೋದು ಒಂದು ರೀತಿ ಬೆಳಕಿದ್ದಂತೆ. ಅದು ಯಾವಾಗ,ಯಾರನ್ನು ಹೇಗೆ ಬೆಳಗಿಸುತ್ತೋ ಗೊತ್ತಿಲ್ಲ.  ಈ ಮಾತಿಗೆ ಮಂಗ್ಲಿ ಮತ್ತೊಮ್ಮೆ ಸಾಕ್ಷಿಯಾಗಿದ್ದಾರೆ.

ನಿನ್ನೆ ಮೊನ್ನೆಯವರೆಗೆ ತೆರೆಮರೆಯಲ್ಲಿದ್ದ ಮಂಗ್ಲಿ ರಾಬರ್ಟ್ ಸಾಂಗ್ ಮೂಲಕ ಒಮ್ಮೆಲೆ ಜನಪ್ರಿಯತೆಯ ಶಿಖರ ಏರಿದ್ದಾರೆ.

Comments are closed.