ಶಾಲೆಗೆ ರಜೆಯಿದ್ದರೂ ಶಿಕ್ಷಕರಿಗೆ ತಪ್ಪಿಲ್ಲ ಸಜೆ : ಕೊರೊನಾ ಭೀತಿಯಲ್ಲಿದ್ದಾರೆ ಶಿಕ್ಷಕ ಸಮೂಹ

0

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಸರಕಾರ ಹಲವು ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಶಿಕ್ಷಣ ಇಲಾಖೆ ಶಾಲೆಗಳಿಗೆ ಒಂದು ವಾರಗಳ ಕಾಲ ರಜೆ ಘೋಷಿಸಿದ್ರೆ, ಕಾಲೇಜು ಶಿಕ್ಷಣ ಇಲಾಖೆ 15 ದಿನಗಳ ಕಾಲ ರಜೆ ಘೋಷಿಸಿದೆ. ಆದರೆ ಶಾಲೆಗಳಿಗೆ ರಜೆಯಿದ್ರೂ ಶಿಕ್ಷಕರು ಮಾತ್ರ ಶಾಲೆಗೆ ಹೋಗೊ ಸಂದಿಗ್ದತೆಗೆ ಸಿಲುಕಿದ್ದಾರೆ. ರಾಜ್ಯ ಸರಕಾರ ನಿರ್ಧಾರದಿಂದಾಗಿ ಶಿಕ್ಷಕರು ಇದೀಗ ಕೊರೊನಾ ಆತಂಕಕ್ಕೆ ಒಳಗಾಗಿದ್ದಾರೆ.

ಸಾಮಾನ್ಯವಾಗಿ ಶಾಲೆಗಳಿಗೆ ರಜೆ ಘೋಷಣೆಯಾದಾಗ ಮಕ್ಕಳ ಜೊತೆಗೆ ಶಿಕ್ಷಕರು ರಜೆಯಲ್ಲಿರುತ್ತಾರೆ. ಆದರೆ ಇದೇ ಮೊದಲ ಬಾರಿಗೆ ಶಾಲೆಗೆ ರಜೆಯಿದ್ರೂ ಶಿಕ್ಷಕರು ಮಾತ್ರ ಶಾಲೆಗೆ ಹೋಗಬೇಕಾದ ಸ್ಥಿತಿ ಬಂದೊದಗಿದೆ. ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರಕಾರ ಮುನ್ನೆಚ್ಚರಿಕೆಯ ಕ್ರಮವನ್ನು ಕೈಗೊಂಡು 1 ರಿಂದ 6 ನೇ ತರಗತಿ ವರೆಗಿನ ಮಕ್ಕಳಿಗೆ ಪರೀಕ್ಷೆಯನ್ನೇ ರದ್ದು ಮಾಡಿ ಬೇಸಿಗೆ ರಜೆ ಘೋಷಣೆ ಮಾಡಿತ್ತು. ಆದ್ರೆ 7 ರಿಂದ 9ನೇ ತರಗತಿಯ ಮಕ್ಕಳಿಗೆ ಸ್ಟಡಿ ರಜೆ ಘೋಷಣೆ ಮಾಡಿ ಪೋಷಕರನ್ನು ಗೊಂದಲಕ್ಕೆ ಸಿಲುಕಿಸಿತ್ತು.

ಕೊನೆಗೆ ಪೋಷಕರ ಆಕ್ರೋಶಕ್ಕೆ ಮಣಿದ ಶಿಕ್ಷಣ ಇಲಾಖೆ 7,8 ಮತ್ತು 9 ನೇ ತರಗತಿ ವರೆಗಿನ ಮಕ್ಕಳಿಗೆ ಪರೀಕ್ಷೆಯನ್ನು ಮುಂದೂಡಿದೆ. ಆದರೆ ಪರೀಕ್ಷೆಯನ್ನು ಯಾವಾಗ ನಡೆಸಬೇಕೆನ್ನುವ ಕುರಿತು ಮಾಹಿತಿ ನೀಡಿಲ್ಲ. ಹೀಗಾಗಿ ಶಿಕ್ಷಕರು ಮತ್ತು ಮಕ್ಕಳು ಅತಂತ್ರ ಪರಿಸ್ಥಿತಿಯನ್ನು ಸಿಲುಕಿದ್ದಾರೆ. ಆದರೆ ಕೊರೊನಾ ಎಲ್ಲೆಡೆ ವ್ಯಾಪಿಸುತ್ತಿರೋ ಬೆನ್ನಲ್ಲೇ ಶಿಕ್ಷಕರು ಕೆಲಸವಿಲ್ಲದ್ದರೂ ಶಾಲೆಗೆ ಹೋಗುವ ಅನಿವಾರ್ಯತೆಯಲ್ಲಿದ್ದಾರೆ.

ಶಾಲಾ, ಕಾಲೇಜುಗಳ ಮಕ್ಕಳಿಗೆ ರಜೆಯನ್ನು ಘೋಷಿಸಿರೋ ಸರಕಾರ ಕೊರೊನಾ ತಡೆಗೆ ಮಕ್ಕಳನ್ನು ಮನೆಯಲ್ಲಿಯೇ ಇರುವಂತೆಯೂ ಸೂಚಿಸಿದೆ. ಆದರೆ ಶಿಕ್ಷಣ ಇಲಾಖೆಯ ಅಧಿಕಾರಿಗಳ ಒತ್ತಡಕ್ಕೆ ಮಣಿದ ಕೆಲ ಶಾಲೆಗಳ ಶಿಕ್ಷಕರು ಎಸ್ಎಸ್ ಎಲ್ ಸಿ ಕಲಿಕೆಯಲ್ಲಿ ಹಿಂದುಳಿದಿರೋ ಮಕ್ಕಳನ್ನು ಶಾಲೆಗೆ ಕರೆಯಿಸಿಕೊಂಡು ಪಾಠ ಬೋಧನೆ ಮಾಡುತ್ತಿದ್ದಾರೆ. ಕೊರೊನಾ ಭೀತಿಯಿಂದ ಮಕ್ಕಳು ಮಾತ್ರ ಶಾಲೆಗೆ ಬರೋದಕ್ಕೆ ಹಿಂದೇಟು ಹಾಕುತ್ತಿದ್ದಾರೆ.

ನೆರೆಯ ಕೇರಳ ರಾಜ್ಯದಲ್ಲಿ ಕೊರೊನಾ ಸೋಂಕು ವ್ಯಾಪಿಸುತ್ತಲೇ 1 ರಿಂದ 9ನೇ ತರಗತಿವರೆಗಿನ ಮಕ್ಕಳಿಗೆ ಪರೀಕ್ಷೆಯನ್ನೇ ರದ್ದುಗೊಳಿಸಿ ಬೇಸಿಗೆ ರಜೆ ಆರಂಭ ಮಾಡಿತ್ತು. ಆದರೆ ಕರ್ನಾಟಕ ಸರಕಾರ ದಿನಕ್ಕೊಂದು ನಿಯಮಗಳನ್ನು ಜಾರಿಗೆ ತರುತ್ತಿದೆ. ಅದೇ ರೀತಿಯಲ್ಲಿಯೇ ರಾಜ್ಯದಲ್ಲಿಯೂ ಘೋಷಣೆ ಮಾಡುವ ಕೂಗು ಕೇಳಿಬರುತ್ತಿದೆ. ಇನ್ನು ಸಿಎಂ ಒಂದು ಘೋಷಣೆ ಮಾಡಿದ್ರೆ ಶಿಕ್ಷಣ ಇಲಾಖೆ ಬೇರೆಯದೇ ಆದೇಶವನ್ನು ಹೊರಡಿಸಿ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರನ್ನು ಗೊಂದಲಕ್ಕೆ ಸಿಲುಕಿಸುತ್ತಿದೆ ಅನ್ನೋ ಮಾತುಗಳು ಕೇಳಿಬರುತ್ತಿವೆ.

ಈ ನಡುವಲ್ಲೇ ಕೊರೊನಾ ರೋಗ ಹರಡದಂತೆ ಶಿಕ್ಷಣ ಮುನ್ನೆಚ್ಚರಿಕೆಯ ಕ್ರಮವಾಗಿ ಶಾಲಾ ಮಕ್ಕಳಿಗೆ ನೀಡಿರೋ ರಜೆಯನ್ನು ಶಿಕ್ಷಕರಿಗೂ ವಿಸ್ತರಿಸುವಂತೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಆಗ್ರಹಿಸಿದೆ. ಮಾತ್ರವಲ್ಲ ಈ ಕುರಿತು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಶೋಕ್ ಸಜ್ಜನ, ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಉಪ್ಪಿನ ಅವರು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಾಗಿರೋ ಕೆ.ಜಿ.ಜಗದೀಶ್ ಅವರಿಗೆ ಮನವಿಯನ್ನು ಮಾಡಿದೆ.

ಕೊರೊನಾ ಮುನ್ನೆಚ್ಚರಿಕೆಯ ಕ್ರಮವಾಗಿ ಸರಕಾರಿ ಹಾಗೂ ಅನುದಾನಿತ ಶಾಲೆಗಳ 1 ರಿಂದ 6ನೇ ತರಗತಿಗಳಿಗೆ ಮಾರ್ಚ್ 13 ರಿಂದ ಹಾಗೂ 7-9 ನೇ ತರಗತಿಗಳಿಗೆ ಮಾರ್ಚ್ 23ರಿಂದ ಬೇಸಿಗೆ ರಜೆ ನೀಡಲು ಆದೇಶಿಸಿತ್ತು. ಆದರೆ ಶಿಕ್ಷಕರು ಶಾಲೆಗಳಿಗೆ ಹಾಜರಾಗಬೇಕಾ, ಬೇಡವೇ ಅನ್ನೋ ಬಗ್ಗೆ ಸ್ಪಷ್ಟನೆ ನೀಡಿಲ್ಲ. ಆದರೆ ಕೆಲವು ಜಿಲ್ಲೆಗಳ ಜಿಲ್ಲಾ ಶಿಕ್ಷಣಾಧಿಕಾರಿಗಳು ಶಾಲೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಹೀಗಾಗಿ ಶಿಕ್ಷಕರು ಶಾಲೆಗಳಿಗೆ ಹಾಜರಾಗುತ್ತಿದ್ದಾರೆ. ಶಿಕ್ಷಕರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡರೆ ಮಕ್ಕಳಿಗೂ ಸೋಂಕು ವ್ಯಾಪಿಸೋ ಸಾಧ್ಯತೆಯಿದೆ.

ಮಾತ್ರವಲ್ಲ ಮಾರ್ಚ್ ಅಂತ್ಯದಲ್ಲಿ ಎಸ್ಎಸ್ಎಲ್ ಸಿ ಪರೀಕ್ಷೆ, ಜನಗಣತಿ, ಮೌಲ್ಯಾಂಕನ ಸೇರಿದಂತೆ ಹಲವು ಕಾರ್ಯಗಳಲ್ಲಿ ಶಿಕ್ಷಕರು ಅನಿವಾರ್ಯವಾಗಿ ಪಾಲ್ಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಐಟಿ ಕಂಪೆನಿಗಳ ನೌಕರರಂತೆ ಶಿಕ್ಷಕರು ಕೂಡ ಮನೆಯಿಂದಲೇ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸುವಂತೆ ಶಿಕ್ಷಕರು ಹಾಗೂ ಕುಟುಂಬಸ್ಥರು ಆಗ್ರಹಿಸುತ್ತಿದ್ದಾರೆ. ಇನ್ನಾದ್ರೂ ಸರಕಾರ ಹಾಗೂ ಶಿಕ್ಷಣ ಸಚಿವರು ಎಚ್ಚೆತ್ತು ಈ ಕುರಿತು ಸೂಕ್ತ ಕ್ರಮಕೈಗೊಳ್ಳಬೇಕಿದೆ.

Leave A Reply

Your email address will not be published.