ತಮಿಳುನಾಡು ರಾಜಕೀಯದಲ್ಲಿ ಅಧಿಕಾರಿಗಳ ಫೈಟ್…! ಕೈ ತೆಕ್ಕೆಗೆ ಜಾರಿದ ಮಾಜಿ ಐಎಎಸ್…!

ತಮಿಳುನಾಡು: 2021 ರ ಮೇ ನಲ್ಲಿ ತಮಿಳುನಾಡಿನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ ಮಾಜಿ ಐಎಎಸ್ ಮತ್ತು ಮಾಜಿ ಐಪಿಎಸ್ ನಡುವಿನ ಫೈಟ್ ಗೆ ವೇದಿಕೆ ಒದಗಿಸುವ ಮುನ್ಸೂಚನೆ ನೀಡಿದ್ದು, ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಬಳಿಕ ಇದೀಗ ಮಾಜಿ ಐಎಎಸ್ ಸಸಿಕಾಂಥ್ ಸೇಂಥಿಲ್ ರಾಜಕೀಯ ಪ್ರವೇಶಿಸಿದ್ದಾರೆ.

ಕರ್ನಾಟಕದಲ್ಲಿ ಹಾಗೂ ದೇಶದಲ್ಲಿ ಅಧಿಕಾರಿಗಳಿಗೆ  ಮುಕ್ತವಾಗಿ ಕೆಲಸ ಮಾಡಲು ಸೂಕ್ತವಾದ ಅವಕಾಶವಿಲ್ಲ. ರಾಜಕೀಯ ಹಸ್ತಕ್ಷೇಪ ಅಧಿಕಾರಿಗಳ ಉಸಿರುಗಟ್ಟಿಸುತ್ತಿದೆ ಎಂಬರ್ಥದಲ್ಲಿ  ಮಾತನಾಡಿ ಐಎಎಸ್ ಗೆ ರಾಜೀನಾಮೆ ನೀಡಿದ್ದ ದಕ್ಷಿಣ ಕನ್ನಡದ ಮಾಜಿ ಡಿಸಿ ಸಸಿಕಾಂಥ್ ಸೇಂಥಿಲ್ ರಾಜೀನಾಮೆಯ ವರ್ಷದ ಬಳಿಕ ರಾಜಕೀಯಕ್ಕೆ ಧುಮುಕ್ಕಿದ್ದಾರೆ.

ತಮಿಳುನಾಡಿನಲ್ಲಿ ಸಕ್ರಿಯ ರಾಜಕೀಯ ಜೀವ ಆರಂಭಿಸಲಿರುವ ಸೇಂಥಿಲ್, ಅದಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ಆಯ್ಕೆಮಾಡಿಕೊಂಡಿದ್ದಾರೆ. ತಮಿಳುನಾಡಿನ ಚುನಾವಣಾ ಉಸ್ತುವಾರಿ ದಿನೇಶ್ ಗುಂಡೂರಾವ್ ಸಮ್ಮುಖದಲ್ಲಿಕಾಂಗ್ರೆಸ್ ಸೇರ್ಪಡೆಗೊಳ್ಳಲಿರುವ ಸೇಂಥಿಲ್ ಮುಂಬರುವ ಚುನಾವಣೆಗೂ ಸ್ಪರ್ಧಿಸಲಿದ್ದಾರೆ ಎನ್ನಲಾಗುತ್ತಿದೆ.

2009 ರ ಬ್ಯಾಚ್ ನ  ಐಎಎಸ್ ಅಧಿಕಾರಿಯಾಗಿದ್ದ ಸೇಂಥಿಲ್ 2017 ರಿಂದ 2019 ರ ತನಕ ದಕ್ಷಿಣ ಕನ್ನಡದ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದಾಗಲೇ ಸೇಂಥಿಲ್ ರಾಜೀನಾಮೆ ಸಲ್ಲಿಸಿದ್ದರು. ಸೇಂಥಿಲ್ ರಾಜೀನಾಮೆ ಹಿಂದೆ ವಿವಿಧ ಮಾಫಿಯಾಗಳ ಒತ್ತಡವಿದೆ ಎಂಬ ಮಾತು ಕೇಳಿಬಂದಿತ್ತು.

ಸಧ್ಯ ತಮಿಳುನಾಡಿನ ರಾಜಕಾರಣ ತಾರಕಕ್ಕೇರಿದ್ದು, ಚುನಾವಣೆಗೆ 7 ತಿಂಗಳು ಇರುವಾಗಲೇ ಪಕ್ಷಗಳು ರಾಜಕೀಯ ಮೇಲಾಟ ಆರಂಭಿಸಿವೆ.  ಬಿಜೆಪಿ ಕೂಡ ತನ್ನ ಶಕ್ತಿ ವೃದ್ಧಿಸಿಕೊಂಡಿದ್ದು, ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಹಾಗೂ ನಟಿ ಖುಷ್ಬೂ ಕೂಡ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.

ಪ್ರಸಕ್ತ ತಮಿಳುನಾಡಿನ ರಾಜಕಾರಣದಲ್ಲಿ ಕರ್ನಾಟಕದ ಪ್ರಭಾವ ಜೋರಾಗಿದ್ದು, ಕರ್ನಾಟಕದಲ್ಲಿ ಸೇವೆಯಲ್ಲಿದ್ದಾಗಲೇ ರಾಜೀನಾಮೆ ಮಾಡಿದ ಐಎಎಸ್ ಹಾಗೂ ಐಪಿಎಸ್ ಗಳು ಕಾಂಗ್ರೆಸ್, ಬಿಜೆಪಿ ಸೇರಿದ್ದಾರೆ. ಇನ್ನೊಂದೆಡೆ ತಮಿಳುನಾಡಿನ ಚುನಾವಣಾ ಉಸ್ತುವಾರಿಯಾಗಿ ಕರ್ನಾಟಕದ ಮಾಜಿ ಸಚಿವರಾದ ಸಿ.ಟಿ.ರವಿ ಮತ್ತು ದಿನೇಶ್ ಗುಂಡೂರಾವ್ ಜವಾಬ್ದಾರಿ ಹೊತ್ತಿದ್ದಾರೆ. ಒಟ್ಟಿನಲ್ಲಿ ತಮಿಳುನಾಡಿನ ರಾಜಕಾರಣದಲ್ಲಿಮಾಜಿ ಅಧಿಕಾರಿಗಳು ಫೈಟ್ ಜೋರಾಗುವ ಲಕ್ಷಣವಿದೆ.

Comments are closed.