ತಲೈವಾ ರಾಜಕೀಯದಿಂದ ದೂರ ಉಳಿದಿದ್ದರಿಂದ ಬೇಸರದಲ್ಲಿದ್ದ ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿಗಳಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದೆ. ರಜನಿಕಾಂತ್ ಗೆ ಸಿನಿಮಾರಂಗದ ಜೀವಮಾನಸಾಧನೆಗಾಗಿ ಸಿನಿಮಾ ರಂಗದ ಅತ್ಯುನ್ನತ ಗೌರವ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆಯಾಗಿದೆ.

ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಟ್ವೀಟ್ ಮೂಲಕ ಪ್ರಶಸ್ತಿ ವಿಚಾರವನ್ನು ಹಂಚಿಕೊಂಡಿದ್ದು, ಭಾರತ ಚಿತ್ರರಂಗದ ಇತಿಹಾಸದಲ್ಲಿಯೇ ಒಬ್ಬ ಅತ್ಯುತ್ತಮ ನಟರಾದ ರಜನಿಕಾಂತ್ ಅವರಿಗೆ 2019-20 ನೇ ಸಾಲಿನ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಆಯ್ಕೆಮಾಡಲು ಸಂತೋಷ ಎನ್ನಿಸುತ್ತಿದೆ ಎಂದಿದ್ದಾರೆ.

ನಟ,ನಿರ್ಮಾಪಕ ಹಾಗೂ ಚಿತ್ರಕಥೆಕಾರರಾಗಿರುವ ಸೂಪರ್ ಸ್ಟಾರ್ ರಜನಿಕಾಂತ್ ಕೊಡುಗೆ ಚಿತ್ರರಂಗಕ್ಕೆ ಅಪಾರವಿದೆ. ಅವರಿಗೆ ಈ ಪ್ರಶಸ್ತಿ ಸಂದಿರೋದು ಖುಷಿ ತಂದಿದೆ ಎಂದಿದ್ದಾರೆ. ಇನ್ನು ಕೇಂದ್ರ ಸಚಿವರ ಈ ವಿಚಾರ ಪ್ರಕಟಿಸುತ್ತಿದ್ದಂತೆ ತಲೈವಾ ಅಭಿಮಾನಿಗಳು ಫುಲ್ ಖುಷಿಯಾಗಿದ್ದು ಶುಭಾಶಯ ಕೋರುತ್ತಿದ್ದಾರೆ.

40 ವರ್ಷಗಳ ತಮಿಳು,ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಅಪಾರ ಪ್ರಮಾಣದ ಅಭಿಮಾನಿಗಳ ಪ್ರೀತಿ-ಗೌರವ ಗಳಿಸಿ ದುಡಿದ ರಜನಿಕಾಂತ್ ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸಂದಿರುವುದನ್ನು ಚಿತ್ರರಂಗದ ಗಣ್ಯರು ಸ್ವಾಗತಿಸಿದ್ದು, ಅಭಿನಂದಿಸಿದ್ದಾರೆ.
ಸಿನಿಮಾರಂಗದ ಜೀವಮಾನದ ಸಾಧನೆಗಾಗಿ ಭಾರತೀಯ ಸಿನಿಮಾರಂಗದ ಪಿತಾಮಹ ದಾದಾಸಾಹೇಬ್ ಫಾಲ್ಕೆ ಹೆಸರಿನಲ್ಲಿ ಈ ಪ್ರಶಸ್ತಿ ನೀಡಲಾಗುತ್ತಿದ್ದು, 1969 ರಿಂದ ಪ್ರಶಸ್ತಿ ನೀಡುತ್ತ ಬರಲಾಗಿದೆ. ಪ್ರಶಸ್ತಿ, ಸ್ವರ್ಣಕಮಲ ಪದಕ,10 ಲಕ್ಷ ರೂ ನಗದು ಹಾಗೂ ಶಾಲು ಒಳಗೊಂಡಿರುತ್ತದೆ.

ತಮಿಳುನಾಡಿನ ವಿಧಾನಸಭೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕಿದ್ದ ಸೂಪರ್ ಸ್ಟಾರ್ ರಜನಿಕಾಂತ್ ಪಕ್ಷದ ಚಟುವಟಿಕೆ ಆರಂಭಿಸುವ ಹೊತ್ತಿನಲ್ಲೇ ಅನಾರೋಗ್ಯಕ್ಕಿಡಾಗಿ ಚುನಾವಣೆ ಹಾಗೂ ರಾಜಕಾರಣದಿಂದ ದೂರ ಇರುವುದಾಗಿ ಘೋಷಿಸಿದ್ದರು. ಅದರ ಬೆನ್ನಲ್ಲೆ ಸೂಪರ್ ಸ್ಟಾರ್ ಅಭಿಮಾನಿಗಳಿಗೆ ಈ ಸಿಹಿಸುದ್ದಿ ಸಿಕ್ಕಿದಂತಾಗಿದೆ.