ಏಕರೂಪ ಶುಲ್ಕ ಜಾರಿಯಾದ್ರೆ ಶಿಕ್ಷಕರ ವೇತನಕ್ಕೆ ಬೀಳುತ್ತೆ ಕತ್ತರಿ ..!

ಬೆಂಗಳೂರು : ರಾಜ್ಯದಲ್ಲಿ ಈಗಾಗಲೇ ಎಸ್ಎಸ್ಎಲ್ ಸಿ, ದ್ವಿತೀಯ ಪಿಯುಸಿ ತರಗತಿಗಳು ಪುನರಾರಂಭಗೊಂಡಿವೆ. ಉಳಿದ ತರಗತಿಗಳ ಆರಂಭಕ್ಕೂ ಸರಕಾರ ಸಿದ್ದತೆ ನಡೆಸುತ್ತಿದೆ. ಈ ನಡುವಲ್ಲೇ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಹಾಗೂ ಪೋಷಕರ ನಡುವೆ ಶುಲ್ಕ ವಿಚಾರವಾಗಿ ಚರ್ಚೆ ಶುರುವಾಗಿದೆ. ಸರಕಾರ ಶಾಲಾ ಶುಲ್ಕದಲ್ಲಿ ಕಡಿತ ಮಾಡಲು ಚಿಂತನೆ ನಡೆಸಿದೆ. ಆದರೆ ಖಾಸಗಿ ಶಾಲಾ ಆಡಳಿತ ಮಂಡಳಿಗಳು ಶಿಕ್ಷಕರ ವೇತನ ಕಡಿತದ ಎಚ್ಚರಿಕೆ ನೀಡಿವೆ.

ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ರಾಜ್ಯದಲ್ಲಿನ್ನು ಶೈಕ್ಷಣಿಕ ವರ್ಷ ಇನ್ನೂ ಆರಂಭವಾಗಿಲ್ಲ. ಆರ್ಥಿಕ ಸಂಕಷ್ಟದ ನಡುವಲ್ಲೇ ಕೆಲ ಖಾಸಗಿ ಶಾಲೆಗಳು ಪೋಷಕರಿಂದ ಬಲವಂತದ ಶುಲ್ಕ ವಸೂಲಿಗೆ ಮುಂದಾಗಿವೆ. ರಾಜ್ಯ ಸರಕಾರದ ಸೂಚನೆಯಂತೆ ಈಗಾಗಲೇ 2 ಹಂತದಲ್ಲಿ ಪೋಷಕರು ಶುಲ್ಕ ಪಾವತಿ ಮಾಡಿದ್ದಾರೆ. ಆದರೆ ಈ ಬಾರಿ ತರಗತಿಗಳು ನಡೆದಿಲ್ಲವಾದ್ದರಿಂದ ಶಾಲಾ ಶುಲ್ಕದಲ್ಲಿ ಕಡಿತ ಮಾಡಬೇಕೆಂದು ಪೋಷಕರು ರಾಜ್ಯಕ್ಕೆ ಒತ್ತಾಯಿಸುತ್ತಿದ್ದಾರೆ.

ರಾಜ್ಯ ಸರಕಾರ ಪೋಷಕರ ಒತ್ತಡಕ್ಕೆ ಮಣಿದು ಶಾಲಾ ಶುಲ್ಕದಲ್ಲಿ ಶೇಕಡ 25 ರಿಂದ 30 ರಷ್ಟು ಶುಲ್ಕ ಕಡಿತ ಮಾಡಲು ಚಿಂತನೆ ನಡೆಸಿದೆ. ಆದರೆ, ಶುಲ್ಕ ಕಡಿತ ಮಾಡುವ ಸರ್ಕಾರದ ನಿರ್ಧಾರಕ್ಕೆ ಖಾಸಗಿ ಶಾಲೆಗಳಿಂದ ವಿರೋಧ ವ್ಯಕ್ತವಾಗಿದೆ ಎನ್ನಲಾಗಿದೆ. ಏಕರೂಪದಲ್ಲಿ ಶುಲ್ಕ ಕಡಿತ ಮಾಡಿದಲ್ಲಿ ಶಿಕ್ಷಕರ ವೇತನ ಕಡಿತಗೊಳಿಸುವ ಬಗ್ಗೆ ಖಾಸಗಿ ಶಾಲೆ ಆಡಳಿತ ಆಡಳಿತ ಮಂಡಳಿಗಳು ಸರ್ಕಾರಕ್ಕೆ ತಿಳಿಸಿವೆ ಎಂದು ಹೇಳಲಾಗಿದೆ.

ಒಂದು ವೇಳೆ ಸರ್ಕಾರ ಏಕರೂಪದಲ್ಲಿ ಶುಲ್ಕ ಕಡಿತ ಮಾಡಿದರೆ ಅನಿವಾರ್ಯವಾಗಿ ಶಿಕ್ಷಕರ ವೇತನ ಕಡಿತ ಮಾಡಲಾಗುವುದು ಎಂದು ಶಿಕ್ಷಕರಿಗೆ ಖಾಸಗಿ ಶಾಲೆಗಳ ಆಡಳಿತ ಮಂಡಳಿ ವತಿಯಿಂದ ಈಗಾಗಲೇ ಮಾಹಿತಿ ನೀಡಲಾಗಿದೆ. ಕೊರೋನಾ ಕಾರಣದಿಂದ ಸಂಕಷ್ಟದಲ್ಲಿರುವ ಖಾಸಗಿ ಶಾಲೆ ಆಡಳಿತ ಮಂಡಳಿಗಳು, ಶಿಕ್ಷಕರಿಗೆ ಸರಿಯಾಗಿ ವೇತನ ನೀಡುತ್ತಿಲ್ಲ.

ಕೆಲವು ಶಾಲೆಗಳಲ್ಲಿ ಅಲ್ಪಸ್ವಲ್ಪ ವೇತನ ನೀಡಲಾಗುತ್ತಿದೆ. ಮತ್ತೆ ಕೆಲವು ಶಾಲೆ ಶಿಕ್ಷಕರಿಗೆ ವೇತನ ನೀಡಿಲ್ಲ. ಈಗಾಗಲೇ ಶಾಲಾ ಶುಲ್ಕವನ್ನು ಕಡಿತ ಮಾಡಿದ್ದು, ಒಂದು ವೇಳೆ ಏಕರೂಪವಾಗಿ ಶುಲ್ಕ ಕಡಿತ ಮಾಡಿದರೆ ಶಿಕ್ಷಕರ ವೇತನವನ್ನು ಕಡಿತಗೊಳಿಸುವ ಬಗ್ಗೆ ಶಾಲಾ ಆಡಳಿತ ಮಂಡಳಿಯವರು ನಿರ್ಧರಿಸಿದ್ದಾರೆ ಎನ್ನಲಾಗಿದೆ.

Comments are closed.