Bank Locker ನಲ್ಲಿ ಇಟ್ಟ ವಸ್ತು ಕಳೆದು ಹೋದ್ರೆ 100 ಪಟ್ಟು ಪರಿಹಾರ ಸಿಗುತ್ತಾ? ಯಾವಾಗ? ನಿಯಮಗಳೇನು?

Bank Locker : ಜನಸಾಮಾನ್ಯರು ತಮ್ಮ ಅಮೂಲ್ಯ ವಸ್ತುಗಳನ್ನು ಸುರಕ್ಷಿತವಾಗಿ ಇರಿಸಿಕೊಳ್ಳಲು ಬ್ಯಾಂಕ್‌ ಲಾಕರ್‌ನ ಮೊರೆ ಹೋಗುತ್ತಿರುವುದು ಇಂದಿನ ದಿನಗಳನ್ನು ಸರ್ವೇಸಾಮಾನ್ಯ. ನಿತ್ಯದ ಜಂಜಾಟದಲ್ಲಿ ಬೆಲೆಬಾಳುವ ವಸ್ತುಗಳನ್ನು ಕಳ್ಳಕಾಕರಿಂದ ಕಾಳಜಿ ಮಾಡಿಕೊಳ್ಳುತ್ತಾ ಕೂರುವುದು ಕಷ್ಟ ಎಂದೇ ಈ ಉಪಾಯ ಕಂಡುಕೊಂಡಿದ್ದಾರೆ. ಆದರೆ ಸುರಕ್ಷಿತವೆಂದು ಪರಿಗಣಿಸಿ ವಾರ್ಷಿಕ ಶುಲ್ಕ ಪಾವತಿಸಿ ಬ್ಯಾಂಕ್‌ ಲಾಕರ್‌ನಲ್ಲಿಟ್ಟ ವಸ್ತು ಕಳೆದು ಹೋದರೆ? ಆಗ ಏನು ಮಾಡುವುದು? ಅದಕ್ಕೆ ಪರಿಹಾರವೇನು ಸಿಗುತ್ತದೆ? ಲಾಕರ್‌ನಲ್ಲಿ ಇರಿಸಲಾಗಿದ್ದ ವಸ್ತುಗಳು ಕಳೆದುಹೋದರೆ, ಲಾಕರ್‌ ಹೊಂದಿರುವವರಿಗೆ ವಾರ್ಷಿಕ ಶುಲ್ಕದ 100 ಪಟ್ಟು ಪರಿಹಾರ ನೀಡಬೇಕಾಗಬಹುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸೋಮವಾರ ಹೇಳಿದ್ದಾರೆ. ಸೋಮವಾರ ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು. ಗ್ರಾಹಕರು ಬ್ಯಾಂಕ್ ಲಾಕರ್‌ನಲ್ಲಿ ಯಾವು ವಸ್ತುಗಳನ್ನು ಇಟ್ಟಿರುತ್ತಾರೆ ಎಂಬುದು ಬ್ಯಾಂಕಿಗೆ ತಿಳಿದಿರುವುದಿಲ್ಲ. ಅದಕ್ಕಾಗಿ ಈ ಮಿತಿಯನ್ನು ನಿಗದಿಪಡಿಸಲಾಗಿದೆ ಎಂದು ಹೇಳಿದರು.

ಗ್ರಾಹಕರ ಹತ್ತಿರ ಲಾಕರ್‌ನಲ್ಲಿ ಇರಿಸಲಾಗಿರುವ ವಸ್ತುಗಳ ಬಗ್ಗೆ ಮಾಹಿತಿ ಕೇಳುವುದು ಬ್ಯಾಂಕಿಂಗ್‌ ಗೌಪ್ಯತಾ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಹೇಳಿದರು. ವಸ್ತುವಾರ ಮೌಲ್ಯಮಾಪನ ಅಥವಾ ವಿಮೆ ಸಾಧ್ಯವಾಗದ ಕಾರಣ ನಷ್ಟವನ್ನು ಸರಿದೂಗಿಸಲು ಪ್ರಮಾಣೀಕೃತ ಪರಿಹಾರ ಚೌಕಟ್ಟನ್ನು ಜಾರಿಗೆ ತರಲಾಗಿದೆ ಎಂದು ಅವರು ಹೇಳಿದರು.

ಈ ಪರಿಹಾರ ಯಾವ ಕಾರಣಕ್ಕೆ ಮಾತ್ರ ಸಿಗುತ್ತದೆ?

ಬ್ಯಾಂಕ್‌ ಲಾಕರ್‌ ನಿಯಮಗಳ ಪ್ರಕಾರ, ಬ್ಯಾಂಕಿನ ನಿರ್ಲಕ್ಷ, ಬ್ಯಾಂಕ್‌ನ ಉದ್ಯೋಗಿಗಳು ವಂಚನೆ ಎಸಗಿದರೆ, ಬೆಂಕಿ, ಕಳ್ಳತನ, ದರೋಡೆ, ಲೂಟಿಯಿಂದಾಗಿ ಲಾಕರ್‌ನ ವಸ್ತುಗಳು ಕಾಣೆಯಾದರೆ, ಆಗ ಲಾಕರ್ ಹೊಂದಿರುವವರಿಗೆ ವಾರ್ಷಿಕ ಶುಲ್ಕದ 100 ಪಟ್ಟು ಪರಿಹಾರ ಪಾವತಿಸಬೇಕಾಗುತ್ತದೆ.

ಉದಾಹರಣೆಗೆ, ಬ್ಯಾಂಕ್‌ ಒಂದು ಲಾಕರ್‌ಗೆ ವಾರ್ಷಿಕ 5,000 ರೂ. ಶುಲ್ಕ ವಿಧಿಸುತ್ತಿದ್ದರೆ, ಮೇಲಿನ ಕಾರಣಗಳಿಂದ ಲಾಕರ್‌ಗೆ ಹಾನಿಯಾಗಿದ್ದರೆ ಆಗ ಗ್ರಾಹಕರಿಗೆ 5,00,000 ರೂ. ಪರಿಹಾರವನ್ನು ನೀಡಬೇಕಾಗುತ್ತದೆ.

ಇದನ್ನೂ ಓದಿ: ಇಪಿಎಫ್‌ಒನ ಹೊಸ ಯೋಜನೆ: ಇನ್ಮುಂದೆ ಕಾರ್ಡ್‌, ಯುಪಿಐ ಬಳಸಿ ಸುಲಭವಾಗಿ ಹಣ ಹಿಂಪಡೆಯಬಹುದು

ಬ್ಯಾಂಕ್‌ ಲಾಕರ್‌ನಲ್ಲಿ ಏನು ಇಡುವುದು ಕಾನೂನುಬಾಹಿರ?

ನಗದು ಹಣ, ಶಸ್ತ್ರಾಸ್ತ್ರಗಳು, ಔಷಧಗಳು, ಸ್ಫೋಟಕಗಳು, ಹಾಳಾಗುವ ಮತ್ತು ವಿಕಿರಣಶೀಲ ವಸ್ತುಗಳು ಮತ್ತು ಅಪಾಯಕಾರಿ ಎಂದು ಪರಿಗಣಿಸಲಾದ ವಸ್ತುಗಳನ್ನು ಬ್ಯಾಂಕ್‌ ಲಾಕರ್‌ನಲ್ಲಿ ಇಡುವುದು ಕಾನೂನುಬಾಹಿರವಾಗಿದೆ.

 

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories