ಸಿಂಡ್, ಕಾರ್ಪ್ ಬ್ಯಾಂಕ್ ಇನ್ನು ನೆನಪು ಮಾತ್ರ : ಎ.1 ರಿಂದ ದೇಶದ 10 ಬ್ಯಾಂಕುಗಳ ವಿಲೀನ

0

ನವದೆಹಲಿ : ಕಾರ್ಪೋರೇಷನ್, ಸಿಂಡಿಕೇಟ್ ಬ್ಯಾಂಕುಗಳು ಇನ್ನು ನೆನಪು ಮಾತ್ರ. ಸಾರ್ವಜನಿಕ ವಲಯದ 10 ಬ್ಯಾಂಕ್‌ಗಳು ಎಪ್ರಿಲ್ 1ರಿಂದಲೇ ವಿಲೀನವಾಗಲಿದೆ.

ಬ್ಯಾಂಕ್‌ಗಳ ವಿಲೀನದ ಪರಿಣಾಮ ಕರ್ನಾಟಕದ ಕರಾವಳಿ ಮೂಲದ ಬ್ಯಾಂಕ್‌ಗಳು ಇತಿಹಾಸದ ಪುಟ ಸೇರುತ್ತಿವೆ. ಸಾರ್ವಜನಿಕ ಬ್ಯಾಂಕ್‌ಗಳ ಪೈಕಿ ಕೆನರಾ ಬ್ಯಾಂಕ್‌ ಮಾತ್ರ ಉಳಿದುಕೊಳ್ಳಲಿದೆ.

ಕರಾವಳಿಯಲ್ಲಿ ಹುಟ್ಟಿದ್ದ ರಾಷ್ಟ್ರೀಕೃತ ಬ್ಯಾಂಕುಗಳಾಗಿರುವ ವಿಜಯಾ ಬ್ಯಾಂಕ್‌, ಕಾರ್ಪೊರೇಷನ್‌ ಬ್ಯಾಂಕ್‌ ಮತ್ತು ಸಿಂಡಿಕೇಟ್‌ ಬ್ಯಾಂಕ್‌ ವಿಲೀನವಾಗಿವೆ.

ಕೇಂದ್ರ ಸರಕಾರ ಆರಂಭದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಅದರ ಸಹವರ್ತ ಬ್ಯಾಂಕುಗಳನ್ನು ವಿಲೀನ ಮಾಡಿತ್ತು. ನಂತರ ಬ್ಯಾಂಕ್ ಆಫ್ ಬರೋಡಾ, ದೇನಾ ಮತ್ತು ವಿಜಯಾ ಬ್ಯಾಂಕುಗಳನ್ನು ವಿಲೀನ ಗೊಳಿಸಿತ್ತು. ಇದೀಗ ಮೂರನೇ ಹಂತದಲ್ಲಿ ದೇಶದ 10 ಪ್ರಮುಖ ಬ್ಯಾಂಕುಗಳನ್ನು ವಿಲೀನಮಾಡುತ್ತಿದೆ.

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಜೊತೆಗೆ ಓರಿಯೆಂಟಲ್‌ ಬ್ಯಾಂಕ್‌ ಆಫ್‌ ಕಾಮರ್ಸ್‌ (ಒಬಿಸಿ) ಮತ್ತು ಯುನೈಟೆಡ್‌ ಬ್ಯಾಂಕ್‌ ಆಫ್‌ ಇಂಡಿಯಾ (ಯುಬಿಐ) ವಿಲೀನವಾಗಲಿದೆ. ಈ ಮೂರು ಬ್ಯಾಂಕುಗಳ ವಿಲೀನದಿಂದಾಗಿ ದೇಶದ ಎರಡನೇ ಅತೀ ದೊಡ್ಡ ಪಿಎಸ್ ಯು ಬ್ಯಾಂಕ್ ಆಗಿ ಹೊರಹೊಮ್ಮಲಿದೆ.

ಕೆನರಾ ಬ್ಯಾಂಕ್ ಜೊತೆಗೆ ಸಿಂಡಿಕೇಟ್ ಬ್ಯಾಂಕ್ ವಿಲೀನವಾಗಲಿದೆ. ಈ ಎರಡು ಬ್ಯಾಂಕುಗಳ ವಿಲೀನದಿಂದಾಗಿ ಕೆನರಾ ಬ್ಯಾಂಕ್ ದೇಶದ 4ನೇ ಅತೀ ದೊಡ್ಡ ಸಾರ್ವಜನಿಕ ಬ್ಯಾಂಕ್ ಎನಿಸಿಕೊಳ್ಳಲಿದೆ.

ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ಕಾರ್ಪೊರೇಷನ್‌ ಬ್ಯಾಂಕ್‌ ಮತ್ತು ಆಂಧ್ರ ಬ್ಯಾಂಕ್ ಹಾಗೂ ಇಂಡಿಯನ್‌ ಬ್ಯಾಂಕ್‌ ಅಲಹಾಬಾದ್‌ ಬ್ಯಾಂಕ್‌ ಜತೆ ವಿಲೀನವಾಗಲಿದೆ.

ಸಾರ್ವಜನಿಕ ಬ್ಯಾಂಕ್‌ಗಳನ್ನು ವಿಲೀನಗೊಳಿಸಿ ಜಾಗತಿಕ ಮಟ್ಟದ ಬೃಹತ್‌ ಬ್ಯಾಂಕ್‌ಗಳ ರಚನೆ. ಬ್ಯಾಂಕುಗಳ ನಿರ್ವಹಣೆ ಕಷ್ಟಕರವಾಗುತ್ತಿದೆ. ಅದ್ರಲ್ಲೂ ಬ್ಯಾಂಕಿಂಗ್‌ ವೆಚ್ಚ ನಿಯಂತ್ರಣಕ್ಕೆ ಸಹಕಾರಿಯಾಗುವ ಹಿನ್ನೆಲೆಯಲ್ಲಿ ಹಲವು ಬ್ಯಾಂಕುಗಳನ್ನು ವಿಲೀನಗೊಳಿಸುವ ದಿಟ್ಟ ಕ್ರಮಕ್ಕೆ ಕೇಂದ್ರ ಸರಕಾರ ಮುಂದಾಗಿದೆ.

ಇದರ ಹಂತವಾಗಿಯೇ ಇದೀಗ ಮೂರನೇ ಹಂತದಲ್ಲಿ ಹಲವು ರಾಷ್ಟ್ರೀಕೃತ ಬ್ಯಾಂಕುಗಳು ವಿಲೀನಗೊಳ್ಳುತ್ತಿವೆ. ಆದರೆ ಗ್ರಾಹಕರ ಸೇವೆಯಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ. ಹಳೆಯ ಬ್ಯಾಂಕುಗಳ ನೌಕರರು ವಿಲೀನಗೊಂಡಿರುವ ಬ್ಯಾಂಕಿ ಗ್ರಾಹಕರಾಗಿ ಮುಂದುವರಿಯಲಿದ್ದಾರೆ.

Leave A Reply

Your email address will not be published.