Central Budget 2022: ಕೇಂದ್ರ ಬಜೆಟ್‌ನಲ್ಲಿ ಔಷಧ ತಯಾರಿಕಾ ವಲಯದ ನಿರೀಕ್ಷೆಗಳೇನು?

ಕೇಂದ್ರ ಸರಕಾರದ ಬಹು ನಿರೀಕ್ಷಿತ ಬಜೆಟ್‌ಗೆ (Central Budget 2022) ಕ್ಷಣಗಣನೆ ಆರಂಭವಾಗಿದ್ದು ಇದು ಜನಸಾಮಾನ್ಯರ ದಿನನಿತ್ಯದ ಬದುಕಿನ ಮೇಲೆ ಎಂತಹ ಪರಿಣಾಮ ಬೀರಲಿದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ಜನಸಾಮಾನ್ಯರ ಬಹು ಮುಖ್ಯ ಅವಶ್ಯಕತೆಗಳಾದ ವಿದ್ಯೆ, ಆಹಾರ, ಆರೋಗ್ಯಗಳ ವಿಚಾರಗಳಲ್ಲಿ ಕೇಂದ್ರದ ನೀತಿ-ನಿಯಮಾವಳಿಗಳಲ್ಲಿ ಗಮನಾರ್ಹ ಬದಲಾವಣೆಗಳನ್ನು ನಿರೀಕ್ಷಿಸಲಾಗುವ ಈ ಸಂದರ್ಭವು ತೀವ್ರವಾದ ಕುತೂಹಲಕ್ಕೆ ಕಾರಣವಾಗುವುದು ಸಹಜ. ಎಲ್ಲಾ ರಂಗಗಳೂ ತಮ್ಮ ಅವಶ್ಯಕತೆಗಳಿಗೆ ತಕ್ಕಂತೆ ಅನುದಾನ-ಸಹಾಯಧನಗಳ ಬೇಡಿಕೆಗಳನ್ನು ಪಟ್ಟಿ ಮಾಡಿಕೊಂಡು ಸರಕಾರದ ನಿರ್ಧಾರಕ್ಕಾಗಿ ಕಾಯುತ್ತಿರುತ್ತವೆ.

ಆರೋಗ್ಯವಲಯದ ಬಹುಮುಖ್ಯ ಅಂಗವಾದ ದೇಶೀಯ ಔಷಧ ತಯಾರಿಕಾ ಉದ್ಯಮವು ಈ ಬಾರಿ ಕೇಂದ್ರ ಬಜೆಟ್‌ (Central Budget 2022) ಮೇಲೆ ಹೆಚ್ಚಿನ ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. ಆರೋಗ್ಯವಲಯಕ್ಕೆ ಹೆಚ್ಚಿನ ಅನುದಾನದ ಜೊತೆಗೆ ಔಷಧ ತಯಾರಿಕಾ ವಲಯದಲ್ಲಿ ಸಂಶೋಧನೆ ಹಾಗೂ ಅಭಿವೃದ್ಧಿಗಳನ್ನು ಉತ್ತೇಜಿಸುವ ಸಲುವಾಗಿ ಹಾಗೂ ವಿವಿಧ ಔ‍ಷಧಗಳ ಮೇಲೆ ಕೊಡಲಾಗುವ ತೆರಿಗೆ ವಿನಾಯತಿಗಳ ಬಗ್ಗೆ ಬಜೆಟ್‌ನಲ್ಲಿ ಘೋಷಿಸಬಹುದಾದ ನೀತಿ-ನಿಯಮಾವಳಿಗಳ ಮೇಲೆ ತನ್ನ ಗಮನವನ್ನು ನೆಟ್ಟಿದೆ.

ಖಾಸಗಿ ವಲಯದ ಕಂಪನಿಗಳು ಸುಲಭವಾಗಿ ವ್ಯವಹಾರ ನಡೆಸಲು ಅನುವಾಗುವ ಪ್ರಕ್ರಿಯೆಗಳನ್ನು ಈ ಬಜೆಟ್‌ನಲ್ಲಿ ಹೆಚ್ಚು ಸರಳಗೊಳಿಸುವ ನಿರೀಕ್ಷೆಯನ್ನು ಉದ್ಯಮವು ಹೊಂದಿದೆ.

ರಾಷ್ಟ್ರೀಯ ಆರೋಗ್ಯ ನಿಯಮಾವಳಿ 2017ರ ಅನ್ವಯ ಬಜೆಟ್‌ ಅನುದಾನವನ್ನು ಈಗಿರುವ ಜಿಡಿಪಿಯ ಶೇ 1.8ರಿಂದ ಶೇ 2.5-3ಕ್ಕೆ ಏರಿಸುವುದರೊಂದಿಗೆ ಜೀವ-ರಾಸಾಯನಿಕ ಔಷಧ ನಿರ್ಮಾಣದ ಸಂಶೋಧನೆ ಮತ್ತು ಅಭಿವೃದ್ಧಿ ವಲಯಕ್ಕೆ ಪ್ರತ್ಯೇಕವಾಗಿ ಅನುದಾನ ನೀಡುವ ಕೆಲಸ ಕಡ್ಡಾಯವಾಗಿ ಆಗಬೇಕಾಗಿದೆಯೆಂದು ಔಷಧ ತಯಾರಕರ ಒಕ್ಕೂಟದ ಅಧ್ಯಕ್ಷ ಎಸ್. ಶ್ರೀಧರ್‌ ಹೇಳಿದ್ದಾರೆ. 

ಕಳೆದ ವರ್ಷ ಉದ್ಯಮವು ವಿಶೇಷವಾಗಿ ಕೋವಿಡ್‌ ಲಸಿಕೆ ಹಾಗೂ ಔಷಧಿಗಳ ಲಭ್ಯತೆಯನ್ನು ಖಚಿತಪಡಿಸುವ ವಿಷಯದಲ್ಲಿ ಗಮನಾರ್ಹವಾದ ವೇಗವನ್ನು ಕಂಡುಕೊಂಡಿದ್ದು ಕೋವಿಡ್‌ ಮಾತ್ರವಲ್ಲದೇ ಇತರ ರೋಗಗಳಿಗೆ ಅತ್ಯುತ್ತಮ ಗುಣಮಟ್ಟದ ಚಿಕಿತ್ಸೆ ಲಭ್ಯವಾಗುವಂತೆ ಮಾಡಲು ಈ ವರ್ಷದ ಬಜೆಟ್‌ ಬಹಳ ಪ್ರಾಮುಖ್ಯತೆಯನ್ನು ಹೊಂದಿದೆ ಎಂದೂ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರಕಾರವು ಪ್ರಸ್ತುತ ಜಾರಿಯಲ್ಲಿರುವ ಔಷಧಗಳ ಮೇಲಿನ ಕಸ್ಟಮ್ಸ್‌ ತೆರಿಗೆ ವಿನಾಯತಿಗಳನ್ನು ಮುಂದುವರೆಸಬೇಕೆಂದು ತಿಳಿಸಿರುವ ಶ್ರೀಧರ್‌ರವರು ಇದು ಸಾಧ್ಯವಾಗದಿದ್ದರೆ ಅಂತಹ ಔಷಧಿಗಳು ಜನಸಾಮಾನ್ಯರಿಗೆ ಕೈಗೆಟಕುವ ದರಗಳಲ್ಲಿ ದೊರಕಲು ಸಾಧ್ಯವಾಗದು ಎಂದಿದ್ದಾರೆ. ಇಷ್ಟು ಮಾತ್ರವಲ್ಲದೇ, ಕೆಲವು ಅಪರೂಪದ ಕಾಯಿಲೆಗಳಿಗೆ ವಿಶ್ವದ ಇತರ ಭಾಗಗಳಲ್ಲಿ ಅಭಿವೃದ್ಧಿಪಡಿಸಲಾಗಿರುವ ಅತ್ಯಾಧುನಿಕ ಔಷಧಗಳಿಗೆ ವಿಧಿಸಲಾಗುವ ಅಮದು ಸುಂಕಕ್ಕೆ ಅಪರೂಪದ ಕಾಯಿಲೆಗಳ ಮೇಲಿನ ರಾಷ್ಟ್ರೀಯ ನೀತಿಯು (ಎನ್‌ಪಿಆರ್‌ಡಿ) ಸೂಚಿಸಿರುವ ವಿನಾಯತಿಯನ್ನು ಸರಕಾರ ಗಂಭೀರವಾಗಿ ಪರಿಶೀಲಿಸಬೇಕೆಂದೂ ಅವರು ಸೂಚಿಸಿದ್ದಾರೆ.

ಔಷಧ ತಯಾರಿಕಾ ವಲಯದಲ್ಲಿ ಸುಲಭವಾಗಿ ವ್ಯವಹಾರ ಮಾಡಲು ಸಹಾಯವಾಗುವ ಪ್ರಕ್ರಿಯೆಗಳನ್ನು ಉದ್ಯಮಸ್ನೇಹಿಯನ್ನಾಗಿಸುವ ನಿಟ್ಟಿನಲ್ಲಿ ಇನ್ನೂ ಉತ್ತಮಪಡಿಸಲು ಹೆಚ್ಚಿನ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಈ ರಂಗದಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆಯನ್ನು ಪ್ರೋತ್ಸಾಹಿಸಲು ಹಾಗೂ ಈ ಉದ್ಯಮದ ದೀರ್ಘಾವಧಿ ಬೆಳವಣಿಗೆಗಾಗಿ ಇರುವ ಕೆಲ ಅಡೆ-ತಡೆಗಳನ್ನು ನಿವಾರಿಸಬೇಕೆಂದು ಭಾರತೀಯ ಔಷಧ ತಯಾರಿಕಾ ಒಕ್ಕೂಟದ ಮುಖ್ಯ ಕಾರ್ಯದರ್ಶಿಗಳಾದ ಸುದರ್ಶನ್‌ ಜೈನ್‌ರವರು ತಿಳಿಸಿದ್ದು ಜ್ಞಾನಾಧಾರಿತ ಉದ್ಯಮವಾದ ಔಷಧ ತಯಾರಿಕಾ ವಲಯಕ್ಕೆ ಅತ್ಯಾಧುನಿಕ ಸಂಶೋಧನೆ ಮತ್ತು ಅಭಿವೃದ್ಧಿಯೇ ಜೀವಾಳ ಎಂದಿದ್ದಾರೆ.

ಇದು ಇಲ್ಲಿಯವರೆಗೂ ಸಾಧಿಸಾಲಾಗದಿರುವ ರೋಗಿಗಳ ಅವಶ್ಯಕತೆಗಳನ್ನು ಕೈಗೆಟಕುವ ದರದಲ್ಲಿ ಪೂರೈಸುವ ಉದ್ದೇಶವನ್ನು ಸಾಧಿಸಲು ಸಹಾಯ ಮಾಡಲಿದೆ. ಈ ಬಾರಿಯ ಬಜೆಟ್‌ ಭಾರತದ ಔಷಧ ತಯಾರಿಕಾ ಉದ್ಯಮವನ್ನು “ಮೇಕ್‌ ಇನ್‌ ಇಂಡಿಯಾ” ದಿಂದ “ಭಾರತದಲ್ಲೇ ಕಂಡುಹಿಡಿದು ಇಲ್ಲೇ ತಯಾರಿಸು” ಎಂಬ ಹೊಸ ಸಾಹಸದ ದಾರಿಯಲ್ಲಿ ಸಾಗಲು ನೆರವಾಗಲಿದೆ ಎಂದೂ ಸುದರ್ಶನ್‌ ಜೈನ್‌ ತಿಳಿಸಿದ್ದಾರೆ.

ಇಂದಿನ ಸಮಯದ ಪ್ರಮುಖ ಅವಶ್ಯಕತೆಯೆಂದರೆ ಕುಶಲ ಆರೋಗ್ಯಸೇವೆ ನೀಡಬಲ್ಲ ಮಾನವ ಸಂಪನ್ಮೂಲದ ಕೊರತೆಯನ್ನು ನೀಗುವ ಕೌಶಲ್ಯ ತರಬೇತಿ ಹಾಗೂ ವೈದ್ಯಕೀಯ ಶಿಕ್ಷಣದ ಕಾರ್ಯಕ್ರಮಗಳನ್ನು ಪರಿಚಯಿಸುವ ಸಲುವಾಗಿ ಹೆಚ್ಚಿನ ಅನುದಾನವನ್ನು ಮೀಸಲಿಡುವುದಾಗಿದೆ ಎಂದು ಹೆಲ್ತ್‌ಕೇರ್‌ ಫೆಡರೇಶನ್‌ ಆಫ್ ಇಂಡಿಯಾದ ಅಧ್ಯಕ್ಷ ಹರ್ಷ್‌ ಮಹಾಜನ್‌ ತಿಳಿಸಿದ್ದಾರೆ. ತೆರಿಗೆ ವಿಧಾನವು ಜಿಎಸ್‌ಟಿ ಪದ್ಧತಿಗೆ ಬದಲಾದ ನಂತರ ಉದ್ಯಮಕ್ಕೆ ಹೆಚ್ಚಿನ ಪ್ರಯೋಜನ ಸಿಕ್ಕಿಲ್ಲದಿರುವುದರಿಂದ ಜಿಎಸ್‌ಟಿ ಪದ್ಧತಿಯಲ್ಲಿ ಕೆಲ ಸೂಕ್ತ ಬದಲಾವಣೆಗಳನ್ನು ಮಾಡಬೇಕಾಗಿದೆಯಂದೂ ಅವರು ತಿಳಿಸಿದ್ದಾರೆ.

ಕೇಂದ್ರ ಬಜೆಟ್‌ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ರವರು ಬರುವ ಫೆಬ್ರವರಿ 1 ರಂದ ಮಂಡಿಸಲಿದ್ದಾರೆ.

ಇದನ್ನೂ ಓದಿ: 5 Best Credit Cards : ಕ್ಯಾಶ್‌ಬ್ಯಾಕ್ ನೀಡುವ ಅತ್ಯುತ್ತಮ 5 ಕ್ರೆಡಿಟ್ ಕಾರ್ಡ್‌ಗಳು ಯಾವುವು? ಅವುಗಳು ನೀಡುವ ಕೊಡುಗೆಗಳೇನು?

ಇದನ್ನೂ ಓದಿ: Earn money from Apps: ಮನೆಯಿಂದಲೇ ಹಣ ಗಳಿಸಲು ಬೆಸ್ಟ್ ಆ್ಯಪ್‌ಗಳಿವು

Central Budget Raises huge expectations among pharma companies

ಇದನ್ನೂ ಓದಿ: kgf James Vikrant Rona : 2022 ರಲ್ಲಿ ಸ್ಯಾಂಡಲ್ ವುಡ್ ಸ್ಟಾರ್ ಹಬ್ಬ: ತೆರೆಗೆ ಬರಲಿದೆ ಮೂರು ಬಿಗ್ ಬಜೆಟ್ ಚಿತ್ರ

ಇದನ್ನೂ ಓದಿ: Union Budget 2022: ಜನವರಿ 31ರಿಂದ ಸಂಸತ್ತಿನ ಬಜೆಟ್​ ಅಧಿವೇಶನ

Comments are closed.