ಬ್ಯಾಂಕ್ ಚೆಕ್ ವಹಿವಾಟಿನಲ್ಲಿ ಬಾರೀ ಬದಲಾವಣೆ : ಜನವರಿಯಿಂದಲೇ ಜಾರಿಯಾಗುತ್ತೆ ಹೊಸ ನಿಯಮ

ಬೆಂಗಳೂರು : ಚೆಕ್ ವಂಚನೆ ತಡೆಯುವುದರ ಜೊತೆಗೆ ಚೆಕ್ ಬಳಕೆಗೆ ಸಂಬಂಧಿಸಿದಂತೆ ಆರ್​ಬಿಐ ಬ್ಯಾಂಕ್​ಗಳಲ್ಲಿ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲು ಮುಂದಾಗಿದೆ. ಬ್ಯಾಂಕುಗಳಲ್ಲಿ ಜನವರಿ 2021ರಿಂದಲೇ ಪಾಸಿಟಿವ್ ಪೇ ಸಿಸ್ಟಂ ಜಾರಿಗೆ ಬರಲಿದೆ.

ಗ್ರಾಹಕರು ಚೆಕ್​ ಮೂಲಕ 50 ಸಾವಿರ ರೂ.ಗಿಂತ ಹೆಚ್ಚು ಹಣ ಪಾವತಿಸಬೇಕಾದರೆ ಹೊಸ ವರ್ಷದಿಂದ ಹೊಸ ನಿಯಮವನ್ನು ಅನುಸರಿಸಲೇಬೇಕು. ಇದರಿಂದ ಚೆಕ್ ವಹಿವಾಟಿನಲ್ಲಿ ನಡೆಯುವ ವಂಚನೆಯನ್ನು ತಡೆಯಲು ಸಾಧ್ಯವಿದೆ ಎಂದು ಆರ್​ಬಿಐ ತಿಳಿಸಿದೆ.
ಜನವರಿ ತಿಂಗಳಿಂದ 50,000 ರೂ.ಗೂ ಅಧಿಕ ಮೊತ್ತವನ್ನು ಚೆಕ್‌ ಮೂಲಕ ಪಾವತಿ ಮಾಡುವುದಾದರೆ ಆಯಾ ಬ್ಯಾಂಕ್​ಗಳು ಗ್ರಾಹಕರಿಂದ ಮರು ದೃಢೀಕರಿಸಿಕೊಳ್ಳುತ್ತವೆ. ಚೆಕ್‌ಗಳನ್ನು ನೀಡಿದವರು ಬ್ಯಾಂಕ್‌ಗಳಿಗೆ ಮೆಸೇಜ್, ಮೊಬೈಲ್‌ ಆ್ಯಪ್‌, ಇಂಟರ್‌ನೆಟ್‌ ಬ್ಯಾಂಕಿಂಗ್‌, ಎಟಿಎಂ ಅಥವಾ ಇತರೆ ಸಾಧನಗಳ ಬಳಸಿ ಚೆಕ್‌ನ ಮಾಹಿತಿಯನ್ನು ನೀಡಬೇಕು. 2021ರ ಜನವರಿ 1ರಿಂದ ಈ ಹೊಸ ನಿಯಮ ಜಾರಿಯಾಗಲಿದೆ.

50,000 ರೂ.ಗೂ ಅಧಿಕ ಹಣದ ವಹಿವಾಟನ್ನು ಚೆಕ್ ಮೂಲಕ ನಡೆಸುವುದಾದರೆ ಬ್ಯಾಂಕ್​ಗಳಿಗೆ ಆ ಚೆಕ್ ಮಾಹಿತಿಯನ್ನು ನೀಡಿ, ಮರು ದೃಢೀಕರಿಸಬೇಕು. ಆ ಬಳಿಕವೇ ಆ ಹಣವನ್ನು ಡ್ರಾ ಮಾಡಲು ಸಾಧ್ಯ. ಇದರಿಂದ ಚೆಕ್ ಬಳಸಿ ವಂಚನೆ ಮಾಡುವುದನ್ನು ನಿಯಂತ್ರಿಸಲು ಸಾಧ್ಯ ಎಂದು ಆರ್​ಬಿಐ ಹೇಳಿದೆ. ಆದರೆ, ಈ ನಿಯಮ ಎಲ್ಲ ಗ್ರಾಹಕರಿಗೂ ಕಡ್ಡಾಯವಲ್ಲ. ಅಧಿಕ ಹಣದ ವಹಿವಾಟು ನಡೆಸುವವರು ಹಾಗೂ ತಮ್ಮ ಹಣದ ವರ್ಗಾವಣೆಯಲ್ಲಿ ಹೆಚ್ಚಿನ ಭದ್ರತೆಯನ್ನು ಬಯಸುವವರು ಈ ಆಯ್ಕೆಯನ್ನು ಬಳಸಿಕೊಳ್ಳಬಹುದು.

2021ರ ಜನವರಿಯಿಂದ ಪಾಸಿಟಿವ್‌ ಪೇ ಸಿಸ್ಟಂ ಮೂಲಕ ಚೆಕ್‌ ವಿತರಣೆ ಮಾಡಲು ಇಚ್ಛಿಸುವವರು ತಮ್ಮ ಮೊಬೈಲ್​ನಿಂದ SMS ಕಳುಹಿಸುವ ಮೂಲಕ, ಮೊಬೈಲ್​ನಲ್ಲಿ ಬ್ಯಾಂಕ್​ನ ಆ್ಯಪ್ ಹಾಕಿಕೊಳ್ಳುವ ಮೂಲಕ, ಇಂಟರ್ನೆಟ್ ಬ್ಯಾಂಕಿಂಗ್‌ ಅಥವಾ ಎಟಿಎಂ ಮೂಲಕವೂ ಬ್ಯಾಂಕ್ ಕೇಳುವ ಮಾಹಿತಿಯನ್ನು ಆನ್​ಲೈನ್​ನಲ್ಲಿ ಸಲ್ಲಿಸಬೇಕು. ಆ ಎಲ್ಲ ಮಾಹಿತಿಯೂ ಬ್ಯಾಂಕ್​ನಲ್ಲಿ ಅಪ್​ಡೇಟ್ ಆದ ನಂತರ ಈ ಆಯ್ಕೆಯನ್ನು ಬಳಸಲು ಸಾಧ್ಯವಿದೆ. ಬಳಿಕ, ನಿಮ್ಮ ಖಾತೆಯಿಂದ ಚೆಕ್ ಮೂಲಕ 50 ಸಾವಿರ ರೂ.ಗೂ ಅಧಿಕ ಹಣ ಡ್ರಾ ಆಗುವ ವೇಳೆ ಬ್ಯಾಂಕ್ ನಿಮ್ಮ ಬಳಿ ಮರು ದೃಢೀಕರಿಸಿಕೊಳ್ಳುತ್ತದೆ.

Comments are closed.