ಆಭರಣ ಪ್ರಿಯರಿಗೆ ಶುಭ ಸುದ್ದಿ : ಶೀಘ್ರದಲ್ಲೇ ಚಿನ್ನದ ಬೆಲೆಯಲ್ಲಿ ಕಾಣಲಿದೆ ಇಳಿಕೆ
ಚಿನ್ನದ ಬೆಲೆಗಳು ಗಗನಕ್ಕೇರಿದ್ದು ಚಿನ್ನ ಅಂದ್ರೆ ಚಳಿಜ್ವರ ಶುರುವಾಗಂತಹ ಪರಿಸ್ಥಿತಿ ಎದುರಾಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 1.60 ಲಕ್ಷ ರೂಪಾಯಿ ತಲುಪಿದ್ದು ಚಿನ್ನ ಈಗ ಸುರಕ್ಷಿತ ಆಸ್ತಿ ಎಂಬ ವಾತಾವರಣ ನಿರ್ಮಾಣವಾಗಿದೆ. ಒಂದು ವರ್ಷದ ಅವಧಿಯಲ್ಲಿ ಚಿನ್ನದ ದರ ದಾಖಲೆಯ 93% ಏರಿಕೆ ಕಂಡಿದೆ.
ಇನ್ನು ಈ ಎಲ್ಲದರ ನಡುವೆಯೇ ತಜ್ಞರು ಚಿನ್ನಾಭರಣ ಖರೀದಿಗೆ ತರಾತುರಿ ಮಾಡಬೇಡಿ ಎಂದು ಸಲಹೆ ನೀಡಿದ್ದಾರೆ. ಪ್ರಮುಖ ದಲ್ಲಾಳಿ ಸಂಸ್ಥೆ ಗೋಲ್ಡ್‌ಮನ್ ಸ್ಯಾಚ್ಸ್ ಇತ್ತೀಚೆಗೆ ಬಿಡುಗಡೆ ಮಾಡಿರುವ ವರದಿಯಲ್ಲಿ 2026ರ ಅಂತ್ಯದ ವೇಳೆಗೆ ಚಿನ್ನದ ಬೆಲೆ 10 ಗ್ರಾಂಗೆ 1.75 ಲಕ್ಷ ರೂಪಾಯಿ ಆಗಬಹುದು ಎಂದು ಸೂಚನೆ ನೀಡಿದೆ. ಅಂದರೆ 2026ರಲ್ಲಿ ಚಿನ್ನದ ಬೆಲೆಯಲ್ಲಿ ಕೇವಲ 10 ಪ್ರತಿಶತ ಮಾತ್ರ ಏರಿಕೆ ಕಾಣಬಹುದು ಎಂದು ಇದು ಅಂದಾಜಿಸಿದೆ.
ಕೇಂದ್ರ ಬ್ಯಾಂಕ್‌ಗಳು 2026ರಲ್ಲಿ ಸರಾಸರಿ 60 ಟನ್ ಚಿನ್ನ ಖರೀದಿಸಬಹುದು ಎಂದು ಅಂದಾಜಿಸಲಾಗಿದೆ. ಆದರೆ ಭವಿಷ್ಯದಲ್ಲಿ ಚಿನ್ನಕ್ಕೆ ಬೇಡಿಕೆ ಕಡಿಮೆಯಾಗಲಿದ್ದು ಆ ಸಂದರ್ಭದಲ್ಲಿ ಚಿನ್ನದ ದರದಲ್ಲಿ ಇಳಿಕೆ ಕಾಣಲಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ಜಾಗತಿಕ ಹಣಕಾಸು ನೀತಿಗಳಲ್ಲಿ ಅನಿಶ್ಚಿತತೆ ಕಡಿಮೆಯಾದಲ್ಲಿ ಅದರಲ್ಲೂ ವಿಶೇಷವಾಗಿ ಅಮೆರಿಕ ಫೆಡರಲ್ ರಿಸರ್ವ್ ಬಡ್ಡಿದರ ಕಡಿತ ಮಾಡಿದಲ್ಲಿ ಹೂಡಿಕೆದಾರರು ಲಾಭ ಪಡೆಯುತ್ತಾರೆ. ಆಗ ಚಿನ್ನದ ಮೇಲಿನ ಹೂಡಿಕೆ ಕಡಿಮೆಯಾಗುತ್ತದೆ. ಇದರಿಂದಲೂ ಬಂಗಾರದ ಬೆಲೆಯಲ್ಲಿ ಇಳಿಕೆ ಕಾಣುತ್ತದೆ ಎನ್ನಲಾಗಿದೆ.



