ಆಸ್ತಿ ತೆರಿಗೆ ಪಾವತಿಸದಿದ್ದರೆ ಹರಾಜು ಗ್ಯಾರಂಟಿ: ತೆರಿಗೆಗಳ್ಳರಿಗೆ ಖಡಕ್ ಎಚ್ಚರಿಕೆ ನೀಡಿದ ಕರ್ನಾಟಕ ಸರ್ಕಾರ

Pay property tax or face auction | Bengaluru property tax | ಬೆಂಗಳೂರು: ನಗರದಲ್ಲಿ ವರ್ಷಗಳಿಂದ ಆಸ್ತಿ ತೆರಿಗೆ ಪಾವತಿಸದೆ ಪಾಲಿಕೆಗೆ ವಂಚಿಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ತೆರಿಗೆ ಬಾಕಿ ಉಳಿಸಿಕೊಂಡಿರುವ ವಾಣಿಜ್ಯ ಆಸ್ತಿಗಳನ್ನು ಹರಾಜು ಹಾಕುವ ಪ್ರಕ್ರಿಯೆ ನಡೆಯಲಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಜಿಬಿಎ (GBA) ಕಚೇರಿಯಲ್ಲಿ ನಡೆದ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತೆರಿಗೆ ಸಂಗ್ರಹದ ವಿಚಾರದಲ್ಲಿ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ ಮತ್ತು ನಿಯಮ ಉಲ್ಲಂಘಿಸುವವರ ವಿರುದ್ಧ ಪಾಲಿಕೆ ಕಾನೂನು ಕ್ರಮ ಜರುಗಿಸಲಿದೆ ಎಂದು ಸ್ಪಷ್ಟಪಡಿಸಿದರು.

ಡಿಸಿಎಂ ನೀಡಿದ ಪ್ರಮುಖ ಮಾಹಿತಿಗಳು:

  • ವಾಣಿಜ್ಯ ಆಸ್ತಿಗಳೇ ದೊಡ್ಡ ಸುಸ್ತಿದಾರರು: ಸುಮಾರು 80% ರಷ್ಟು ವಾಣಿಜ್ಯ ಆಸ್ತಿಗಳ ಮಾಲೀಕರು ಕಳೆದ 7-8 ವರ್ಷಗಳಿಂದ ತೆರಿಗೆ ಪಾವತಿಸಿಲ್ಲ. ಇವರಲ್ಲಿ ಕೆಲವು ಮಾಜಿ ಶಾಸಕರ ಆಸ್ತಿಗಳೂ ಸೇರಿವೆ. ಬಾಡಿಗೆ ಪಡೆಯುತ್ತಿದ್ದರೂ ತೆರಿಗೆ ಕಟ್ಟದವರ ವಿರುದ್ಧ ಕ್ರಮ ಅನಿವಾರ್ಯ ಎಂದು ಅವರು ಹೇಳಿದರು.
  • ಶ್ರೀಮಂತರೇ ಹೆಚ್ಚು ಬಾಕಿ ಉಳಿಸಿಕೊಂಡಿದ್ದಾರೆ: ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವವರಲ್ಲಿ ಬಡವರು ಅಥವಾ 30×40 ನಿವೇಶನದಾರರು ಇಲ್ಲ. ಬದಲಾಗಿ ದೊಡ್ಡ ಶ್ರೀಮಂತರು ಮತ್ತು ಡೆವಲಪರ್ಸ್‌ಗಳೇ ಹೆಚ್ಚಾಗಿದ್ದಾರೆ. ಕಟ್ಟಡ ನಕ್ಷೆ ಅನುಮೋದನೆ ಪಡೆದು ಪೂರ್ಣ ಹಣ ಪಾವತಿಸದೆ ಕೋರ್ಟ್ ಮೊರೆ ಹೋಗುವವರ ವಿರುದ್ಧವೂ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದ್ದಾರೆ.
  • ಓಟಿಎಸ್ (OTS) ಯೋಜನೆಯ ಯಶಸ್ಸು: ಬಾಕಿ ಪಾವತಿಸಲು ಮಾನವೀಯ ದೃಷ್ಟಿಯಿಂದ ಜಾರಿಗೆ ತಂದಿದ್ದ ಒನ್ ಟೈಮ್ ಸೆಟಲ್ಮೆಂಟ್ (OTS) ಯೋಜನೆಯನ್ನು ಸುಮಾರು 2.65 ಲಕ್ಷ ಜನರು ಬಳಸಿಕೊಂಡಿದ್ದಾರೆ. ಇದರಿಂದ ಪಾಲಿಕೆಗೆ 1200 ಕೋಟಿ ರೂ. ಸಂಗ್ರಹವಾಗಿದ್ದು, ಇದು ಐತಿಹಾಸಿಕ ನಿರ್ಧಾರವಾಗಿದೆ ಎಂದು ಬಣ್ಣಿಸಿದರು.
  • ಮಂತ್ರಿ ಮಾಲ್ ಪ್ರಕರಣ: ಮಂತ್ರಿ ಮಾಲ್‌ನವರು 35 ಕೋಟಿ ರೂ. ಬಾಕಿ ಉಳಿಸಿಕೊಂಡಿದ್ದರು. ಅದಕ್ಕೆ ಬೀಗ ಹಾಕಿಸಿದ ಮೇಲೆ 8 ಕೋಟಿ ರೂ. ಪಾವತಿಸಿದ್ದಾರೆ. ಇನ್ನು 20 ಕೋಟಿ ರೂ. ಬಾಕಿ ಉಳಿದಿದ್ದು, ನ್ಯಾಯಾಲಯ ಅವರಿಗೆ ಕಾಲಾವಕಾಶ ನೀಡಿದೆ ಎಂದು ಮಾಹಿತಿ ನೀಡಿದರು.

    ಜ್ಯೋತಿಷಿ ಕಮಲಾಕರ್ ಭಟ್‌ ಮೇಲೆ‌ ಪೋಕ್ಸೋ ಕೇಸ್; ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಆರೋಪ!

ಖಡಕ್ ಸೂಚನೆ: “ತೆರಿಗೆ ಪಾವತಿಸಲು ಓಟಿಎಸ್ ಮೂಲಕ ಅವಕಾಶ ನೀಡಲಾಗಿತ್ತು. ಆ ಸಂದರ್ಭವನ್ನು ಬಳಸಿಕೊಳ್ಳದಿದ್ದರೆ ಪಾಲಿಕೆ ಹರಾಜು ಪ್ರಕ್ರಿಯೆ ನಡೆಸುವುದರಲ್ಲಿ ತಪ್ಪಿಲ್ಲ. ಸರ್ಕಾರದ ಹಸ್ತಕ್ಷೇಪವಿಲ್ಲದೆ ಅಧಿಕಾರಿಗಳು ತಮ್ಮ ಕೆಲಸ ಮಾಡಲಿದ್ದಾರೆ,” ಎಂದು ಡಿಸಿಎಂ ಎಚ್ಚರಿಸಿದ್ದಾರೆ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories