ಆಧಾರ್ ಬಳಕೆದಾರರಿಗೆ ಯುಐಡಿಎಐ ಮಹತ್ವದ ಅಪ್ಡೇಟ್
ಯುಐಡಿಎಐ ಹಳೆಯ ಎಂಆಧಾರ್ ಆ್ಯಪ್ ಸೇವೆ ಸ್ಥಗಿತಗೊಳಿಸಿದ್ದು, ಹೊಸ ಆಧಾರ್ ಆ್ಯಪ್ ಬಳಸುವಂತೆ ಸೂಚಿಸಿದೆ. ಫೇಸ್ ದೃಢೀಕರಣ, ಕ್ಯೂಆರ್ ಹಂಚಿಕೆ ಹಾಗೂ ಉಚಿತ ಇಮೇಲ್ ಅಪ್ಡೇಟ್ ಸೇರಿದಂತೆ ಹಲವು ಹೊಸ ಸೌಲಭ್ಯಗಳನ್ನು ಪರಿಚಯಿಸಿದೆ.

ಆಧಾರ್ ಸೇವೆಗಳನ್ನು ಮೊಬೈಲ್ ಮೂಲಕ ಬಳಸುವವರಿಗೆ ಮಹತ್ವದ ಮಾಹಿತಿ ಹೊರಬಿದ್ದಿದೆ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಯುಐಡಿಎಐ, ಎಂಆಧಾರ್ ಆ್ಯಪ್ ಸೇವೆಗಳನ್ನು ಸ್ಥಗಿತಗೊಳಿಸಿ ಅದರ ಬದಲಿಗೆ ಹೊಸ ಆಧಾರ್ ಆ್ಯಪ್ ಬಳಸುವಂತೆ ಸಾರ್ವಜನಿಕರಿಗೆ ಸೂಚಿಸಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಡಿಜಿಟಲ್ ಆಧಾರ್ ಸೇವೆಗಳು ಹೊಸ ಆ್ಯಪ್ ಮೂಲಕವೇ ಲಭ್ಯವಾಗಲಿವೆ.
ಹೊಸ ಆಧಾರ್ ಆ್ಯಪ್ನಲ್ಲಿ ಬಳಕೆದಾರರ ಗೌಪ್ಯತೆ ಮತ್ತು ವೈಯಕ್ತಿಕ ಮಾಹಿತಿಯ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಫೇಸ್ ದೃಢೀಕರಣದ ಮೂಲಕ ಸುಲಭವಾಗಿ ಗುರುತು ಪರಿಶೀಲನೆ ಮಾಡಿಕೊಳ್ಳಬಹುದು. ಜೊತೆಗೆ ಕ್ಯೂಆರ್ ಕೋಡ್ ಮೂಲಕ ಅಗತ್ಯವಿರುವ ಮಾಹಿತಿಯನ್ನು ಮಾತ್ರ ಇತರರೊಂದಿಗೆ ಸುರಕ್ಷಿತವಾಗಿ ಹಂಚಿಕೊಳ್ಳುವ ವ್ಯವಸ್ಥೆಯನ್ನೂ ಒದಗಿಸಲಾಗಿದೆ.
ಬಳಕೆದಾರರು ತಮ್ಮ ಹೆಸರು, ಜನ್ಮ ದಿನಾಂಕ ಅಥವಾ ವಿಳಾಸ ಸೇರಿದಂತೆ ಬೇಕಾದ ಮಾಹಿತಿಯನ್ನು ಮಾತ್ರ ಆಯ್ಕೆ ಮಾಡಿ ಹಂಚಿಕೊಳ್ಳಬಹುದಾಗಿದೆ. ಇದರಿಂದ ಸಂಪೂರ್ಣ ಆಧಾರ್ ವಿವರಗಳನ್ನು ಬಹಿರಂಗಪಡಿಸುವ ಅಗತ್ಯವಿಲ್ಲದೆ ವೈಯಕ್ತಿಕ ಮಾಹಿತಿ ಸುರಕ್ಷಿತವಾಗಿರುತ್ತದೆ.
ಈ ಹೊಸ ಆ್ಯಪ್ನಲ್ಲಿ ಬಯೋಮೆಟ್ರಿಕ್ ಲಾಕ್ ಮತ್ತು ಅನ್ಲಾಕ್ ಸೌಲಭ್ಯವನ್ನು ಒಂದೇ ಕ್ಲಿಕ್ನಲ್ಲಿ ಬಳಸಬಹುದು. ಇದರಿಂದ ಆಧಾರ್ ಮಾಹಿತಿಯ ದುರ್ಬಳಕೆಯನ್ನು ತಡೆಯಲು ಸಹಕಾರಿಯಾಗುತ್ತದೆ. ಅಲ್ಲದೆ ಒಂದೇ ಆ್ಯಪ್ನಲ್ಲಿ ಕುಟುಂಬದ ಸದಸ್ಯರ ಆಧಾರ್ ವಿವರಗಳನ್ನು ನಿರ್ವಹಿಸುವ ಅವಕಾಶವೂ ಕಲ್ಪಿಸಲಾಗಿದೆ. ವಿವಿಧ ಪ್ರಾದೇಶಿಕ ಭಾಷೆಗಳಲ್ಲಿಯೂ ಈ ಆ್ಯಪ್ ಲಭ್ಯವಿದೆ.
ಹೊಸ ಆಧಾರ್ ಆ್ಯಪ್ ಡೌನ್ಲೋಡ್ ಮಾಡಲು ಗೂಗಲ್ ಪ್ಲೇ ಸ್ಟೋರ್ ಅಥವಾ ಆ್ಯಪಲ್ ಆ್ಯಪ್ ಸ್ಟೋರ್ಗೆ ಭೇಟಿ ನೀಡಿ ಆ್ಯಪ್ ಅನ್ನು ಇನ್ಸ್ಟಾಲ್ ಮಾಡಬೇಕು. ಬಳಿಕ ಆಧಾರ್ಗೆ ನೋಂದಾಯಿಸಿರುವ ಮೊಬೈಲ್ ಸಂಖ್ಯೆಯ ಮೂಲಕ ಲಾಗಿನ್ ಆಗಿ, ಫೇಸ್ ದೃಢೀಕರಣ ಅಥವಾ ಬಯೋಮೆಟ್ರಿಕ್ ಪರಿಶೀಲನೆ ಪೂರ್ಣಗೊಳಿಸಿ ನಾಲ್ಕು ಅಂಕಿಯ ಪಿನ್ ಹೊಂದಿಸಿದ ನಂತರ ಎಲ್ಲಾ ಆಧಾರ್ ಸೇವೆಗಳನ್ನು ಬಳಸಬಹುದು.
ಹೊಸ ಆ್ಯಪ್ ಬಳಕೆಯನ್ನು ಉತ್ತೇಜಿಸಲು ಯುಐಡಿಎಐ ಮತ್ತೊಂದು ವಿಶೇಷ ಸೌಲಭ್ಯ ಘೋಷಿಸಿದೆ. ಈ ಆ್ಯಪ್ ಮೂಲಕ ಆಧಾರ್ಗೆ ಲಿಂಕ್ ಆಗಿರುವ ಇಮೇಲ್ ವಿಳಾಸವನ್ನು ಯಾವುದೇ ಶುಲ್ಕವಿಲ್ಲದೆ ನವೀಕರಿಸಬಹುದು. ಸಾಮಾನ್ಯವಾಗಿ ಇದಕ್ಕೆ ಶುಲ್ಕ ವಿಧಿಸಲಾಗುತ್ತಿತ್ತು. ಆದರೆ ಜುಲೈ 1ರಿಂದ ಈ ಸೇವೆಯನ್ನು ಉಚಿತವಾಗಿ ನೀಡಲಾಗುತ್ತಿದೆ.

