ಚೆಕ್ ಹಿಂಭಾಗದಲ್ಲಿ ಸಹಿ ಏಕೆ ಮಾಡಬೇಕು? ಇಲ್ಲಿದೆ ನಿಜವಾದ ಕಾರಣ

ಬ್ಯಾಂಕ್‌ನಲ್ಲಿ ಚೆಕ್ ಮೂಲಕ ಹಣ ಪಡೆಯುವಾಗ ಕೆಲವು ಚೆಕ್‌ಗಳ ಹಿಂಭಾಗದಲ್ಲೂ ಸಹಿ ಕೇಳಲಾಗುತ್ತದೆ. ಯಾವ ಚೆಕ್‌ಗೆ ಇದು ಕಡ್ಡಾಯ, ಏಕೆ ಅಗತ್ಯ ಎಂಬುದನ್ನು ತಿಳಿದರೆ ವಂಚನೆಯಿಂದ ತಪ್ಪಿಸಿಕೊಳ್ಳಬಹುದು.

ಇಂದಿನ ಡಿಜಿಟಲ್ ಬ್ಯಾಂಕಿಂಗ್ ಯುಗದಲ್ಲಿ UPI, ನೆಟ್ ಬ್ಯಾಂಕಿಂಗ್ ಹಾಗೂ ಎಟಿಎಂ ಬಳಕೆ ಹೆಚ್ಚಾದರೂ, ದೊಡ್ಡ ಮೊತ್ತದ ಹಣಕಾಸು ವ್ಯವಹಾರಗಳಿಗೆ ಇನ್ನೂ ಅನೇಕರು ಚೆಕ್ ಬಳಸುತ್ತಿದ್ದಾರೆ. ಆದರೆ ಬ್ಯಾಂಕ್‌ನಲ್ಲಿ ಚೆಕ್ ಮೂಲಕ ಹಣ ಪಡೆಯುವಾಗ ಅಧಿಕಾರಿಗಳು ಕೆಲವೊಮ್ಮೆ ಚೆಕ್‌ನ ಹಿಂಭಾಗದಲ್ಲೂ ಸಹಿ ಮಾಡುವಂತೆ ಕೇಳುತ್ತಾರೆ. ಇದಕ್ಕೆ ಕಾರಣವೇನು ಎಂಬುದು ಬಹುತೇಕರಿಗೆ ತಿಳಿದಿಲ್ಲ.

ವಾಸ್ತವವಾಗಿ ಎಲ್ಲ ರೀತಿಯ ಚೆಕ್‌ಗಳಿಗೆ ಹಿಂಭಾಗದಲ್ಲಿ ಸಹಿ ಮಾಡುವ ಅಗತ್ಯವಿಲ್ಲ. ಸಾಮಾನ್ಯವಾಗಿ ಬೇರರ್ ಚೆಕ್ (Bearer Cheque) ಮೂಲಕ ಹಣ ಪಡೆಯುವ ಸಂದರ್ಭದಲ್ಲಷ್ಟೇ ಬ್ಯಾಂಕ್ ಸಿಬ್ಬಂದಿ ಹಿಂಭಾಗದ ಸಹಿಯನ್ನು ಪಡೆಯುತ್ತಾರೆ.

ಯಾವ ಚೆಕ್‌ಗೆ ಸಹಿ ಬೇಕು?

ಬೇರರ್ ಚೆಕ್ ಅನ್ನು ಯಾರೇ ಬ್ಯಾಂಕ್‌ಗೆ ತೆಗೆದುಕೊಂಡು ಹೋದರೂ ಹಣ ಪಡೆಯಬಹುದು. ಆದ್ದರಿಂದ ಹಣ ಸ್ವೀಕರಿಸಿದ ವ್ಯಕ್ತಿಯ ದಾಖಲೆಗಾಗಿ ಬ್ಯಾಂಕ್ ಸಿಬ್ಬಂದಿ ಚೆಕ್‌ನ ಹಿಂಭಾಗದಲ್ಲಿ ಸಹಿ ಮಾಡಿಸಿಕೊಳ್ಳುತ್ತಾರೆ.

ಇನ್ನೊಂದೆಡೆ ಆರ್ಡರ್ ಚೆಕ್ (Order Cheque) ನಲ್ಲಿ ಹೆಸರಿರುವ ವ್ಯಕ್ತಿಯೇ ಹಣ ಪಡೆಯಲು ಅರ್ಹನಾಗಿರುತ್ತಾನೆ. ಬ್ಯಾಂಕ್ ಈಗಾಗಲೇ ಆ ವ್ಯಕ್ತಿಯ ಗುರುತನ್ನು ಪರಿಶೀಲಿಸುವುದರಿಂದ ಸಾಮಾನ್ಯವಾಗಿ ಹಿಂಭಾಗದಲ್ಲಿ ಹೆಚ್ಚುವರಿ ಸಹಿ ಅಗತ್ಯವಿರುವುದಿಲ್ಲ.

ಹಿಂಭಾಗದ ಸಹಿ ಏಕೆ ಮುಖ್ಯ?

ಬೇರರ್ ಚೆಕ್ ಕಳೆದುಹೋದರೆ ಅಥವಾ ಕಳ್ಳತನವಾದರೆ ದುರುಪಯೋಗವಾಗುವ ಸಾಧ್ಯತೆ ಇರುತ್ತದೆ. ಇಂತಹ ಸಂದರ್ಭಗಳಲ್ಲಿ ಹಣವನ್ನು ಯಾರು ಸ್ವೀಕರಿಸಿದ್ದಾರೆ ಎಂಬುದಕ್ಕೆ ದಾಖಲೆ ಇರಬೇಕಾದ ಕಾರಣ ಬ್ಯಾಂಕ್ ಹಿಂಭಾಗದಲ್ಲಿ ಸಹಿ ಪಡೆಯುತ್ತದೆ.

ಭವಿಷ್ಯದಲ್ಲಿ ಯಾವುದೇ ವಿವಾದ ಉಂಟಾದರೆ, ಹಣವನ್ನು ಸ್ವೀಕರಿಸಿದ ವ್ಯಕ್ತಿಯ ಗುರುತಿನ ಪ್ರಮುಖ ಸಾಕ್ಷಿಯಾಗಿ ಈ ಸಹಿ ಕಾರ್ಯನಿರ್ವಹಿಸುತ್ತದೆ. ಇದೇ ಕಾರಣಕ್ಕೆ ಬ್ಯಾಂಕ್‌ಗಳು ಭದ್ರತಾ ಕ್ರಮವಾಗಿ ಈ ವಿಧಾನವನ್ನು ಅನುಸರಿಸುತ್ತವೆ.

₹50,000ಕ್ಕಿಂತ ಹೆಚ್ಚಿನ ಮೊತ್ತಕ್ಕೆ ಏನು ಮಾಡಬೇಕು?

ಒಂದು ವೇಳೆ ಚೆಕ್ ಮೂಲಕ ₹50,000ಕ್ಕಿಂತ ಹೆಚ್ಚಿನ ಮೊತ್ತ ಪಡೆಯಬೇಕಾದರೆ, ಬ್ಯಾಂಕ್ ಅಧಿಕಾರಿಗಳು ಗುರುತಿನ ಚೀಟಿ (Identity Proof) ಕೇಳಬಹುದು. ಗುರುತು ದೃಢಪಡಿಸಿದ ಬಳಿಕವೇ ಹಣವನ್ನು ನೀಡಲಾಗುತ್ತದೆ.

ಸಹಿ ಮಾಡದಿದ್ದರೆ ಏನಾಗುತ್ತದೆ?

ಹಿಂಭಾಗದಲ್ಲಿ ಸಹಿ ಮಾಡಲು ನಿರಾಕರಿಸಿದರೆ, ಹಣವನ್ನು ತಾವೇ ಸ್ವೀಕರಿಸುತ್ತಿರುವುದಾಗಿ ಪ್ರತ್ಯೇಕ ಅರ್ಜಿ ಅಥವಾ ಘೋಷಣೆ ನೀಡುವಂತೆ ಬ್ಯಾಂಕ್ ಕೇಳಬಹುದು.

ಆದರೆ ಖಾತೆದಾರರು ತಮ್ಮ ಸ್ವಂತ ಖಾತೆಯಿಂದ ಹಣ ಪಡೆಯಲು ಸ್ವತಃ ಬ್ಯಾಂಕ್‌ಗೆ ಬಂದಿದ್ದರೆ, ಕೆಲವು ಸಂದರ್ಭಗಳಲ್ಲಿ ಬೇರರ್ ಚೆಕ್‌ನ ಹಿಂಭಾಗದ ಸಹಿ ಅಗತ್ಯವಿರದೇ ಇರಬಹುದು. ಮೂರನೇ ವ್ಯಕ್ತಿ ಬೇರರ್ ಚೆಕ್ ಮೂಲಕ ಹಣ ಪಡೆಯುವ ಸಂದರ್ಭದಲ್ಲೇ ಈ ನಿಯಮ ಹೆಚ್ಚು ಅನ್ವಯಿಸುತ್ತದೆ.

ಆದ್ದರಿಂದ ಚೆಕ್ ವ್ಯವಹಾರ ನಡೆಸುವ ಮೊದಲು ಅದರ ವಿಧ ಮತ್ತು ಬ್ಯಾಂಕ್ ನಿಯಮಗಳನ್ನು ತಿಳಿದುಕೊಂಡರೆ ಅನಗತ್ಯ ತೊಂದರೆಗಳನ್ನು ತಪ್ಪಿಸಬಹುದು.

Sai Teja | ಸಾಯಿತೇಜ

Sai Teja | ಸಾಯಿತೇಜ ಕಳೆದ 7 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿದ್ದಾರೆ. ಸಾಯಿತೇಜಾ ಅವರು, ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ತಂತ್ರಜ್ಞಾನ ಹಾಗೂ ಬಿಸಿನೆಸ್, ಆಟೋಮೊಬೈಲ್‌ ಕ್ಷೇತ್ರದ ಪತ್ರಿಕೋದ್ಯಮದಲ್ಲಿ ಪರಿಣತಿಯನ್ನು ಹೊಂದಿದ್ದಾರೆ. ಆನ್‌ಲೈನ್‌ ಸುದ್ದಿ ಲೋಕದಲ್ಲಿ ಅಪಾರವಾದ ಜ್ಞಾನವನ್ನು ಹೊಂದಿದ್ದಾರೆ. ಕನ್ನಡ ನ್ಯೂಸ್‌ ನೆಕ್ಸ್ಟ್‌ನಲ್ಲಿ ಉಪ ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ. More »