Rakshit Shetty : ಕವಿಯಾದ್ರು ರಕ್ಷಿತ್ ಶೆಟ್ಟಿ: ಕವನ ಬರೆದು ಟ್ವಿಟ್‌ ಮಾಡಿದ ನಟ

ನಟ ರಕ್ಷಿತ್ ಶೆಟ್ಟಿ(Actor Rakshit Shetty)ಗೆ ಏಪ್ರಿಲ್‌ನಿಂದ ಗುರುಬಲ ಶುರು ಆಗತ್ತೆ ಅಂತ ಜ್ಯೋತಿಷಿಗಳು ಹೇಳಿದ್ದಾರೆ. ಆದರೆ, ರಕ್ಷಿತ್ ಟ್ವಿಟರ್‌(Twitter)ನಲ್ಲಿ ಕವನಗಳನ್ನು ಬರೆಯಲು ಶುರುಮಾಡಿದ್ದಾರೆ. ಮದುವೆಗೂ, ಕವನಕ್ಕೂ ಏನಾದರು ಸಂಬಂಧ ಇದೇಯೋ ಏನೋ ಗೊತ್ತಿಲ್ಲ ಎಂದು ಅಭಿಮಾನಿಗಳು ಪಿಸುಗುಟ್ಟಿದ್ದಾರೆ. ರಕ್ಷಿತ್ ಶೆಟ್ಟಿ ಸಿನಿಮಾದಲ್ಲಿ ನಟನೆ ಮಾಡೋದು ಗೊತ್ತು, ರಕ್ಷಿತ್ ಸಿನಿಮಾ ನಿರ್ದೇಶನ ಮಾಡೋದು ಎಲ್ಲರಿಗೂ ತಿಳಿದ ವಿಚಾರ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ರಕ್ಷಿತ್ ಸಿನಿಮಾ ನಿರ್ಮಾಣ ಕೂಡ ಮಾಡುತ್ತಿದ್ದಾರೆ.

ಈಗ ಈ ಶ್ರೀಮನ್ನಾ‌ರಾಯಣರ ಹೊಸ ಅವತಾರ ಎಂದರೆ ರಕ್ಷಿತ್ ಶೆಟ್ಟಿ ಪೆನ್ನು ಹಿಡಿದಿರುವುದು. ಹೌದು, ಬಾಯಿ ತೆಗೆದರೆ ಕನ್ನಡಕ್ಕಿಂತ ಇಂಗ್ಲೀಷ್‌ನಲ್ಲೇ ಹೆಚ್ಚು ಮಾತನಾಡುವ ರಕ್ಷಿತ್ , ಕನ್ನಡದ ಕವನ ಬರೆದಿದ್ದಾರೆ. ಅದನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಾಕಿಕೊಂಡಿದ್ದಾರೆ.

ಹಾಡದಿರಿ ಮಂಗಳವ, ಕಥೆ ಇನ್ನು ಮುಗಿದಿಲ್ಲ…
ಎದ್ದಾಗ ಹೊಗಳದಿರಿ, ಬಿದ್ದಾಗ ತೆಗಳದಿರಿ
ಆಗು ಹೋಗುಗಳಲಿ ನನ್ನ ಅರಿಯುವ ಯತ್ನ ಮಾಡದಿರಿ
ಆಡದಿರಿ ಕಾಡದಿರಿ, ಅಂತ್ಯವ ನಾ ಕಂಡಿಲ್ಲ
ಹಾಡದಿರಿ ಮಂಗಳವ, ಕಥೆ ಇನ್ನು ಮುಗಿದಿಲ್ಲ

ಹೀಗೆ ಬರೆದು ಹಾಕಿದ್ದಾರೆ. ಇದರಲ್ಲಿ ಅಂಥ್ಯ ಎಂದು ಬರೆದಿದ್ದರು. ಟ್ವೀಟಿಗರು ಅಂಥ್ಯ ಅಲ್ಲ ಅಂತ್ಯ ಎಂದು ರಕ್ಷಿತ್ ತಪ್ಪನ್ನು ತಿದ್ದಿದ್ದಾರೆ.
ರಕ್ಷಿತ್ ಅವರ ಈ ಟ್ವೀಟ್ ಗೆ ಸುಮಾರ್ 3,560 ಜನ ಲೈಕ್, 428 ರೀಟ್ವೀಟ್ ಆಗಿದೆ. ಇದರಿಂದ ಸ್ಫೂರ್ತಿ ಪಡೆದೋ ಏನೋ ರಕ್ಷಿತ್ ತಮ್ಮ ಕವನವನ್ನು ಹೀಗೆ ಮುಂದುವರಿಸಿದ್ದಾರೆ.

ಬದುಕೆಂಬ ಚೌಕಟ್ಟಲಿ ಅದ ಇದರ ಆಯಿಕೆ…
ಅದ ಹೆಕ್ಕಿ, ಇದ ತ್ಯಜಿಸಿ ನಾ ನಾನೆಂಬ ಹೇಳಿಕೆ
ಇಷ್ಟ-ನಷ್ಟಗಳಲಿ ಬೇಕೆ ಪರರ ಅನುಕಂಪ
ಆಯ್ದ ರೂಪವ ಕಳೆದರೆ ಶಿವನೆ ಪ್ರತಿಬಿಂಬ-

ಹೀಗೆ ಮುಂದುವರಿಸಿದ್ದಾರೆ. ಕೊನೆಯಲ್ಲಿ ಇಫ್ ಯು ಥಿಂಕ್ ಎಮ್ಟಿ ವಾಟ್ ಯು ಥಿಂಕ್ ಆಫ್ ಯುವರ್ ಸೆಲ್ಫ್ ಶಿವ ಈಸ್…ಅಂತ ಇಂಗ್ಲೀಷ್ ನಲ್ಲಿ ಕೋಟ್ ಬೇರೆ ಹಾಕಿದ್ದಾರೆ.

ಬಹುಶಃ ರಕ್ಷಿತ್ ಶೆಟ್ಟಿ ತಮ್ಮೊಳಗಿನ ಖಾಲಿತನವನ್ನು ಹುಡುಕಿದ್ದರಿಂದ ಈ ಕವನ ಹುಟ್ಟಿತೋ ಏನೋ. ಅವರ ಕವನವನ್ನು ಒಂದಷ್ಟು ಟ್ವೀಟಿಗರು ಮುಂದುವರಿಸಿದ್ದಾರೆ, ಇನ್ನೊಂದಷ್ಟು ಜನ ಷಹಭಾಷ್ ಅಂತ ಬೆನ್ನುತ್ತಟ್ಟಿದ್ದಾರೆ.

ರಕ್ಷಿತ್ ಬಹುಶಃ ರೋಮ್ಯಾಂಟಿಕ್ ಮೂಡಲ್ಲಿ ಇರಬಹುದು. ಇಷ್ಟು ದಿನ ಬ್ರಹ್ಮಚರ್ಯ ಮೂಡಿಸಿದ್ದ ಖಾಲಿತನದಿಂದ ಈಗ ಕವನದ ಮೂಲಕ ಬಿಡುಗಡೆ ಹೊಂದುತ್ತಿರಬಹುದು. ಕಾರಣ ಇಷ್ಟೇ. ಕಳೆದವಾರವಷ್ಟೇ ರಕ್ಷಿತ್ ಜ್ಯೋತಿಷಿಗಳ ಬಳಿಹೋಗಿದ್ದರು. ಅವರು ಏಪ್ರಿಲ್ ತಿಂಗಳಿಂದ ಗುರುಬಲ ಬಂದೇ ಬರುತ್ತದೆ. ಒಂದು ವರ್ಷದಲ್ಲಿ ಮದುವೆಯಾಗುತ್ತದೆ ಅಂಥ ಭವಿಷ್ಯ ನುಡಿದಿದ್ದರು. ಇದೇ ಸಂದರ್ಭದಲ್ಲಿ ನಟಿ ರಮ್ಯಾ ಕೂಡ ನಿಮಗೆ ಮುಂದಿನ ತಿಂಗಳು ಗುಡ್ ನ್ಯೂಸ್ ಕೊಡ್ತೀನಿ ಅಂತ ಕೂಡ ಹೇಳಿದ್ದು ನೋಡಿದರೆ,ರಕ್ಷಿತ್ ಶೆಟ್ಟಿಗೆ ಕಂಕಣಭಾಗ್ಯ ಕೂಡಿಬರುವುದು ಗ್ಯಾರಂಟಿ ಅನ್ನೋ ಮಾತು ಕೇಳಿಬರುತ್ತಿದೆ. ಇದಕ್ಕೆ ಪೂರಕವಾಗಿ ರಕ್ಷಿತ್ ಶೆಟ್ಟಿ ಈಗ ಕವನ ಬರೆಯಲು ಶುರುಮಾಡಿರುವುದು ಮದುವೆಯ ಮೂಡಿಗೆ ಇಂಬು ನೀಡುತ್ತಿದೆಯೋ ಏನೋ ಗೊತ್ತಿಲ್ಲ.

ಇದನ್ನೂ ಓದಿ: Rakshit Shetty- Ramya: ರಕ್ಷಿತ್ ಶೆಟ್ಟಿ ಮತ್ತು ರಮ್ಯಾ ಮದುವೆಯಾಗ್ತಾರಾ? ಇಲ್ಲಿದೆ ಬಿಗ್ ಅಪ್‌ಡೇಟ್

(Actor Rakshit Shetty Shared Poems in Twitter)

Comments are closed.