Ramya : ಎಲ್ಲಿದ್ದಾರೆ ರಮ್ಯಾ? ಚಂದನವನದಲ್ಲಿ ಮತ್ತೆ ಶುರುವಾಗಲಿದೆಯೇ ರಮ್ಯ ಚೈತ್ರಕಾಲ?

ನಟಿ ರಮ್ಯಾ ( Ramya) ಎಲ್ಲಿದ್ದಾರೆ, ಇದು ಮಿಲಿಯನ್ ಡಾಲರ್ ಪ್ರಶ್ನೆ. ಇದನ್ನು ಹಿಡಿದು ಗಾಂಧೀನಗರ ಸುತ್ತಿದರೂ, ವಿಧಾನಸೌಧದ ಪಡಸಾಲೆ ಅಲೆದರೂ, ಕಾಂಗ್ರೆಸ್ ಪಕ್ಷದ ಓಣಿಗಳಲ್ಲಿ ಅಡ್ಡಾಡಿದಿರೂ ಉತ್ತರ ಸಿಗುವುದಿಲ್ಲ. ರಮ್ಯ ಅಷ್ಟರ ಮಟ್ಟಿಗೆ ಗುಪ್ತ್ ಗುಪ್ತ್.

ರಮ್ಯಾ ಗಾಂಧಿನಗರದಿಂದ ದೂರ ನಿಂತು ವರ್ಷಾನುವರ್ಷಗಳು ಕಳೆದಿವೆ. ಈ ಮಧ್ಯೆ ರಮ್ಯಾ ಅವರ ದಿಗ್ದರ್ಶನವಾಗಿದ್ದು ಪುನೀತ್ ಅವರ ನಿಧನರಾದಾಗ. ಆಗ ಕಾಣಿಸಿಕೊಂಡ ರಮ್ಯಾರು ಎಲ್ಲರಲ್ಲೂ ಜಲಕ್ ಮೂಡಿಸಿದ್ದರು. ಈಗ್ಗೆ ಕೆಲ ವರ್ಷಗಳ ಹಿಂದೆ, ರಮ್ಯಾ ಮತ್ತೆ ಚಿತ್ರರಂಗಕ್ಕೆ ಬರುತ್ತಾರೆ ಅನ್ನೋ ಸುದ್ದಿ ಜೋರಾಗಿತ್ತು. ಅದನ್ನು ಸಾರಾಸಗಟಾಗಿ ತಳ್ಳಿ ಹಾಕಿದ್ದ ರಮ್ಯಾ ತಮ್ಮ ಗಮ್ಯವನ್ನು ಮಾತ್ರ ಬಿಟ್ಟುಕೊಟ್ಟಿರಲಿಲ್ಲ.

ಈಗ ಮತ್ತೆ ರಮ್ಯಾ ಮರಳಿ ಮನೆಗೆ ಅನ್ನೋ ಸುದ್ದಿಯಾಗಿದೆ. ನಿಜವೋ ಸುಳ್ಳೋ ತಿಳಿಯದಾದರೂ, ಮೊನ್ನೆ ಡಿಸೆಂಬರ್ 3ರ ಶುಭ ಶುಕ್ರವಾರದಂದು ರಮ್ಯಾ ಮತ್ತೆ ಬೆಂಗಳೂರ ಹೊಸ್ತಿಲು ಮೆಟ್ಟಿದ್ದಾರೆ.  ರಮ್ಯಾ ಮತ್ತೆ ಸಿನಿಮಾ ನಟಿಸುತ್ತಾರೆ ಅನ್ನೋ ಮಾತು ಇತ್ತೀಚೆಗಷ್ಟೇ ಗಾಂಧೀನಗರದಲ್ಲಿ ಕೇಳಿಸಿತ್ತು. ಈಗ ರಮ್ಯಾರ ಆಗಮನವನ್ನೂ, ಈ ಮಾತುಗಳನ್ನೂ ಒಟ್ಟೊಟ್ಟಿಗೆ ಇಟ್ಟಾಗ ರಮ್ಯಾ ಮತ್ತೆ ಸಿನಿಮಾ ಮಾಡುತ್ತಾರೆ ಅನ್ನೋ ಗಾಸಿಪ್ ಗೆ ಜೀವಬಂದಂತಾಗುತ್ತದೆ.

ಸಿನಿಮಾದಲ್ಲಿ ನಟಿಸುವ ಬಗ್ಗೆ ಕೂಡ ರಮ್ಯಾ ಎಲ್ಲೂ ತುಟಿ ಎರಡು ಮಾಡಿಲ್ಲ.  ಬದಲಾಗಿ, ತಮ್ಮ ಟ್ವಿಟರ್ ನಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕೊರೊನಾ ಪರೀಕ್ಷೆಗಳು ಬಹಳ ಸುಲಭವಾಗಿ ನಡೆಯುತ್ತಿವೆ. ವೈದ್ಯಕೀಯ ಸಿಬ್ಬಂದಿಗಳು ಕೊರೊನಾಕ್ಕೆಂದು ಅದ್ಭುತ ವ್ಯವಸ್ಥೆ ಮಾಡಿದ್ದಾರೆ. ಇದಕ್ಕಾಗಿ ಎಲ್ಲರಿಗೂ ಧನ್ಯವಾದಗಳು ಅಂತ ಬರೆದುಕೊಂಡಿದ್ದಾರೆ ರಮ್ಯಾ.

ಬೆಂಗಳೂರು ಏರ್ಪೋರ್ಟ್ ಅಂದಾಕ್ಷಣ ಎಲ್ಲರಿಗೂ ಭಯವಾಗೋದು. ಎಮಿಕ್ರಾನ್ ವೈರಾಣು ಎಲ್ಲೆಡೆ ಹಬ್ಬುತ್ತಿದೆ. ನಾನು ಬೆಂಗಳೂರಿಗೆ ಬಂದಾಕ್ಷಣ ಕೊರೊನಾ ಟೆಸ್ಟ್ ಮಾಡಿಸಿಕೊಂಡಿದ್ದೇನೆ. ನೀವು ಮಾಡಿಸಿಕೊಳ್ಳಿ ಎನ್ನುವ ಸಂದೇಶ ಕೂಡ ನೀಡಿದ್ದಾರೆ. ಇಷ್ಟೆಲ್ಲ ಬರೆದುಕೊಂಡ ರಮ್ಯಾ ಮತ್ತೆ ಸಿನಿಮಾ ಮಾಡ್ತೀನೋ ಇಲ್ವೋ ಅಂಥ ಮಾತ್ರ ಹೇಳಿಲ್ಲ. ರಾಜಕೀಯ ರಂಗದಲ್ಲಿ ಇದ್ದೀನೀ ಅಂತಾನೂ ತಿಳಿಸಿಲ್ಲ. ಒಟ್ಟಾರೆ, ರಮ್ಯಾ ಎಲ್ಲಿದ್ದಾರೆ, ಹೇಗಿದ್ದಾರೆ, ಏನು ಮಾಡ್ತಾ ಇದ್ದಾರೆ ಅನ್ನೋದು ಮಾತ್ರ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

ಆಗಾಗ, ಟ್ವಿಟರ್ ನಲ್ಲಿ ಮಾತನಾಡುವ ಈಕೆ ಭವಿಷ್ಯದ ನಡೆ ಏನು ಅನ್ನೋದು ಮಾತ್ರ ಆಕೆಗೆ ಬಿಟ್ಟರೆ ಯಾರಿಗೂ ತಿಳಿಯದ ರಹಸ್ಯ. ಸಧ್ಯ, ರಮ್ಯಾ ಬೆಂಗಳೂರಲ್ಲಿ ಇದ್ದಾರೆ. ಆದರೆ, ಎಲ್ಲಿದ್ದಾರೆ ಅಂತ ಮಾತ್ರ ಕೇಳಬೇಡಿ.

ಇದನ್ನೂ ಓದಿ: Sidlingu: ಮತ್ತೆ ಬರಲಿದೆ ಲೂಸ್ ಮಾದನ ಸಿದ್ಲಿಂಗು ಸಿನಿಮಾ: ನಾಯಕಿಯಾಗ್ತಾರಾ ನಟಿ ರಮ್ಯಾ?

ಇದನ್ನೂ ಓದಿ : Puneeth Rajkumar dream project Gandhada Gudi : ಪುನೀತ್ ರಾಜ್ ಕುಮಾರ್ ಕನಸು : ಗಂಧದಗುಡಿ ಟೀಸರ್ ತೆರೆಗೆ

(Actress Former MP Ramya found in Bengaluru Kempegowda Airport)

Comments are closed.