Ring Road Puneeth Name : ಬೆಂಗಳೂರಿನ ರಿಂಗ್ ರೋಡ್ ಗೆ ಪುನೀತ್ ರಾಜ್‌ ಕುಮಾರ್ ಹೆಸರು

ಕಳೆದ ಮೂರು ತಿಂಗಳಿನಿಂದ ನೋವಿನಲ್ಲೇ ಇದ್ದ ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗೆ ಸಿಹಿಸುದ್ದಿಯೊಂದು ಎದುರಾಗಿದೆ. ಬಹುದಿನಗಳಿಂದ ಪ್ರಸ್ತಾಪದಲ್ಲಿದ್ದ ಬೆಂಗಳೂರಿನ ಉದ್ದದ ರಸ್ತೆಗೆ ಪುನೀತ್ ರಾಜ್ ಕುಮಾರ್ (Ring Road Puneeth Name) ಹೆಸರಿಡುವ ಪ್ರಸ್ತಾಪಕ್ಕೆ ಸಮ್ಮತಿ ಸಿಕ್ಕಿದ್ದು, ಸದ್ಯದಲ್ಲೇ ಸ್ವತಃ ಸಿಎಂ ಬಸವರಾಜ್ ಬೊಮ್ಮಾಯಿ 12 ಕಿಲೋ ಮೀಟರ್ ಉದ್ದದ ರಸ್ತೆಗೆ ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೆಸರಿಡಲಿದ್ದಾರೆ.

ಎರಡು ಲೋಕಸಭಾ ಕ್ಷೇತ್ರ, ಆರು ವಿಧಾನಸಭಾ ಕ್ಷೇತ್ರ ಹಾಗೂ ಬಿಬಿಎಂಪಿಯ 14 ವಾರ್ಡ್ ಗಳನ್ನು ಹಾದು ಹೋಗುವ ಮೈಸೂರು ರಸ್ತೆ ನಾಯಂಡನಹಳ್ಳಿ ಜಂಕ್ಷನ್ ನಿಂದ ಹೊಸಕೆರೆಹಳ್ಳಿ, ದೇವೇಗೌಡ್ ಪೆಟ್ರೋಲ್ ಬಂಕ್, ಕದಿರೇನ್ ಹಳ್ಳಿ ಪಾರ್ಕ್, ಸಾರಕ್ಕಿ ಸಿಗ್ನಲ್, ಜೆಪಿನಗರ ಮಾರ್ಗವಾಗಿ ಬನ್ನೇರುಘಟ್ಟ ವೇಗಾಸಿಟಿ ಮಾಲ್ ಜಂಕ್ಷನ್ ವರೆಗಿನ ಒಟ್ಟು‌12 ಕಿಲೋಮೀಟರ್ ರಸ್ತೆಗೆ ಪುನೀತ್ ರಾಜ್ ಕುಮಾರ್ ಹೆಸರಿಡಲಾಗುತ್ತದೆ.

ಈ ಬಗ್ಗೆ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷರು ಮತ್ತು ಬಿಬಿಎಂಪಿ ಅಡಳಿತ ಪಕ್ಷದ ಮಾಜಿ ನಾಯಕರಾದ ಎನ್.ಆರ್‌.ರಮೇಶ್ ಅವರು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಮನವಿ ನೀಡಿದ್ದರು. ಈ ಮನವಿಯಂತೆ 12 ಕಿಲೋಮೀಟರ್ ರಸ್ತೆಯ ನಕ್ಷೆಯನ್ನು ತಯಾರಿಸಿ ಈ ವ್ಯಾಪ್ತಿಯ ಸಾರ್ವಜನಿಕರ ಆಕ್ಷೇಪಣೆಗೆ ಅವಕಾಶ ಕಲ್ಪಿಸಲಾಗಿತ್ತು. ಈ ವೇಳೆ 700 ಕ್ಕೂ ಹೆಚ್ಚು ಜನರು,ರಸ್ತೆಗೆ ಹೊಂದಿಕೊಂಡಿರುವ 09 ಬಡಾವಣೆಗಳ ಕ್ಷೇಮಾಭಿವೃದ್ಧಿ ಸಂಘಗಳ ಪದಾಧಿಕಾರಿಗಳು ರಸ್ತೆಗೆ ಅಪ್ಪು ಹೆಸರಿಡುವ ಪ್ರಸ್ತಾಪದ ಪರವಾಗಿ ಸಹಿ ಮಾಡಿದ್ದಾರೆ.

ಪ್ರಸ್ತಾಪದ ಉದ್ದಕ್ಕೂ ಒಬ್ಬರೇ ಒಬ್ಬರು ಕೂಡಾ ಪುನೀತ್ ರಾಜ್ ಕುಮಾರ್ ಹೆಸರಿಡುವ ಪ್ರಸ್ತಾಪದ ವಿರುದ್ಧ ಸಹಿ ಹಾಕದೇ ಇರೋದು ಪುನೀತ್ ರಾಜ್ ಕುಮಾರ್ ಜನಪ್ರಿಯತೆಗೆ ಸಾಕ್ಷಿ ಒದಗಿಸಿದೆ. ಸದ್ಯ ಈ ಪ್ರಸ್ತಾಪಕ್ಕೆ ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ ಸಿಂಗ್ ಅನುಮೋದನೆ ನೀಡಿದ್ದು, ಸದ್ಯದಲ್ಲೇ ಪುನೀತ್ ರಾಜ್ ಕುಮಾರ್ ಕುಟುಂಬಸ್ಥರ ಸಮ್ಮುಖದಲ್ಲಿ ನಡೆಯುವ ಸಮಾರಂಭದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಈ ರಸ್ತೆಗೆ ಪುನೀತ್ ರಾಜ್ ಕುಮಾರ್ ಹೆಸರಿಡಲಿದ್ದಾರೆ.

ಕಾಕತಾಳಿಯ ಎಂಬಂತೆ ಈಗಾಗಲೇ ಗೋರಗುಂಟೆ ಪಾಳ್ಯದ ಮೈಸೂರು ರಸ್ತೆಯನಾಯಂಡನಳ್ಳಿ ಜಂಕ್ಷನ್ ವರೆಗಿನ ವರ್ತುಲ ರಸ್ತೆಗೆ 2015 ರಲ್ಲಿ ಡಾ.ರಾಜ್ ಕುಮಾರ್ ಪುಣ್ಯಭೂಮಿ ರಸ್ತೆ ಎಂದು ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಗಿತ್ತು. ಈಗ ಅದೇ ರಸ್ತೆಯ ಮುಂದುವರೆದ ಭಾಗಕ್ಕೆ ಡಾ.ರಾಜ್ ಪುತ್ರ ಪುನೀತ್ ಹೆಸರನ್ನು ಇಡಲಾಗುತ್ತಿದೆ. ಈಗಾಗಲೇ ರಾಜ್ಯದ ಹಲವೆಡೆ ಉದ್ಯಾನವನ,ರಸ್ತೆ,ಕಲಾಮಂದಿರಗಳಿಗೆ ಪುನೀತ್ ಹೆಸರಿಡಲಾಗಿದ್ದು, ಬಿಬಿಎಂಪಿ ಆವರಣದಲ್ಲಿ ಪುನೀತ್ ಪುತ್ಥಳಿ ಸ್ಥಾಪನೆ ಕಾರ್ಯ ಅಂತಿಮ ಹಂತದಲ್ಲಿದೆ.

ಇದನ್ನೂ ಓದಿ : ಕೆಜಿಎಫ್- 2 ಗೆ ಬಾಲಿವುಡ್ ಕಂಟಕ : ಏಪ್ರಿಲ್ 14 ರಂದೇ ತೆರೆಗೆ ಬರಲಿದೆ ಜೆರ್ಸಿ ಸಿನಿಮಾ

ಇದನ್ನೂ ಓದಿ : ಸನ್ನಿ ಲಿಯೋನ್ ಪಾನ್ ಕಾರ್ಡ್ ಗೂ ಕನ್ನ: 2 ಸಾವಿರ ರೂಪಾಯಿ ಸಾಲ ಪಡೆದ ಭೂಪ, ದುಃಖ ತೋಡಿಕೊಂಡ ನೀಲಿತಾರೆ

(Bangalore city Ring Road to Name after Actor Puneeth Raj kumar)

Comments are closed.