ʼಸಾಧು ಕೋಕಿಲ 3 ರಿಂದ 5 ಲಕ್ಷ ಲಂಚ ಕೇಳಿದ್ರುʼ- ಕೇಳಿಬಂತು ಗಂಭೀರ ಆರೋಪ
bengaluru Film Festival | Sadhu Kokila: ಬೆಂಗಳೂರು: ರಾಜಧಾನಿಯಲ್ಲಿ ಅದ್ಧೂರಿಯಾಗಿ ನಡೆಯುತ್ತಿರುವ 17ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಈಗ ರಾಜಕೀಯ ಕೆಸರೆರಚಾಟಕ್ಕೆ ವೇದಿಕೆಯಾಗಿದೆ. ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ ಅವರು ಸಿನಿಮಾ ಪ್ರದರ್ಶನಕ್ಕೆ ಲಂಚ ಕೇಳಿದ್ದಾರೆ ಎಂಬ ಆರೋಪವನ್ನು ಮುಂದಿಟ್ಟುಕೊಂಡು ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.
ಆರೋಪದ ಹಿನ್ನೆಲೆ ಏನು?
ಪರಮ್ ಗುಬ್ಬಿ ಎಂಬುವವರು ಸೋಶಿಯಲ್ ಮೀಡಿಯಾದಲ್ಲಿ ಮಾಡಿದ್ದ ಪೋಸ್ಟ್ ಈಗ ದೊಡ್ಡ ವಿವಾದವಾಗಿ ಮಾರ್ಪಟ್ಟಿದೆ. “ಚಲನಚಿತ್ರೋತ್ಸವದಲ್ಲಿ ಸಿನಿಮಾ ಪ್ರದರ್ಶನ ಕಾಣಬೇಕಾದರೆ ಸಾಧು ಕೋಕಿಲ ಮತ್ತು ಮುರಳಿ ಅವರಿಗೆ 3 ರಿಂದ 5 ಲಕ್ಷ ರೂಪಾಯಿ ಲಂಚ ನೀಡಬೇಕು. ಹಣ ನೀಡಿದ್ದರೆ ನಮ್ಮ ಚಿತ್ರವೂ ಆಯ್ಕೆಯಾಗುತ್ತಿತ್ತು” ಎಂದು ಅವರು ಗಂಭೀರವಾಗಿ ಆರೋಪಿಸಿದ್ದರು.
ಬಿಜೆಪಿಯ ತೀಕ್ಷ್ಣ ವಾಗ್ದಾಳಿ
ಈ ಫೇಸ್ಬುಕ್ ಪೋಸ್ಟ್ ಅನ್ನು ಆಧಾರವಾಗಿಟ್ಟುಕೊಂಡು ಬಿಜೆಪಿ ಟ್ವೀಟ್ ಮಾಡಿದ್ದು, ಕಾಂಗ್ರೆಸ್ ಸರ್ಕಾರದ ವಿರುದ್ಧ ಕಮಿಷನ್ ದಂಧೆಯ ಆರೋಪ ಹೊರಿಸಿದೆ. “ಕಾಂಗ್ರೆಸ್ ಸರ್ಕಾರದ ಕಮಿಷನ್ ದಂಧೆ ಈಗ ವಿಧಾನಸೌಧದಿಂದ ಫಿಲ್ಮ್ ಚೇಂಬರ್ವರೆಗೂ ಹಬ್ಬಿದೆ” ಎಂದು ಬಿಜೆಪಿ ಟೀಕಿಸಿದೆ. “ಸಿನಿಮಾ ಪ್ರದರ್ಶನಕ್ಕೆ ಲಂಚ ಕೇಳಿರುವುದು ರಾಜ್ಯದ ಇತಿಹಾಸದಲ್ಲೇ ಮೊದಲು. ಸಾಧು ಕೋಕಿಲ ಮಾಡುತ್ತಿರುವ ಈ ಕಲೆಕ್ಷನ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪಾಲೆಷ್ಟು?” ಎಂದು ಬಿಜೆಪಿ ನೇರವಾಗಿ ಪ್ರಶ್ನಿಸಿದೆ.
ವಿವಾದಗಳ ಸುಳಿಯಲ್ಲಿ ಚಿತ್ರೋತ್ಸವ
ಈ ಬಾರಿಯ ಚಿತ್ರೋತ್ಸವ ಮೊದಲಿನಿಂದಲೂ ಸುದ್ದಿಯಲ್ಲಿದೆ. ಆರಂಭದಲ್ಲಿ ರಾಯಭಾರಿ ಪ್ರಕಾಶ್ ರಾಜ್ ಅವರು ಪ್ಯಾಲಿಸ್ಟೈನ್ ಸಿನಿಮಾಗಳ ಪ್ರದರ್ಶನಕ್ಕೆ ಅವಕಾಶ ನೀಡದ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಈಗ ಲಂಚದ ಆರೋಪ ಕೇಳಿಬಂದಿರುವುದು ಅಕಾಡೆಮಿಗೆ ಮುಜುಗರ ತಂದಿಟ್ಟಿದೆ.



