ಡಾ. ರಾಜ್‌ಕುಮಾರ್‌ 17ನೇ ವರ್ಷದ ಪುಣ್ಯತಿಥಿ : ಭಾವನ್ಮಾಕವಾಗಿ ನಮನ ಸಲ್ಲಿಸಿದ ಸಿಎಂ ಬೊಮ್ಮಾಯಿ

ಕನ್ನಡ ಸಿನಿರಂಗ ಹಾಗೂ ರಂಗಭೂಮಿಗಳ ಮೇರುನಟರಾಗಿ ಮಿಂಚಿ ಮರೆಯಾದ ಕರುನಾಡು ಮೆಚ್ಚಿದ ನಟ ಡಾ.ರಾಜ್‌ಕುಮಾರ್‌ (Dr. Rajkumar Death Anniversary) ಅವರ 17ನೇ ವರ್ಷದ ಪುಣ್ಯತಿಥಿ ಆಗಿದ್ದು, ಅವರ ಸ್ಮಾರಕದ ಬಳಿ ಅಭಿಮಾನಿಗಳು ಕುಟುಂಬದವರು ಪುಷ್ಪ ನಮನ ಸಲ್ಲಿಸಿದ್ದಾರೆ. ಕರ್ನಾಟಕದ ಅತ್ಯಂತ ಜನಪ್ರಿಯ ಹಾಗೂ ಪ್ರಮುಖ ನಟರಾಗಿದ್ದ, ಡಾ ರಾಜ್‌ಕುಮಾರ್‌ ಅವರು ಕನ್ನಡ ಸಿನಿರಂಗದಲ್ಲಿ ನಟನೆ, ಗಾಯನ ಮತ್ತು ಸಿನಿಮಾ ನಿರ್ಮಾಣದ ಮೂಲಕ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅಷ್ಟೇ ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಡಾ. ರಾಜ್‌ಕುಮಾರ್‌ ಅವರ ಪುಣ್ಯ ಸ್ಮರಣೆಗೆ ನಮನಗಳನ್ನು ಸಲ್ಲಿಸಿದ್ದು, ಸಿಎಂ ಬೊಮ್ಮಾಯಿ ಕೂಡ ಭಾವನ್ಮಾಕವಾಗಿ ನಮನ ಸಲ್ಲಿಸಿದ್ದಾರೆ.

ಸಿಎಂ ಬಸವರಾಜ್‌ ಬೊಮ್ಮಾಯಿ ತಮ್ಮ ಟ್ವೀಟ್‌ನಲ್ಲಿ, “ಕೋಟ್ಯಂತರ ಅಭಿಮಾನಿಗಳ ಹೃದಯಮಂದಿರದಲ್ಲಿ ಸದಾ ಚಿರಸ್ಥಾಯಿಯಾಗಿರುವ ನಾಡಿನ ಹೆಮ್ಮೆ,ಕಲಾಸರಸ್ವತಿಯ ವರಪುತ್ರ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ, ವರನಟ , ಡಾ|| ರಾಜ್ ಕುಮಾರ್ ರವರ ಪುಣ್ಯಸ್ಮರಣೆಯಂದು ಅವರಿಗೆ ಅಭಿಮಾನಪೂರ್ವಕ ನಮನಗಳು” ಎಂದು ಪೋಸ್ಟ್‌ ಮಾಡಿದ್ದಾರೆ. ಒಂದೆಡೆ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ಈ ಸಂದರ್ಭದಲ್ಲೂ ಕೂಡ ಬೊಮ್ಮಾಯಿಯವರು ಹಿರಿಯ ನಟನ ಪುಣ್ಯ ಸ್ಮರಣೆಯನ್ನು ನೆನೆದು ನಮನವನ್ನು ಸಲ್ಲಿಸಿದ್ದಾರೆ.

ಅಂತಿಮ ದಿನಗಳಲ್ಲಿ ಮಂಡಿನೋವು ಹಾಗು ಎದೆನೋವಿನಿಂದ ಬಳಲಿದ ಡಾ. ರಾಜ್, 12 ಏಪ್ರಿಲ್ 2006 ಬುಧವಾರದಂದು ಮಧ್ಯಾಹ್ನ 1.55ರ ಸುಮಾರಿಗೆ, ಬೆಂಗಳೂರಿನಲ್ಲಿ ತಮ್ಮ ಕೊನೆಯುಸಿರೆಳೆದರು. ಕನ್ನಡ ಸಿನಿರಂಗದ ದಂತಕಥೆಯಾಗಿದ್ದ ಡಾ. ರಾಜ್ ಅವರ ಅಗಲಿಕೆಯಿಂದ, ಒಂದು ಸುವರ್ಣ ಯುಗದ ಅಂತ್ಯವಾದಂತಾಯಿತು. ಡಾ. ರಾಜ್ ಅವರ ಸ್ವ-ಇಚ್ಛೆಯಂತೆ, ಮರಣೋತ್ತರವಾಗಿ ಅವರ ಕಣ್ಣುಗಳನ್ನು ನಾರಾಯಣ ನೇತ್ರಾಲಯಕ್ಕೆ ದಾನ ಮಾಡಲಾಯಿತು.

ಮೃತರ ಪಾರ್ಥಿವ ಶರೀರವನ್ನು ಅಭಿಮಾನಿಗಳು, ಬಂಧುಮಿತ್ರರ ದರ್ಶನಕ್ಕಾಗಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಇಡಲಾಗಿತ್ತು. ಅಪಾರ ಸಂಖ್ಯೆಯ ಜನಸ್ತೋಮ ಅಂತಿಮ ದರ್ಶನದಲ್ಲಿ ಪಾಲ್ಗೊಂಡಿತ್ತು. 13 ಏಪ್ರಿಲ್ 2006ರಂದು, ಬೆಂಗಳೂರಿನ ನಂದಿನಿ ಲೇಔಟ್‌ನಲ್ಲಿರುವ ಕಂಠೀರವ ಸ್ಟುಡಿಯೊ ಆವರಣದಲ್ಲಿ ಡಾ. ರಾಜ್ ಪಾರ್ಥಿವ ಶರೀರದ ಅಂತ್ಯಸಂಸ್ಕಾರವು ನಡೆಯಿತು. ಇವೆರಡು ದಿನ (ಏಪ್ರಿಲ್ 12 ಮತ್ತು 13), ಬೆಂಗಳೂರಿನಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಉಂಟಾಗಿತ್ತು.

ಇವರಿಗೆ ವರನಟ, ನಟಸಾರ್ವಭೌಮ ಮೊದಲಾದ ಬಿರುದುಗಳು ಮತ್ತು ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಹಾಗೂ ಹಂಪಿ ವಿಶ್ವವಿದ್ಯಾಲಯದಿಂದ ನಾಡೋಜ ಪದವಿಯನ್ನು ಪಡೆದ ಮೊದಲ ನಟರಾಗಿ ಗುರುತಿಸಿಕೊಂಡಿದ್ದಾರೆ. ಭಾರತೀಯ ಸಿನಿರಂಗ ನೂರು ವರ್ಷ ಪೂರೈಸಿದ ಸಂದರ್ಭದಲ್ಲಿ ಫೋರ್ಬ್ಸ್ ಪತ್ರಿಕೆಯು ಪ್ರಕಟಿಸಿರುವ 25 ಅತ್ಯದ್ಭುತ ನಟನೆಗಳ ಪಟ್ಟಿಯಲ್ಲಿ ಡಾ. ರಾಜ್ ಕುಮಾರ್ ಅವರ ಬಂಗಾರದ ಮನುಷ್ಯ ಚಿತ್ರದ ನಟನೆಯೂ ಒಂದಾಗಿದೆ.

ಕನ್ನಡ ರಂಗಭೂಮಿಯ ಹೆಸರಾಂತ ಪ್ರತಿಭೆ ಸಿಂಗನಲ್ಲೂರು ಪುಟ್ಟಸ್ವಾಮಯ್ಯ ಮತ್ತು ಲಕ್ಷ್ಮಮ್ಮ ದಂಪತಿಗಳ ಹಿರಿಯ ಮಗನಾಗಿ, ಚಾಮರಾಜನಗರ ಜಿಲ್ಲೆಯ ಗಡಿಭಾಗದಲ್ಲಿರುವ ದೊಡ್ಡ ಗಾಜನೂರಿನಲ್ಲಿ 1929ರ ಏಪ್ರಿಲ್ 24ರಂದು ರಾಜ್‌ಕುಮಾರ್ ಜನಿಸಿದ್ದಾರೆ. ಇವರ ಹುಟ್ಟು ಹೆಸರು ಮುತ್ತುರಾಜು(ಮುತ್ತಣ್ಣ) ಆಗಿರುತ್ತದೆ. ಡಾ. ರಾಜ್ ಅವರಿಗೆ ವರದರಾಜ್ ಎಂಬ ಸಹೋದರರೂ, ಶಾರದಮ್ಮ ಎಂಬ ತಂಗಿಯೂ ಇದ್ದರು. 1953 ಜೂನ್ 25ರಂದು ಪಾರ್ವತಿಯವರೊಡನೆ ವೈವಾಹಿಕ ಜೀನಕ್ಕೆ ಕಾಲಿಟ್ಟಿದ್ದರು.

ಇದನ್ನೂ ಓದಿ : ಇಂದು ಡಾ. ರಾಜ್‌ಕುಮಾರ್‌ 17ನೇ ವರ್ಷದ ಪುಣ್ಯತಿಥಿ : ಸ್ಮಾರಕ ಬಳಿ ಸೇರಿದ ಜನಸ್ತೋಮ

ಪಾರ್ವತಿಯವರು ಮುಂದೆ ಪಾರ್ವತಮ್ಮ ರಾಜ್‌ಕುಮಾರ್ ಎಂದೇ ಕನ್ನಡದ ಜನತೆಗೆ ಚಿರ ಪರಿಚಿತರಾಗಿ ಕನ್ನಡ ಸಿನಿರಂಗದ ಪ್ರಮುಖ ಸಿನಿಮಾ ನಿರ್ಮಾಪಕರಲ್ಲೊಬ್ಬರಾದರು. ವಜ್ರೇಶ್ವರಿ ಸಂಸ್ಥೆಯ ಅಡಿಯಲ್ಲಿ ಹಲವಾರು ಕನ್ನಡ ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಡಾ. ರಾಜ್ ದಂಪತಿಗಳಿಗೆ 5 ಜನ ಮಕ್ಕಳು. ಮೂರು ಜನ ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳು. ಗಂಡು ಮಕ್ಕಳಾದ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ಕನ್ನಡ ಸಿನಿರಂಗದ ನಾಯಕ ನಟರಾಗಿದ್ದಾರೆ.

Dr. Rajkumar Death Anniversary : Dr. Rajkumar’s 17th death anniversary: CM Bommai pays emotional tributes

Comments are closed.