ಡಾ. ವಿಷ್ಣುವರ್ಧನ್ ಸ್ಮಾರಕ ಉದ್ಘಾಟನೆ : ಇದರ ಒಳಗೆ ಏನೇನೂ ಇದೆ ಗೊತ್ತಾ ?

ಸ್ಯಾಂಡಲ್‌ವುಡ್‌ ದಿಗ್ಗಜ ನಟರಲ್ಲಿ ಒಬ್ಬರಾದ ವಿಷ್ಣುವರ್ಧನ್ ಅವರು ಅಗಲಿದ ಹದಿಮೂರು ವರ್ಷದ ಬಳಿಕ ಅವರ ಸ್ಮಾರಕ (Dr. Vishnuvardhan Memorial Special) ಇಂದು ಜನವರಿ 29 ರಂದು ಉದ್ಘಾಟನೆ ಆಗಲಿದೆ. 2009 ರ ಡಿಸೆಂಬರ್ 20 ರಂದು ನಮ್ಮನ್ನಗಲಿದ ನಟ ವಿಷ್ಣುವರ್ಧನ್ ಅವರ ಅಂತಿಮ ಕಾರ್ಯವನ್ನು ಬೆಂಗಳೂರಿನ ಅಭಿಮಾನ್ ಸ್ಟುಡಿಯೋ ದಲ್ಲಿ ಮಾಡಲಾಗಿತ್ತು. ಅಲ್ಲಿಯೇ ಸ್ಮಾರಕ ನಿರ್ಮಾಣಕ್ಕೂ ಆಗಿನ ಸರಕಾರ ಯೋಜಿಸಿತ್ತು ಆದರೆ ಅಭಿಮಾನ್ ಸ್ಟುಡಿಯೋ ಒಡೆಯರಾಗಿರುವ ಹಿರಿಯ ನಟ ಬಾಲಣ್ಣ ಅವರ ಕುಟುಂಬದವರು ಒಪ್ಪಿಗೆ ನೀಡದ ಕಾರಣ ಅಲ್ಲಿ ಸಾಧ್ಯವಾಗಿರಲಿಲ್ಲ.

ಆ ನಂತರ ಕೆಂಗೇರಿಯ ಮೈಲಸಂದ್ರದ ಬಳಿ ವಿಷ್ಣು ಸ್ಮಾರಕಕ್ಕಾಗಿ ಭೂಮಿ ಗುರುತಿಸಲಾಯ್ತಾದರೂ ಬೇರೆ ಬೇರೆ ಕಾರಣಕ್ಕೆ ಸ್ಮಾರಕ ನಿರ್ಮಾಣವಾಗಲಿಲ್ಲ. ಇದೀಗ ಮೈಸೂರಿನ ಎಚ್‌ಡಿ ಕೋಟೆ ರಸ್ತೆಯ ಹಾಲಾಳು ಗ್ರಾಮದಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣವಾಗಿದ್ದು, ಸಿಎಂ ಬೊಮ್ಮಾಯಿ ಸೇರಿದಂತೆ ಹಲವು ಪ್ರಮುಖರು ಸ್ಮಾರಕವನ್ನು ಉದ್ಘಾಟಿಸಲಿದ್ದಾರೆ. ಈ ಸ್ಮಾರಕವು ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಹಾಲಾಳು ಗ್ರಾಮದ ಬಳಿ ಸುಮಾರು ಎರಡೂವರೆ ಎಕರೆ ಪ್ರದೇಶದಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣವಾಗಿದೆ. ಸ್ಮಾರಕ ನಿರ್ಮಾಣಕ್ಕೆ ಸುಮಾರು 11 ಕೋಟಿ ರುಪಾಯಿ ಹಣ ಖರ್ಚು ಮಾಡಲಾಗಿದೆ.

ಬೆಂಗಳೂರಿನ ಎಂ9 ಕಂಪೆನಿಯ ನಿಶ್ಚಲ್ ವಿಷ್ಣು ಸ್ಮಾರಕಕ್ಕೆ ರೂಪುರೇಷೆ ಸಿದ್ಧಪಡಿಸಿದ್ದರು. ಸೆಪ್ಟೆಂಬರ್ 15, 2020ರಲ್ಲಿ ಅಂದಿನ ಸಿಎಂ ಯಡಿಯೂರಪ್ಪ ಸ್ಮಾರಕ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ್ದರು. ಕಾರಣಾಂತರಗಳಿಂದ ಸ್ಮಾರಕ ನಿರ್ಮಾಣ ಕೆಲಸ ತಡವಾಗಿತ್ತು. ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಅವರು 6 ಅಡಿ ಎತ್ತರದ ವಿಷ್ಣು ಪುತ್ಥಳಿಯನ್ನು ಕೆತ್ತನೆ ಮಾಡಿದ್ದಾರೆ. ಅದನ್ನು ಸ್ಮಾರಕದ ಮಧ್ಯದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ. ಪುತ್ಥಳಿಯ ಸುತ್ತಲೂ ವೃತ್ತಾಕಾರದ ಫೋಟೊ ಗ್ಯಾಲರಿ ಇರಲಿದೆ. ಇಲ್ಲಿ ವಿಷ್ಣುವರ್ಧನ್ ಅವರ ಅಪರೂಪದ ಸುಮಾರು 600 ಭಾವಚಿತ್ರಗಳನ್ನು ಹಾಕಲಾಗಿದೆ.

ಇನ್ನು ನಾಟಕ, ಸಿನಿಮಾ ಪ್ರದರ್ಶನಕ್ಕೆ ಹವಾ ನಿಯಂತ್ರಿತ ವ್ಯವಸ್ಥೆಯುಳ್ಳ ಆಡಿಟೋರಿಯಂ, ಡೆಸ್ಸಿಂಗ್ ರೂಂಗಳು, ಸುಸಜ್ಜಿತ ಶೌಚಾಲಯ, ವಾಹಗಳ ಪಾರ್ಕಿಂಗ್, ಕ್ಲಾಸ್‌ ರೂಮ್‌ಗಳು, ಕ್ಯಾಂಟೀನ್, ಸುಂದರವಾದ ನೀರಿನ ಕಾರಂಜಿ, ಉದ್ಯಾನವನ ಎಲ್ಲವೂ ಸ್ಮಾರಕದಲ್ಲಿ ಇದೆ. ವಿಷ್ಣುವರ್ಧನ್ ಬಳಸಿದ್ದ ವಿಭೂತಿ ಬಳಸಿ ಅವರ 20 ಅಡಿ ಎತ್ತರದ ಪ್ರತಿಮೆಯೊಂದನ್ನು ಸ್ಥಾಪಿಸಲಾಗಿದೆ. ವಿಷ್ಣುವರ್ಧನ್ ಬಳಸುತ್ತಿದ್ದ ಟೋಪಿ, ಕೈ ಕಡಗ, ಓದುತ್ತಿದ್ದ ಪುಸ್ತಕಗಳು, ಅವರ ಸಿನಿಮಾದ ಛಾಯಾಚಿತ್ರಗಳು, ವಿಡಿಯೋ ತುಣುಕುಗಳು ಇನ್ನಿತರ ವಸ್ತುಗಳನ್ನು ಒಳಗೊಂಡ ಸಂಗ್ರಹಾಲಯವೊಂದನ್ನು ಸ್ಥಾಪಿಸಲಾಗಿದೆ.

ಸಿನಿಮಾ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಸ್ಮಾರಕದ ಒಳಗೆ ಎರಡು ತರಬೇತಿ ಕೊಠಡಿಗಳನ್ನು ಸ್ಥಾಪಿಸಲಾಗಿದೆ. ನಾಟಕ, ಸಿನಿಮಾ ಪ್ರದರ್ಶನಕ್ಕೆ ಅನುವಾಗಲೆಂದು ಒಂದು ಆಡಿಟೋರಿಯಮ್, ವಿಶ್ರಾಂತಿ ಗೃಹ, ಒಂದು ಕ್ಯಾಂಟೀನ್, ಶೌಚಾಲಯ ನಿರ್ಮಿಸಲಾಗಿದೆ. ಐದು ಎಕರೆ ಜಾಗಕ್ಕೆ ಕಾಂಪೌಂಡ್ ಅಳವಡಿಸಲಾಗಿದ್ದು, ಕುಡಿಯುವ ನೀರು ಹಾಗೂ ವಿದ್ಯುತ್ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಭದ್ರತೆ ದೃಷ್ಟಿಯಿಂದ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ ಸಹ ಮಾಡಲಾಗಿದೆ. ಸದ್ಯಕ್ಕೆ ಎರಡೂವರೆ ಎಕರೆ ಜಾಗದಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣವಾಗಿದ್ದು ಇನ್ನುಳಿದ ಜಾಗದಲ್ಲಿ ಪುಣೆಯ ಎಫ್‌ಟಿಐಐಯ ಬ್ರ್ಯಾಂಚ್‌ ಮಾಡಲು ಪ್ರಯತ್ನಗಳು ನಡೆದಿವೆ. ಅದು ಸಾಕರಗೊಂಡರೆ ಸ್ಮಾರಕದ ಉಳಿದ ಜಾಗದಲ್ಲಿ ಪ್ರತಿಷ್ಠಿತ ಸಿನಿಮಾ ಇನ್‌ಸ್ಟಿಟ್ಯೂಟ್ ನಿರ್ಮಾಣವಾಗಲಿದೆ.

ಇದನ್ನೂ ಓದಿ : “ಸಾಹಸಸಿಂಹ” ಬಿರುದು ಸಿಗಲು ಬರೀ ಆ ಸಿನಿಮಾ ಕಾರಣ ಅಲ್ಲ : ಸ್ವತಃ ನಟ ವಿಷ್ಣುವರ್ಧನ್‌ ಈ ಬಗ್ಗೆ ಹೇಳಿದೇನು ?‌

ಇದನ್ನೂ ಓದಿ : 3 ದಿನಗಳಲ್ಲಿ ಕ್ರಾಂತಿ ಪಡೆದುಕೊಂಡ ಬುಕ್ ಮೈ ಶೋ, ಐಎಂಡಿಬಿ, ಗೂಗಲ್ ರೇಟಿಂಗ್ ಎಷ್ಟು ಗೊತ್ತಾ ?

ಇದನ್ನೂ ಓದಿ : ಕಷ್ಟಗಳನ್ನೇ ಎದುರಿಸಿ ಬೆಳೆದು ನಿಂತ ನಟ ಡಾ. ವಿಷ್ಣುವರ್ಧನ್‌ ಬಗ್ಗೆ ನಿಮಗೆಷ್ಟು ಗೊತ್ತು ?

ಇಂದು ಅಂದರೆ ಜನವರಿ 29 ರಂದು ಮಧ್ಯಾಹ್ನ ಹನ್ನೆರಡು ಗಂಟೆಗೆ ಸ್ಮಾರಕದ ಉದ್ಘಾಟನೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ಮಾಡಲಿದ್ದಾರೆ. ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾರತಿ ವಿಷ್ಣುವರ್ಧನ್, ವಿಷ್ಣುವರ್ಧನ್‌ರ ಅಳಿಯ ಅನಿರುದ್ಧ್ ಸೇರಿದಂತೆ ಸರಕಾರದ ಕೆಲವು ಸಚಿವರು ಭಾಗವಹಿಸಲಿದ್ದಾರೆ. ವಿಷ್ಣುವರ್ಧನ್ ಅಭಿಮಾನಿಗಳು ಈಗಾಗಲೇ ಸ್ಮಾರಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲೆಂದು ಬೆಂಗಳೂರಿನಿಂದ ಮೈಸೂರಿಗೆ ತೆರಳಿದ್ದು, ಕಾರ್ಯಕ್ರಮವು ಅರ್ಥಪೂರ್ಣವಾಗಿ ನೆರವೇರಲಿದೆ.

Dr. Vishnuvardhan Memorial Special : Dr. Inauguration of Vishnuvardhan Memorial: Do you know what is inside it?

Comments are closed.