ಆವತ್ ಕುಡಿದಿದ್ದು ಇನ್ನೂ ಮರೆತಿಲ್ಲ, ಯಾವತ್ತೂ ಮರೆಯೋಕಾಗಲ್ಲ ! ಹೀಗೆ ಹೇಳಿದ್ಯಾಕೆ ನಟಿ ಹರಿಪ್ರಿಯ

0

ಸ್ವಿಮ್ಮಿಂಗ್ ಪೂಲ್ ನಲ್ಲಿ ನಿಂತುಕೊಂಡು, ಕೈಯಲ್ಲೊಂದು ನೀಲಿ ಬಣ್ಣದ ಡ್ರಿಂಕ್ಸ್ ತುಂಬಿದ ಗ್ಲಾಸ್ ಹಿಡಿದು ಆವತ್ ಕುಡಿದಿದ್ದು ಇನ್ನೂ ಮರೆತಿಲ್ಲಾ ಅಂತಾ ಸ್ಯಾಂಡಲ್ ವುಡ್ ನಟಿ ಹರಿಪ್ರಿಯ ಬರೆದುಕೊಂಡಿದೆ. ಯಾರೇ ಆದ್ರೂ ಈ ಪೋಟೋ ನೋಡಿದ ಕೂಡಲೇ ಹರಿಪ್ರಿಯ ಡ್ರಿಂಕ್ಸ್ ಮಾಡಿರೋದ್ರ ಬಗ್ಗೆ ಮಾತಾಡ್ತಿದ್ದಾರಾ ಅಂತಾ ಯೋಚನೆ ಬಾರದೆ ಇರದು. ಆದರೆ ಹರಿಪ್ರಿಯ ಹೇಳ್ತಾ ಇರೋದು ಆ ಡ್ರಿಂಕ್ಸ್ ಅಲ್ಲಾ. ಬದಲಾಗಿ ಮತ್ಯಾವ ಡ್ರಿಂಕ್ಸ್ ಅಂದ್ರಾ.. ಹಾಗಾದ್ರೆ ಅವರೇ ಬರೆದುಕೊಂಡಿರೋ ಈ ಸ್ಟೋರಿ ನಾ ಓದಿ..

ಸ್ಯಾಂಡಲ್ ವುಡ್ ನ ಸ್ವೀಟೆಸ್ಟ್ ನಟಿ ಹರಿಪ್ರಿಯ ತನ್ನ ಫೇಸ್ ಬುಕ್ ವಾಲ್ ನಲ್ಲಿ ತನ್ನ ಎಸ್ಎಸ್ಎಲ್ ಸಿ ಪರೀಕ್ಷೆಯ ಅನುಭವಗಳನ್ನು ಅದ್ಬುತವಾಗಿ ಬರೆದುಕೊಂಡಿದ್ದಾರೆ. ಕಳೆದ ಒಂದ್ ವಾರ ಎಲ್ ನೋಡಿದ್ರೂ ಎಸ್‌ಎಸ್‌ಎಲ್‌ಸಿಯದ್ದೇ ಸುದ್ದಿ. ಯಾಕಂದ್ರೆ ಎಲ್ಲ ಕಡೆ ಕೊರೊನಾ ಭಯದ ನಡುವೆನೇ ಎಸ್‌ಎಸ್‌ಎಲ್‌ಸಿ ಎಕ್ಸಾಂ ನಡೀತು. ಹಾಗಾಗಿ ಜನ ಅದ್ರ ಬಗ್ಗೆನೇ ಜಾಸ್ತಿ ಮಾತಾಡ್ತಿದ್ರಿಂದ ನಂಗೆ ನನ್ನ ಎಸ್‌ಎಸ್ಎಲ್‌ಸಿ ದಿನಗಳು ನೆನಪಾದ್ವು. ಅದ್ಕೆ ನಾನೂ ಬರಿತಿದೀನಿ.. ಐ ಮೀನ್, ನನ್ನ ಎಸ್‌ಎಸ್‌ಎಲ್‌ಸಿ ದಿನಗಳ ಬಗ್ಗೆ ಬರಿತಿದೀನಿ.

ನಾನು 9ನೇ ಕ್ಲಾಸ್‌ವರ್ಗೂ ಚಿಕ್ಕಬಳ್ಳಾಪುರದಲ್ಲೇ ಓದಿದ್ದು. ನಂತ್ರ ನಾವು ಬೆಂಗಳೂರಿಗೆ ಶಿಫ್ಟ್ ಆದ್ವಿ‌. ಅದ್ಕೆ ನಾನು ಎಸ್‌ಎಸ್‌ಎಲ್‌ಸಿ ಬೆಂಗಳೂರಲ್ಲಿ ಓದಿದ್ದು. ನನ್ನ ಅಜ್ಜಿ-ತಾತಾ ಎಲ್ಲ ಇಲ್ಲೇ ಇದ್ದಿದ್ರಿಂದ ನಂಗೆ ಬೆಂಗಳೂರೇನೂ ಹೊಸದಲ್ಲ‌. ಆದ್ರೆ ಎಕ್ಸಾಂ ನಡೀತಿದ್ ಸ್ಕೂಲ್ ಹೊಸದಾಗಿತ್ತು. ಮನೆಯಿಂದ ತುಂಬಾ ದೂರ ಇತ್ತು. ಅದ್ಕೆ ಅಮ್ಮ ದಿನಾ ಬೆಳಗ್ಗೆ ಅವರೇ ಕರ್ಕೊಂಡ್ ಬಂದು ಬಿಟ್ಟು ಹೋಗ್ತಿದ್ರು. ವಾಪಸ್ ಹೋಗ್ತ ನಾನು ಪರ್ಟಿಕ್ಯುಲರ್ ರೂಟ್ ನಂಬರ್ ಬಸ್‌ನಲ್ಲಿ ಹೋಗ್ತಿದ್ದೆ.

ಆದ್ರೆ ಒಂದಿನ ಬಸ್ ಮಿಸ್ಸಾಯ್ತು. ಬೇರೆ ಬಸ್ ತಕ್ಷಣಕ್ಕೆ ಇರ್ಲಿಲ್ಲ. ಆಟೋ-ಕ್ಯಾಬ್ ಹತ್ತೋಕ್ ಭಯ. ಆಗೆಲ್ಲ ಒಬ್ರೇ ಆಟೋ-ಕ್ಯಾಬ್‌ ಹತ್‌ಬಾರ್ದು ಅಂತ ಚಿಕ್ಕೋರಿರುವಾಗ ಮನೇಲಿ ಹೇಳ್ಕೊಟ್ಟಿರ್ತಾರಲ್ವ? ಏನ್ ಮಾಡೋದು ಅಂತ ಕೊನೆಗೆ ನಡ್ಕೊಂಡೇ ಹೊರಟೆ. ಮಾರ್ಚ್ ತಿಂಗಳು, ತುಂಬಾ ಬಿಸ್ಲು. ಮೈಯೆಲ್ಲ ಸುಡ್ತಿತ್ತು, ತಲೆಸುತ್ತು ಬರ್ತಿದ್ ಹಾಗಾಗ್ತಿತ್ತು.

ಅಷ್ಟೆಲ್ಲ ಕಷ್ಟಪಟ್ಟು ಮನೆಗೆ ಹೋಗ್ತಿದ್ ಹಾಗೆ ಅಮ್ಮ ನಂಗೋಸ್ಕರ ಬಾಗ್ಲಲ್ಲಿ ಕಾಯ್ತಾ ನೋಡ್ತಿದ್ರು. ನಾನು ಓಡಿ ಹೋಗಿ ಅಮ್ಮನ್ನ ತಬ್ಕೊಂಡೆ. ಯಾಕ್ ಇಷ್ಟ್ ಲೇಟ್ ಆಯ್ತು ಪುಟ್ಟ ಅಂದ್ರು, ಸುಸ್ತಿಗೆ ಅಳು ಬಂತು. ಅಳ್ತಾ ಅಳ್ತಾ ಬಸ್ ಮಿಸ್ಸಾಗಿದ್ದು, ನಡ್ಕೊಂಡ್ ಬಂದಿದ್ದು ಎಲ್ಲ ಹೇಳ್ದೆ. ಅಮ್ಮನೂ ಸಂಕಟ ಪಟ್ರು.. ತಲೆ ಸವರಿ, ಮುದ್ ಮಾಡಿ, ನಿಂಗೋಸ್ಕರ ಏನೋ ಮಾಡಿದಿನಿ, ಫ್ರೆಷಪ್ ಆಗಿ ಬಾ ಅಂದ್ರು. ನಾನು ಬೇಗ ಬೇಗ ರೆಡಿ ಆಗಿ ಬಂದೆ.

ಆಮೇಲೆ ಪ್ರೀತಿಯಿಂದ ಕರಬೂಜ ಜ್ಯೂಸ್ ತಂದು ಕೊಟ್ರು. ಅಮ್ಮ ಮಾಡಿದ್ ಆ ಜ್ಯೂಸ್ ಆ ದಿನ ತುಂಬಾ ಸ್ಪೆಷಲ್ ಅನಿಸ್ತು. ಯಾಕಂದ್ರೆ ಅದ್ರಲ್ಲಿ ಅಮ್ಮನ ಪ್ರೀತಿ, ಕಾಳಜಿ ಎಲ್ಲ ಇತ್ತು. ನೀವ್ ನಂಬ್ತೀರೋ ಇಲ್ವೋ.. ಆವತ್ತು ನಾನು ಕುಡಿದ ಆ ಜ್ಯೂಸ್ ಅದ್ಭುತ ಅನಿಸಿತ್ತು. ತೀರಾ ಕಷ್ಟಪಟ್ಟ ಮೇಲೆ ಸಿಗೋ ಒಂದು ಆತ್ಮತೃಪ್ತಿನೇ ಬೇರೆ. ಅದು ಯಾವತ್ಗೂ ನೆನಪಿರೋವಂಥದ್ದು.

ಈಗ ಕೊರೊನಾ ಭಯದಿಂದ ನೀವೂ ಎಕ್ಸಾಮ್‌ಗೆ ಹೋಗಿಬರುವಾಗ ಅದೇ ಥರ ತುಂಬಾ ಕಷ್ಟಪಟ್ಟಿದ್ರಿ. ಮಾಸ್ಕ್, ಸ್ಯಾನಿಟೈಸರ್, ಸೋಷಿಯಲ್ ಡಿಸ್ಟೆನ್ಸ್ ಅಂತ ಟೆನ್ಷನ್ ಬೇರೆ. ಆದ್ರೂ ಚಿಂತೆ ಮಾಡ್ಬೇಡಿ.. ಅಷ್ಟು ಕಷ್ಟಪಟ್ಟು ಎಕ್ಸಾಂ ಬರೆದಿದಕ್ಕೆ. ಮುಂದೆ ನಿಮ್ ರಿಸಲ್ಟ್ ಕೊಡೋ ಆತ್ಮತೃಪ್ತಿ ಅದ್ಭುತವಾಗಿರುತ್ತೆ.

ಇನ್ನು ರಿಸಲ್ಟ್ ಬಗ್ಗೆ ಹೆಚ್ಚು ಟೆನ್ಷನ್ ಮಾಡ್ಕೊಬೇಡಿ. ಎಷ್ಟೋ ಜನ ಅಕಾಡೆಮಿಕ್ ಪರೀಕ್ಷೆಯಲ್ಲಿ ಫೇಲಾದವ್ರು ಜೀವನದ ಪರೀಕ್ಷೆಯಲ್ಲಿ ಪಾಸಾಗಿದಾರೆ. ಪಾಸ್ ಥರನೇ ಫೇಲ್ ಕೂಡ ಒಂದು ಪಾಠ ಕಲಿಸುತ್ತೆ. ಎಕ್ಸಾಮ್ ರಿಸಲ್ಟ್ ಮುಖ್ಯನೇ, ಆದ್ರೆ ಜೀವನಕ್ಕಿಂತ ಮುಖ್ಯ ಅಲ್ಲ. ಅಷ್ಟಕ್ಕೂ ಇದೇ ಕೊನೇ ಎಕ್ಸಾಂ ಅಲ್ಲ. ಮುಂದೆ ಬದುಕು ದೊಡ್ಡದಿದೆ, ಅದು ತುಂಬಾ ಎಕ್ಸಾಮ್ಸ್‌ನ ಬರೆಸುತ್ತೆ. ಸೋ.. ಜೀವ, ಜೀವನದ ಬಗ್ಗೆ ಕೇರ್ ತಗೊಳಿ. ಪಾಸ್-ಫೇಲ್ ಬಗ್ಗೆ ಈಗ್ಲೇ ಯೋಚ್ನೆ ಬೇಡ.

ರಿಲ್ಯಾಕ್ಸ್ ಆಗಿ, ಹುಷಾರಾಗ್ ಇರಿ, ಅದ್ಭುತ ಆತ್ಮತೃಪ್ತಿ ಕೊಡೋ ರಿಸಲ್ಟ್ ನಿಮಗೆಲ್ರಿಗೂ ಸಿಗ್ಲಿ, ನಿಮ್ ಭವಿಷ್ಯ ಚೆನ್ನಾಗಿರ್ಲಿ. ಆಲ್ ದಿ ಬೆಸ್ಟ್ ಟು ಯುವರ್ ಫ್ಯೂಚರ್ ಮೈ ಡಿಯರ್ ಸ್ಟುಡೆಂಟ್ಸ್. ನಮ್ಮ-ನಿಮ್ಮೆಲ್ಲರ ಗುರುಗಳಿಗೂ ನನ್ನ ಕಡೆಯಿಂದ ಗುರು ಪೂರ್ಣಿಮೆಯ ಶುಭಾಶಯಗಳು ಇಂತೀ ನಿಮ್ಮ ಹರಿಪ್ರಿಯ ಅಂತಾ ಬರೆದುಕೊಂಡಿದ್ದಾರೆ.

Leave A Reply

Your email address will not be published.