ಸ್ಯಾಂಡಲ್‌ವುಡ್‌ ಸಿನಿಪಯಣದಲ್ಲಿ 37 ವರ್ಷ ಪೂರೈಸಿದ ನಟ ಶಿವರಾಜ್‌ಕುಮಾರ್‌

ಸ್ಯಾಂಡಲ್‌ವುಡ್‌ ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್‌ (Hat trick hero Shivarajkumar) ಕನ್ನಡದಲ್ಲಿ 37 ವರ್ಷ ಪೂರೈಸಿದ್ದಾರೆ. 1986 ಫೆಬ್ರವರಿ 19ರಂದು ‘ಆನಂದ್’ ಸಿನಿಮಾಕ್ಕಾಗಿ ಶಿವಣ್ಣ ಮೊದಲ ಬಾರಿಗೆ ಬಣ್ಣ ಹಚ್ಚಿದ್ದರು. ಈ ಸಿನಿಮಾ ಅದೇ ವರ್ಷ ಜೂನ್ 19ಕ್ಕೆ ತೆರೆಕಂಡಿತ್ತು. ‘ಟುವ್ವಿ ಟುವ್ವಿ’ ಎಂದು ಹಾಡುತ್ತಾ ಬಂದ ಅಣ್ಣಾವ್ರು ಹಿರಿಮಗ ಇಂದು ಸೆಂಚುರಿ ಸ್ಟಾರ್ ಆಗಿ ನಮ್ಮ ಮುಂದೆ ನಿಂತಿದ್ದಾರೆ.

ಒಬ್ಬ ನಟ 37 ವರ್ಷ ಸಿನಿರಂಗದಲ್ಲಿ ಹೀರೊ ಆಗಿ ಉಳಿದುಕೊಳ್ಳುವುದು, ಇವತ್ತಿಗೂ ಅದೇ ಕ್ರೇಜ್, ಬೇಡಿಕೆ ಉಳಿಸಿಕೊಳ್ಳುವುದು ತಮಾಷೆಯ ಮಾತಲ್ಲ. ಆ ವಿಚಾರದಲ್ಲಿ ಶಿವಣ್ಣ ಎಲ್ಲರಿಗೂ ಮಾದರಿ. ಈಗಲೂ ಶಿವಣ್ಣನ ಕೈಯಲ್ಲಿ ಐದಾರು ಸಿನಿಮಾಗಳಿವೆ. ಬರೀ ಹೀರೊ ಆಗಿ ಮಾತ್ರವಲ್ಲದೇ ಗಾಯಕರಾಗಿ, ನಿರ್ಮಾಪಕರಾಗಿಯೂ ಶಿವಣ್ಣ ಕನ್ನಡ ಸಿನಿರಂಗದಲ್ಲಿ ಮೆರೆಯುತ್ತಿದ್ದಾರೆ. ಕಳೆದ ಡಿಸೆಂಬರ್ 23ಕ್ಕೆ ತೆರಕಂಡ ‘ವೇದ’ ಮೂಲಕ ಮತ್ತೊಂದು ಹಿಟ್ ಸಿನಿಮಾವನ್ನು ತಮ್ಮ ಖಾತೆಗೆ ಸೇರಿಸಿಕೊಂಡಿದ್ದಾರೆ.

ಸಿನಿರಂಗಕ್ಕೆ ಬರುವುದಕ್ಕೂ ಮೊದಲು ಶಿವರಾಜ್‌ಕುಮಾರ್ ಚೆನ್ನೈ ಫಿಲ್ಮ್ ಇನ್ಸಿಟ್ಯೂಟ್‌ನಲ್ಲಿ ನಟನೆಯ ಪಟ್ಟುಗಳನ್ನು ಕಲಿತಿದ್ದರು. ತಮ್ಮದೇ ಹೋಮ್‌ ಬ್ಯಾನರ್‌ನಲ್ಲಿ ‘ಆನಂದ್’ ಸಿನಿಮಾ ಮೂಲಕ ಬೆಳ್ಳಿ ಪರದೆ ಅಲಂಕರಿಸಿದರು. ತಮ್ಮ ಸಿನಿಜರ್ನಿಯಲ್ಲಿ ಶಿವಣ್ಣ ಸಾಕಷ್ಟು ಏಳುಬೀಳು ಕಂಡಿದ್ದಾರೆ. 80ರ ದಶಕದ ಕೊನೆಯವರೆಗೂ ಸ್ಯಾಂಡಲ್‌ವುಡ್ ಮದ್ರಾಸ್‌ನಲ್ಲೇ ನೆಲೆಸಿತ್ತು. ಹಾಗಾಗಿ ಡಾ. ರಾಜ್‌ಕುಮಾರ್ ಸೇರಿದಂತೆ ಸಿನಿರಂಗದ ಬಹುತೇಕರು ಅಲ್ಲೇ ನೆಲೆಸುವಂತಾಗಿತ್ತು. ಹಾಗಾಗಿ ಶಿವಣ್ಣ ಬಾಲ್ಯ ಓದು ಎಲ್ಲಾ ಮದ್ರಾಸ್‌ನಲ್ಲೇ ಪೂರ್ಣಗೊಳಿಸಿದರು.

‘ಆನಂದ್‌’ ಸಿನಿಮಾ ಸತತ 38 ವಾರ ಪ್ರದರ್ಶನ ಕಂಡು ದಾಖಲೆ ಬರೆದಿತ್ತು. ಒಬ್ಬ ಯುವನಟನಿಗೆ ಬೇಕಾದ ಭದ್ರ ಬುನಾದಿಯನ್ನು ಆ ಸಿನಿಮಾ ಹಾಕಿತ್ತು. ಅದರ ಬೆನ್ನಲ್ಲೇ ಬಂದ ‘ರಥಸಪ್ತಮಿ’ ಹಾಗೂ ‘ಮನಮೆಚ್ಚಿದ ಹುಡುಗಿ’ ಸಿನಿಮಾಗಳು ಹಿಟ್ ಆಗಿ ಹ್ಯಾಟ್ರಿಕ್ ಹೀರೊ ಬಿರುದು ಶಿವರಾಜ್‌ಕುಮಾರ್ ಹೆಸರಿನ ಜೊತೆ ಸೇರಿಕೊಂಡಿತ್ತು. “ಓಂ”, ‘AK- 47’, ‘ಜೋಗಿ’, ‘ಜನುಮದ ಜೋಡಿ’, ‘ಟಗರು’ ರೀತಿಯ ಬ್ಲಾಕ್‌ಬಸ್ಟರ್‌ ಸಿನಿಮಾಗಳು ಶಿವರಾಜ್‌ಕುಮಾರ್ ಸಿನಿಜರ್ನಿಯಲ್ಲಿದೆ. ಹಲವು ಟ್ರೆಂಡ್ ಸೆಟ್ಟರ್ ಸಿನಿಮಾಗಳಲ್ಲಿ ಶಿವಣ್ಣ ನಟಿಸಿದ್ದಾರೆ. ಕಾದಂಬರಿ ಆಧರಿತ, ರೌಡಿಸಂ ಸಿನಿಮಾಗಳಲ್ಲೂ ನಟಿಸಿ ಗೆದ್ದಿದ್ದಾರೆ.

ಸ್ಯಾಂಡಲ್‌ವುಡ್‌ನಲ್ಲಿ ರೌಡಿಸಂ ಸಿನಿಮಾಗಳಲ್ಲಿ ಓಂಕಾರ ಹಾಡಿದ್ದು ಶಿವಣ್ಣ- ಉಪೇಂದ್ರ ಕಾಂಬಿನೇಷನ್‌ನ ‘ಓಂ’ ಸಿನಿಮಾ. ಈ ಸಿನಿಮಾ ಸಾಕಷ್ಟು ಬಾರಿ ರೀ ರಿಲೀಸ್ ಆಗಿ ಭರ್ಜರಿ ಪ್ರದರ್ಶನ ಕಂಡಿತ್ತು. ಶಿವಣ್ಣ- ಉಪ್ಪಿ ಕಾಂಬಿನೇಷನ್‌ನಲ್ಲಿ ಮತ್ತೊಂದು ಸಿನಿಮಾಕ್ಕಾಗಿ ಸಿನಿರಸಿಕರು ಕಾಯುತ್ತಿದ್ದಾರೆ. ಡಾ. ಶಿವರಾಜ್‌ಕುಮಾರ್‌ಗೆ ವಯಸ್ಸು ಅರವತ್ತಾಗಿದೆ. ಆದರೆ ಅವರು ತೆರೆಮೇಲೆ ಬಂದರೆ 20ರ ಯುವಕರನ್ನು ನಾಚಿಸುತ್ತಾರೆ. ಶಿವಣ್ಣನ ಎನರ್ಜಿಗೆ ಸಾಟಿಯಿಲ್ಲ. ತಮ್ಮ ಅದ್ಭುತ ಡ್ಯಾನ್ಸ್ ಹಾಗೂ ಪವರ್‌ಫುಲ್ ಪರ್ಫಾರ್ಮೆನ್ಸ್‌ನಿಂದ ಸದಾ ಅಭಿಮಾನಿಗಳನ್ನು ಸೆಳೆಯುತ್ತಾರೆ. ಕನ್ನಡ ಸಿನಿರಂಗದಲ್ಲಿ ಅದ್ಭುತ ಡ್ಯಾನ್ಸ್ ಟ್ರೆಂಡ್ ಹುಟ್ಟಾಕ್ಕಿದ್ದು ಶಿವಣ್ಣ. ಇವತ್ತಿಗೂ ಶಿವಣ್ಣನ ಡ್ಯಾನ್ಸ್ ನೋಡೋದೇ ಕಣ್ಣಿಗೆ ಹಬ್ಬ. ‘ವೇದ’ ಸಿನಿಮಾ ಮೂಲಕ ಶಿವಣ್ಣ 125 ಸಿನಿಮಾಗಳ ಮೈಲಿಗಲ್ಲು ಸಾಧಿಸಿದ್ದಾರೆ.

ಇದನ್ನೂ ಓದಿ : ನಟ ದರ್ಶನ ಪತ್ನಿ ಆಕ್ರೋಶಕ್ಕೆ ಪ್ರತಿಕ್ರಿಯೇ ನೀಡದೇ ಪೋಸ್ಟ್‌ ಡಿಲೀಟ್‌ ಮಾಡಿದ ನಟಿ ಮೇಘಾ ಶೆಟ್ಟಿ

ಇದನ್ನೂ ಓದಿ : Tatsama Tadbhava movie : ತಮ್ಮ ಮುಂದಿನ ಸಿನಿಮಾದ ಟೈಟಲ್‌ ರಿವೀಲ್‌ ಮಾಡಿದ ನಟಿ ಮೇಘನಾ ರಾಜ್‌

ಇದನ್ನೂ ಓದಿ : ಆ ಪ್ರಶ್ನೆಗೆ ಉತ್ತರ ಕೊಡ್ತೀನಿ : ಕುತೂಹಲ ಕೆರಳಿಸಿದ ಮೇಘನಾ ರಾಜ್ ಪೋಸ್ಟ್

ಶಿವಣ್ಣ ತರಹೇವಾರಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಮರ್ಷಿಯಲ್, ಕಾಮಿಡಿ, ಹಾರರ್, ಫ್ಯಾಮಿಲಿ ಸೆಂಟಿಮೆಂಟ್, ವಿಲೇಜ್ ಬ್ಯಾಕ್‌ಡ್ರಾಪ್, ಮಲ್ಟಿಸ್ಟಾರರ್, ರೌಡಿಸಂ, ಕಾದಂಬರಿ ಆಧರಿತ ಹೀಗೆ ಹತ್ತು ಹಲವು ಜಾನರ್ ಸಿನಿಮಾಗಳನ್ನು ಟ್ರೈ ಮಾಡಿದ್ಧಾರೆ. ಸದಾ ಹೊಸಬರಿಗೆ ಅವಕಾಶ ಕೊಡುತ್ತಾರೆ. ಇವತ್ತಿಗೂ ನಿರ್ದೇಶಕರು ಹೇಳಿದಂತೆ ನಟಿಸುತ್ತಾರೆ. ಅಣ್ಣಾವ್ರ ಮಗ, 100 ಸಿನಿಮಾಗಳ ಸರದಾರ, 37 ವರ್ಷಗಳ ಜರ್ನಿ ಆದರೂ ಯಾವುದೇ ಹಮ್ಮು ಬಿಮ್ಮು ಅವರಲ್ಲಿ ಇಲ್ಲ. ಸದ್ಯ ‘ಕರಟಕ ದಮನಕ’, ‘ಘೋಸ್ಟ್’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಸೆಂಚುರಿ ಸ್ಟಾರ್ ಶಿವಣ್ಣ ನಟಿಸುತ್ತಿದ್ದಾರೆ.

Hat trick hero Shivarajkumar completes 37 years in Sandalwood cinema

Comments are closed.