ಕನ್ನಡ ಸಿನಿರಂಗದ ಅಮೂಲ್ಯ ರತ್ನ ನಟ ಪುನೀತ್‌ ರಾಜ್‌ಕುಮಾರ್‌ ಹುಟ್ಟುಹಬ್ಬ

ಇಂದು (ಮಾರ್ಚ್‌ 17) ನಟ ಸಾರ್ವಭೌಮ, ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ (Puneeth Rajkumar Birthday Special)‌ ಅವರ 48ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಇಡೀ ಕನ್ನಡ ಸಿನಿರಂಗವೇ ಸಂಭ್ರಮಿಸುವಂತಹ ಸುದಿನ ಎಂದರೂ ತಪ್ಪಾಗಲ್ಲ. ಯಾಕೆಂದರೆ ಕನ್ನಡ ಸಿನಿರಂಗದ ಹೆಮ್ಮೆ ಅಮೂಲ್ಯ ರತ್ನ ಜನ್ಮವಾದ ದಿನ. ಕನ್ನಡ ಸಿನಿರಂಗ ಮಾತ್ರವಲ್ಲದೇ ಇಡೀ ಭಾರತೀಯ ಸಿನಿರಂಗ ಕೂಡ ಅಪ್ಪು ಅವರನ್ನು ನೆನೆದಿದ್ದಾರೆ. ಸದಾ ಮುಗುಳುನಗೆ ಮೂಲಕ ಸಹಸ್ರ ಸಂಖ್ಯೆಯ ಅಭಿಮಾನಿಗಳ ಮನಗೆದ್ದಿರುವ ಮೇರುನಟ ಡಾ.ರಾಜ್‌ಕುಮಾರ್‌ ಹಾಗೂ ಪಾರ್ವತಮ್ಮ ಅವರ ಮುದ್ದಿನ ಮಗ ಪುನೀತ್‌ ರಾಜ್‌ಕುಮಾರ್‌ ನಮ್ಮನ್ನೆಲ್ಲ ಅಗಲಿ ಒಂದೂವರೆ ವರ್ಷ ಕಳೆದಿದೆ. ಇದೇ ಮಾರ್ಚ್‌ 17ಕ್ಕೆ ನಟ ಪುನೀತ್‌ ರಾಜ್‌ಕುಮಾರ್‌ ಹುಟ್ಟುಹಬ್ಬವಿದ್ದು (Puneeth Rajkumar Birthday) , ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಅಗಲಿಕೆಯ ನಂತರವು ಅದ್ದೂರಿಯಾಗಿ ಆಚರಿಸಲು ಅಭಿಮಾನಿಗಳು ಭರ್ಜರಿ ಆಚರಿಸುತ್ತಿದ್ದಾರೆ.

ಕನ್ನಡ ಸಿನಿರಂಗದಲ್ಲಿ ಡಾ. ರಾಜ್‌ಕುಮಾರ್‌ ಕುಟುಂಬದವರು ದೊಡ್ಮನೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವುದು ಎಲ್ಲರಿಗೂ ತಿಳಿದಿರುತ್ತದೆ. ಅಷ್ಟೇ ಅಲ್ಲದೇ ಸಿನಿರಂಗ ಮಾತ್ರವಲ್ಲದೇ ಜನಸಾಮಾನ್ಯರು ಕೂಡ ಡಾ.ರಾಜ್‌ಕುಮಾರ್‌ ಅವರನ್ನು ಅಣ್ಣಾವ್ರು ಎಂದು ಕರೆಯುತ್ತಾರೆ. ಡಾ.ರಾಜ್‌ ಅವರ ಐದು ಜನ ಮಕ್ಕಳಲ್ಲಿ ಕಿರಿಯವರಾಗಿ ಹಾಗೂ ಮುದ್ದಿನ ಮಗುವಾಗಿ ಡಾ. ಪುನೀತ್‌ ರಾಜ್‌ಕುಮಾರ್‌ ಅವರು 17 ಮಾರ್ಚ್‌ 1975 ರಂದು ಚೆನೈಯಲ್ಲಿ ಜನಿಸಿದ್ದಾರೆ. ಆರಂಭಿಕ ದಿನಗಳಲ್ಲಿ ರಾಜ್‌ ಕುಟುಂಬದವರು ಮಗುವಿಗೆ ಮಾಸ್ಟರ್‌ ಲೋಹಿತ್‌ ಎಂದು ನಾಮಕರಣ ಮಾಡುತ್ತಾರೆ. ಆದರೆ ಮನೆಯಲ್ಲಿ ಅಪ್ಪು ಎಂದೇ ಕರೆಯುತ್ತಾರೆ. ಇನ್ನು ಇವರ ಮೊದಲ ಸಿನಿಮಾಕ್ಕೆ ಕಾಲಿಟ್ಟ ಮೇಲೆ ಪುನೀತ್‌ ಎಂದು ಮರುನಾಮಕರಣ ಮಾಡುತ್ತಾರೆ.

ಅಪ್ಪು ಅಮ್ಮನ ಮುದ್ದಿನ ಮಗ ಅಮ್ಮ ಎಲ್ಲೇ ಹೋದರೂ ಅಮ್ಮನ ಜೊತೆಯಲ್ಲೇ ಇರುತ್ತಾರೆ. ಅಷ್ಟೇ ಅಲ್ಲದೇ ಅಣ್ಣಂದಿರ ಹಾಗೂ ಅಕ್ಕಂದಿರ ಮುದ್ದಿನ ತಮ್ಮನಾಗಿ ಬೆಳೆದ ಅಪ್ಪು ಆರು ತಿಂಗಳ ಮಗುವಾಗಿದ್ದಾಗಲೇ ಪ್ರೇಮದ ಕಾಣಿಕೆ ಸಿನಿಮಾದ ಮೂಲಕ ಬಣ್ಣದಲೋಕಕ್ಕೆ ಕಾಲಿಟ್ಟಿದ್ದಾರೆ. ನಂತರ ದಿನಗಳಲ್ಲಿ ತಂದೆಯೊಂದಿಗೆ ಹಲವಾರು ಸಿನಿಮಾಗಳಲ್ಲಿ ಬಾಲನಟರಾಗಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಭಾಗ್ಯವಂತ, ಬೆಟ್ಟದ ಹೂ, ಭಕ್ತ ಪ್ರಹ್ಲಾದ, ಪರಶುರಾಮ, ಯಾರಿವನು, ಹೀಗೆ ಹಲವಾರು ಸಿನಿಮಾಗಳಲ್ಲಿ ಬಾಲನಟರಾಗಿ ನಟಿಸಿದ ಹೆಗ್ಗಳಿಕೆ ಅಪ್ಪುಗೆ ಸಲ್ಲುತ್ತದೆ.

ನಂತರದ ದಿನಗಳಲ್ಲಿ ನಟ ಪುನೀತ್‌ ನಟನೆಗೆ ವಿರಾಮ ನೀಡಿ ಸ್ವಂತ ವ್ಯವಹಾರ ನಡೆಸುತ್ತಾರೆ. ಹಾಗೆಯೇ ತಾಯಿ ಪಾರ್ವತಮ್ಮನೊಂದಿಗೆ ಸಿನಿಮಾ ನಿರ್ಮಾಣದಲ್ಲಿ ತೊಡಗಿಸಿಕೊಳ್ಳುತ್ತಾರ. ನಂತರ ತನ್ನ ಸ್ನೇಹಿತರ ಮೂಲಕ ಅಶ್ವಿನಿ ರೇವಂತ್‌ ಅವರ ಪರಿಚಯವಾಗುತ್ತದೆ. ನಂತರದ ದಿನಗಳಲ್ಲಿ ಸ್ನೇಹಿತೆಯಾಗಿ ಪರಿಚಯವಾದ ಅಶ್ವಿನಿ ರೇವಂತ್‌ ಅವರನ್ನೇ ಹಿರಿಯವರ ಸಮ್ಮುಖದಲ್ಲಿ ಡಿಸೆಂಬರ್ 1, 1999 ರಂದು ಅದ್ಧೂರಿ ವಿವಾಹ ಸಮಾರಂಭದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಇವರಿಗೆ ಧೃತಿ ಹಾಗೂ ವಂದಿತಾ ಎನ್ನುವ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಇವರು 2002ರಲ್ಲಿ “ಅಪ್ಪು” ಎನ್ನುವ ಸಿನಿಮಾದ ಮೂಲಕ ಮತ್ತೆ ಪೂರ್ಣ ಪ್ರಮಾಣದ ನಾಯಕ ನಟನಾಗಿ ಸಿನಿರಂಗಕ್ಕೆ ರೀ ಎಂಟ್ರಿ ಕೊಡುತ್ತಾರೆ. ಇದಾದ ಬಳಿಕ ಒಂದರ ಹಿಂದೆ ಮತ್ತೊಂದು ಎನ್ನುವಂತೆ ತೆರೆ ಕಂಡ ಅಭಿ, ವೀರಕನ್ನಡಿಗ, ಮೌರ್ಯ, ಅರಸು, ಆಕಾಶ್‌, ಮಿಲನ, ವಂಶಿ, ನಟಸಾರ್ವಭೌಮ, ರಾಜಕುಮಾರ, ಯುವರತ್ನ, ಜೇಮ್ಸ್‌ ಹಾಗೂ ಕೊನೆಯದಾಗಿ ಕನಸಿನ ಸಾಕ್ಷ್ಯಚಿತ್ರವಾದ ಗಂಧದಗುಡಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನು ಕೊನೆಯ ಸಿನಿಮಾ ಗಂಧದಗುಡಿ ಎನ್ನುವ ಸಾಕ್ಷ್ಯಚಿತ್ರವನ್ನು ತಮ್ಮ ಪಿಆರ್‌ಕೆ ಬ್ಯಾನರ್‌ನಲ್ಲಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಜವಬ್ದಾರಿಯುತ್ತವಾಗಿ ನಿರ್ಮಿಸಿದ್ದಾರೆ. ಅಷ್ಟೇ ಅಲ್ಲದೇ ಇದೇ ಬ್ಯಾನರ್‌ ಅಡಿಯಲ್ಲಿ ಅನೇಕ ಕನ್ನಡ ಧಾರಾವಾಹಿಗಳನ್ನು ನಿರ್ಮಾಣ ಮಾಡಿದ್ದಾರೆ. ಹಾಗೆಯೇ ಅದೆಷ್ಟೋ ಹೊಸ ಪ್ರತಿಭೆಗಳಿಗೆ ನಟಿಸಲು ಅವಕಾಶವನ್ನು ನೀಡಿದ್ದಾರೆ. ಇವರಿಗೆ 1985ರಲ್ಲಿ ಬೆಟ್ಟದ ಹೂ ಸಿನಿಮಾದ ರಾಮು ಪಾತ್ರಕ್ಕೆ ಬೆಸ್ಟ್‌ ಚೈಲ್ಡ್‌ ಆರ್ಟಿಸ್ಟ್‌ ಎನ್ನುವ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಕೂಡ ದೊರತಿದೆ.

ಕರ್ನಾಟಕ ರಾಜ್ಯ ಫಿಲ್ಮಂ ಆವಾರ್ಡ್, ದಕ್ಷಿಣ ಫಿಲ್ಮಂ ಫೇರ್‌ ಆವಾರ್ಡ್‌, 5 ಬಾರೀ ಸೈಮಾ ಆವಾರ್ಡ್‌ ಕೂಡ ದೊರೆತಿದೆ. ನಟ ಪುನೀತ್‌ಗೆ 2021ರಲ್ಲಿ ಗೌರವ ಡಾಕ್ಟರೇಟ್‌ ಕೂಡ ದೊರತಿದೆ. ಮರಣ ನಂತರ ಕರ್ನಾಟಕದ ಅತೀ ದೊಡ್ಡ ಅವಾರ್ಡ್‌ “ಕರ್ನಾಟಕ ರತ್ನ” ಎಂಬ ಪ್ರಶಸ್ತಿಯನ್ನು 2022ರಲ್ಲಿ ಕರ್ನಾಟಕ ಸರಕಾರವು ನೀಡಿ ಗೌರವಿಸಿದೆ. ನಟ ಪುನೀತ್‌ ಅವರು ಕೇವಲ ಒಬ್ಬ ನಟನಾಗಿರದೇ ಕನ್ನಡ ಟಿವಿ ಮಾಧ್ಯಮದಲ್ಲೂ ಕೂಡ ಹಲವಾರು ರಿಯಾಲಿಟಿ ಶೋಗಳನ್ನು ನಡೆಸಿಕೊಟ್ಟಿದ್ದಾರೆ.

ಅದರಲ್ಲಿ ಕನ್ನಡದ ಕೋಟ್ಯಾಧಿಪತಿ, ಫ್ಯಾಮಿಲಿ ಪವರ್‌ ಹೀಗೆ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಟ್ಟು ಕನ್ನಡಿಗರ ಮನೆಮಗನಾಗಿದ್ದಾರೆ. ಅಷ್ಟೇ ಅಲ್ಲದೇ ಹಲವಾರು ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು ಎಂಬ ನಾಣ್ಣುಡಿಯಂತೆ ಯಾರಿಗೂ ತಿಳಿಯದಂತೆ ಪತ್ನಿ ಅಶ್ವಿಸಿ ಜೊತೆ ಸೇರಿಕೊಂಡು ತಮ್ಮಿಂದಾದ ಸಹಾಯ ಮಾಡಿದ್ದಾರೆ. ತಮ್ಮ ಮರಣಾಂತರ ತಂದೆಯವರಂತೆ ತಮ್ಮ ಕಣ್ಣುಗಳನ್ನು ನಾರಾಯಣ ನೇತ್ರಾಲಯಕ್ಕೆ ದಾನ ಮಾಡಿದ್ದಾರೆ.

ಇದನ್ನೂ ಓದಿ : ನಟ ಪುನೀತ್ ರಾಜ್‌ಕುಮಾರ್ 24 ಅಭಿಮಾನಿಗಳ ವಿರುದ್ಧ ಎಫ್‌ಐಆರ್ ದಾಖಲು

ಇಂತಹ ಅಧಮ್ಯ ದಿವ್ಯಚೇತನವು ಅಕ್ಟೋಬರ್‌ 29, 2021ರಂದು ನಮ್ಮನ್ನೆಲ್ಲ ಬಿಟ್ಟು ದೈಹಿಕವಾಗಿ ದೂರವಾಗಿದ್ದಾರೆ. ಆದರೆ ನಮ್ಮೆಲ್ಲರ ಪಾಲಿಗೆ ಇಂದಿಗೂ ಮಾನಸಿಕವಾಗಿ ಮತ್ತಷ್ಟು ಹತ್ತಿರವಾಗಿದ್ದಾರೆ. ಕನ್ನಡಿಗರ ಪಾಲಿಗೆ ಎಂದು “ಆರದ ನಂದಾದೀಪ”ವಾಗಿ ಸದಾ ಜೊತೆಗಿದ್ದಾರೆ.

Kannada cinema’s precious gem actor Puneeth Rajkumar’s birthday

Comments are closed.