ಸಂಜನಾ ಬುರ್ಲಿ ನಿಶ್ಚಿತಾರ್ಥ; ಚನ್ನಗಿರಿ ಹುಡುಗನ ಕೈಹಿಡಿಯಲಿದ್ದಾರೆ ಖ್ಯಾತ ಕಿರುತೆರೆ ನಟಿ
Actress Sanjana Burli Engagement: ಬೆಂಗಳೂರು: ಕನ್ನಡ ಕಿರುತೆರೆಯ ಜನಪ್ರಿಯ ನಟಿ ಸಂಜನಾ ಬುರ್ಲಿ ಅವರು ಸದ್ದಿಲ್ಲದೆ ವೈವಾಹಿಕ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ. ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯ ಮೂಲಕ ಮನೆಮಾತಾಗಿದ್ದ ಇವರು, ವೈದ್ಯರೊಬ್ಬರ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳಿಗೆ ದೊಡ್ಡ ಸರ್‌ಪ್ರೈಸ್ ನೀಡಿದ್ದಾರೆ.
ಸಂಜನಾ ಬುರ್ಲಿ ಅವರು ವರಿಸಲಿರುವ ಹುಡುಗನ ಹೆಸರು ಸಮರ್ಥ್. ಚನ್ನಗಿರಿ ಮೂಲದವರಾದ ಸಮರ್ಥ್ ಅವರು ಎಂಬಿಬಿಎಸ್ ಮತ್ತು ಎಂಡಿ ಪದವಿ ಪಡೆದಿದ್ದು, ವೃತ್ತಿಯಲ್ಲಿ ವೈದ್ಯರಾಗಿದ್ದಾರೆ. ವೈದ್ಯಕೀಯ ಕ್ಷೇತ್ರದ ಜೊತೆಗೆ ಕ್ರೀಡೆಯಲ್ಲೂ ಆಸಕ್ತಿ ಹೊಂದಿರುವ ಇವರು ಹ್ಯಾಂಡ್‌ಬಾಲ್ ಅಥ್ಲೀಟ್ ಕೂಡ ಆಗಿದ್ದಾರೆ. ಪ್ರವಾಸ ಮಾಡುವುದು ಮತ್ತು ಹೊಸ ತಾಣಗಳನ್ನು ಅನ್ವೇಷಿಸುವುದು ಸಮರ್ಥ್ ಅವರ ನೆಚ್ಚಿನ ಹವ್ಯಾಸಗಳಾಗಿವೆ.
ನಿಶ್ಚಿತಾರ್ಥದ ಬಗ್ಗೆ ಯಾವುದೇ ಮುನ್ಸೂಚನೆ ನೀಡದ ಸಂಜನಾ, ಇಂದು ಸಾಮಾಜಿಕ ಜಾಲತಾಣದಲ್ಲಿ ಸುಂದರವಾದ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಸುದ್ದಿಯನ್ನು ಅಧಿಕೃತಪಡಿಸಿದ್ದಾರೆ. ಸಾಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸುತ್ತಿದ್ದ ಈ ಜೋಡಿಯ ಫೋಟೋಗಳು ಕ್ಷಣಾರ್ಧದಲ್ಲಿ ವೈರಲ್ ಆಗಿದ್ದು, ಕಿರುತೆರೆ ಗಣ್ಯರು ಹಾಗೂ ಅಭಿಮಾನಿಗಳು ಶುಭಾಶಯಗಳ ಮಳೆ ಸುರಿಸುತ್ತಿದ್ದಾರೆ.
ಮಾಜಿ ಪ್ರಿಯಕರನ ಪತ್ನಿಗೆ ಎಚ್‌ಐವಿ ಇಂಜೆಕ್ಷನ್ ಚುಚ್ಚಿದ ಮಹಿಳೆ!
‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ಸ್ನೇಹಾ ಎಂಬ ಪಾತ್ರದ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದ ಸಂಜನಾ, ಪ್ರಸ್ತುತ ‘ಶ್ರೀ ಗಂಧದಗುಡಿ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ನಟನೆಯ ನಡುವೆಯೇ ಸದ್ದಿಲ್ಲದೆ ವೈಯಕ್ತಿಕ ಜೀವನದ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿರುವ ಇವರು, ಸದ್ಯದಲ್ಲೇ ಮದುವೆಯ ದಿನಾಂಕವನ್ನು ಪ್ರಕಟಿಸುವ ಸಾಧ್ಯತೆಯಿದೆ.



