ಪಂಚಭಾಷೆಗಳಲ್ಲಿ ‘ಕಟ್ಟಾಲನ್’ ದರ್ಶನ: ಕನ್ನಡಿಗ ಅಜನೀಶ್ ಲೋಕನಾಥ್ ಸಂಗೀತದ ಆ್ಯಕ್ಷನ್ ಟೀಸರ್ ಔಟ್!

Kattalan Teaser: ಮಲಯಾಳಂ ಚಿತ್ರರಂಗದ ಬಹುನಿರೀಕ್ಷಿತ ಹಾಗೂ ಅತ್ಯಂತ ಬೃಹತ್ ಬಜೆಟ್‌ನ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ‘ಕಟ್ಟಾಲನ್’ (Kattalan) ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಚಿತ್ರಪ್ರೇಮಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. ಅಂಟ್ರಿ ವರ್ಗೀಸ್ ಅವರ ವೃತ್ತಿಜೀವನದ ಅತ್ಯಂತ ಶಕ್ತಿಶಾಲಿ ‘ಮಾಸ್’ ಪಾತ್ರ ಇದಾಗಲಿದ್ದು, ಟೀಸರ್‌ನಲ್ಲಿರುವ ನೈಜ ಸಾಹಸ ದೃಶ್ಯಗಳು ಎಲ್ಲರ ಗಮನ ಸೆಳೆಯುತ್ತಿವೆ.

ಈ ಚಿತ್ರದ ವಿಶೇಷತೆಯೆಂದರೆ, ಟೀಸರ್‌ನಲ್ಲಿ ಕಂಡುಬರುವ ಕಾಡಿನ ಸಾಹಸ ದೃಶ್ಯಗಳಲ್ಲಿ ಯಾವುದೇ ರೀತಿಯ ಕಂಪ್ಯೂಟರ್ ಗ್ರಾಫಿಕ್ಸ್ (VFX) ಬಳಸಲಾಗಿಲ್ಲ. ಬದಲಾಗಿ, ನೈಜ ಆನೆಯೊಂದಿಗೇ ಸಾಹಸ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಅಂತರಾಷ್ಟ್ರೀಯ ಸ್ಟಂಟ್ ಕೋ-ಆರ್ಡಿನೇಟರ್ ಕೆಚಾ ಖಂಫಕ್ತಿ ನೇತೃತ್ವದಲ್ಲಿ ಥೈಲ್ಯಾಂಡ್‌ನ ದಟ್ಟ ಅರಣ್ಯಗಳಲ್ಲಿ ಈ ದೃಶ್ಯಗಳನ್ನು ಸೆರೆಹಿಡಿಯಲಾಗಿದ್ದು, ಇದು ಪ್ರೇಕ್ಷಕರಿಗೆ ರೋಚಕ ಅನುಭವ ನೀಡಲಿದೆ.

ಕನ್ನಡಿಗ ಅಜನೀಶ್ ಲೋಕನಾಥ್ ಸಂಗೀತದ ಬಲ

‘ಕಾಂತಾರ’ ಮತ್ತು ‘ಮಹಾರಾಜ’ ಚಿತ್ರಗಳ ಮೂಲಕ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ಖ್ಯಾತ ಸಂಗೀತ ನಿರ್ದೇಶಕ ಬಿ. ಅಜನೀಶ್ ಲೋಕನಾಥ್ ಅವರು ‘ಕಟ್ಟಾಲನ್’ ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡಿದ್ದಾರೆ. ಟೀಸರ್‌ನಲ್ಲಿರುವ ಅವರ ಪವರ್‌ಫುಲ್ ಮ್ಯೂಸಿಕ್ ಚಿತ್ರದ ತೂಕವನ್ನು ಇಮ್ಮಡಿಗೊಳಿಸಿದೆ.

ಬೃಹತ್ ತಾರಾಬಳಗ

ಪ್ಯಾನ್-ಇಂಡಿಯಾ ಮಟ್ಟದಲ್ಲಿ ತಯಾರಾಗಿರುವ ಈ ಚಿತ್ರದಲ್ಲಿ ದಕ್ಷಿಣ ಭಾರತದ ಖ್ಯಾತ ನಟರ ದಂಡೇ ಇದೆ. ದುಸರಾ ವಿಜಯನ್, ತೆಲುಗು ನಟ ಸುನಿಲ್, ಕಬೀರ್ ದುಹಾನ್ ಸಿಂಗ್ ಮತ್ತು ರಾಜ್ ತಿರಂದಾಸು ಇದ್ದು, ಬಾಲಿವುಡ್‌ನ ಪಾರ್ಥ್ ತಿವಾರಿ, ಮಲಯಾಳಂ ಹಿರಿಯ ನಟರಾದ ಜಗದೀಶ್ ಮತ್ತು ಸಿದ್ದಿಕ್ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಗುಯಿಲಿನ್ ಬಾರ್ ಸಿಂಡ್ರೋಮ್: ನರಮಂಡಲದ ಮೇಲೆ ದಾಳಿ ಮಾಡುವ ನಿಗೂಢ ಕಾಯಿಲೆ; ಲಕ್ಷಣವೇನು, ತಡೆಯುವುದು ಹೇಗೆ?

ಪ್ರೀ-ರಿಲೀಸ್ ಬ್ಯುಸಿನೆಸ್‌ನಲ್ಲಿ ದಾಖಲೆ

ಕ್ಯೂಬ್ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ಶರೀಫ್ ಮೊಹಮ್ಮದ್ ನಿರ್ಮಿಸಿರುವ ಈ ಚಿತ್ರವು ಚಿತ್ರೀಕರಣ ಮುಗಿಯುವ ಮುನ್ನವೇ ಸಾಗರೋತ್ತರ ಹಕ್ಕುಗಳ (Overseas Rights) ಮಾರಾಟದಲ್ಲಿ ದಾಖಲೆ ಮೊತ್ತದ ವ್ಯವಹಾರ ಮಾಡಿದೆ. ಇದು ಮಲಯಾಳಂ ಚಿತ್ರರಂಗದ ಇತಿಹಾಸದಲ್ಲಿ ಒಂದು ಮೈಲಿಗಲ್ಲಾಗಲಿದೆ ಎಂದು ಅಂದಾಜಿಸಲಾಗಿದೆ. ‘ಕಟ್ಟಾಲನ್’ ಚಿತ್ರವು ಇದೇ ಮೇ 14 ರಂದು ಕನ್ನಡ, ಮಲಯಾಳಂ, ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ವಿಶ್ವಾದ್ಯಂತ ಏಕಕಾಲಕ್ಕೆ ತೆರೆಕಾಣಲಿದೆ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories