ಕಾಶ್ಮೀರದ ಕಣಿವೆಯಲ್ಲಿ ದೆವ್ವಗಳ ಹಾವಳಿ! ʼಬಾರಾಮುಲ್ಲಾʼ ಇದು ಬೆಚ್ಚಿ ಬೀಳಿಸೋ ಕಥೆ

ಅದೊಂದು ಪ್ರಕ್ಷುಬ್ಧ ಸ್ವರ್ಗ! ಅಬ್ಬಾ ಇಂತಹ ಕಠಿಣ ಪದ ಪ್ರಯೋಗವೇ? ಸ್ವರ್ಗ (Heaven) ಎಂದಿಗೂ ಸರಳ,ಸಹಜ, ಸುಂದರ ಕಣ್ರೀ! ಅಂತೀರಾ? ಹಿಂದೊಮ್ಮೆ ಹಾಗೇ ಇದ್ದ ಸ್ವರ್ಗ ಈಗ ಒಳ ಮೈಯಲ್ಲಿ ಅಸಾಧಾರಣ ಭಯ, ಚಿಂತೆ, ಉದ್ವೇಗಗಳಿಂದ ನರಕವಾಗಿ ಹೋಗಿದೆ. ಪ್ರಕೃತಿಗೆ ಡಿಪ್ರೆಶನ್ ಬರುವ ಹಾಗಿದ್ದರೆ ಅದು ಇದೇ ರೀತಿ ಇರುತ್ತಿತ್ತು. ನಾವೀಗ ಹೇಳುತ್ತಿರುವ ಕಥೆ ಒಂದು ಮಹಾ ದಾರುಣ ಗ್ರಂಥವಾಗಬಹುದು. ಮನುಕುಲದ ಇತಿಹಾಸದಲ್ಲಿ (History) ಹೇವರಿಕೆಯ ಅಧ್ಯಾಯವಾಗಬಹುದು. ಇದಕ್ಕೆ ಕಾರಣ ಕೊನೆಗೂ ಅದೇ “ಧರ್ಮಾಂಧತೆ!”

ʼಬಾರಾಮುಲ್ಲಾʼ ಇದು ಮಾಯಾಜಾಲ!

‘ಬಾರಾಮುಲ್ಲಾ’ ಇದೊಂದು ವಿಶಿಷ್ಟ ಚಿತ್ರ. ಒಂದು ಕ್ರೂರ ಸತ್ಯವನ್ನು ಮಾಯಾಜಾಲದಲ್ಲಿ ಬಂಧಿಸಿ ಹಾರರ್ ಹೂರಣ ಬೆರೆಸಿ ಎಲ್ಲರೂ ನೋಡಬಹುದಾದ ಚಿತ್ರವನ್ನು ಆದಿತ್ಯ ಧಾರ್ ನಿರ್ಮಿಸಿದ್ದಾರೆ. ಆದಿತ್ಯ ಜಂಭಾಲೆ ನಿರ್ದೇಶನದ ಈ ಚಿತ್ರವನ್ನು ಮಾನವ್ ಕೌಲ್ ಡಿಸಿಪಿ ರಿಜ್ವಾನ್ ಸಯ್ಯದ್ ಆಗಿ ಭುಜದ ಮೇಲೆ ಹೊತ್ತು ಸಾಗಿದ್ದಾರೆ.

ಕಳ್ಳ ಪೊಲೀಸ್‌ ಆಟದಲ್ಲಿ ಕಗ್ಗಂಟಾದ ಸತ್ಯ

ಡಿಸಿಪಿ ರಿಜ್ವಾನ್ ಸಯ್ಯದ್ ನಾನಾ ರೀಸನ್ ಗಳಿಂದ ಕುಖ್ಯಾತನಾದ?! ಪೊಲೀಸ್ ಆಫೀಸರ್, ಆತನಿಗೆ ಈಗ ಹೊಸ ಟಾಸ್ಕ್ ಒಂದು ಅಸೈನ್ ಆಗಿದೆ. ಕಾಶ್ಮೀರದ ಕಣಿವೆಯ ಬಾರಾಮುಲ್ಲಾದಲ್ಲಿ ಪ್ರಖ್ಯಾತ ರಾಜಕಾರಣಿಯ ಮಗ ಕಿಡ್ನ್ಯಾಪ್ ಆಗಿದ್ದಾನೆ. ಸ್ಥಳೀಯ ಪೊಲೀಸ್ ಕಾರ್ಯಾಚರಣೆಯಲ್ಲಿ ಪ್ರೈಮ್ ಸಸ್ಪೆಕ್ಟ್ ಒಬ್ಬ ಜಾದೂಗಾರ! ಅವನನ್ನು ಹಿಡಿದು ತದುಕಿದರೂ ಕೊನೆಗೆ ಹೊರಬಂದಿದ್ದು ಇವರಿಗೆ ಮತ್ತೂ ಕಗ್ಗಂಟಾದ ಸತ್ಯ!

ಇದನ್ನೂ ಓದಿ: ಉಡುಪಿಗೆ ನ. 28 ರಂದು ನರೇಂದ್ರ ಮೋದಿ

ಹಳೇ ಬಂಗಲೆಯಲ್ಲಿ ಅಡಗಿದ್ಯಾರು?

ಈ ಆಫೀಸರ್ ಫ್ಯಾಮಿಲಿಗೊಂದು ಹಳೆಯ ಬಂಗಲೆಯನ್ನು ಕೊಡಲಾಗಿದೆ. ಆ ಬಂಗಲೆಯಲ್ಲಿ ಇಬ್ಬರು ಮಕ್ಕಳಾದ ನೂರಿ ಮತ್ತು ಅಯಾನ್ ಜೊತೆ ಕವಿಯತ್ರಿ ಹೆಂಡತಿ ಗುಲ್ನಾರ್ ಜೊತೆ ವಾಸವಾಗಿದ್ದಾನೆ. ಮನೆಯ ಚಾಕರಿಗಿರುವ ಇಕ್ಬಾಲ್ ಮೂಕ. ಅದೇನೋ ಕಾಣೆ, ದೂರ ದೂರಕ್ಕೂ ನಾಯಿ ಇಲ್ಲದ ಆ ಮನೆಯಲ್ಲಿ ನಿತ್ಯ ನಾಯಿಯ ವಾಸನೆಯನ್ನು ನೂರಿ ಅನುಭವಿಸುತ್ತಾಳೆ. ಮನೆಯ ತಿಜೋರಿಯಲ್ಲಿ ನಿತ್ಯ ಒಡೆಯುವ ಗಾಜಿನ ಬಾಟಲಿಗಳ ಬಗ್ಗೆ ಪತ್ನಿ ಗುಲ್ನಾರ್ ಗೆ ಚಿಂತೆ, ಇತ್ತ ಮಗ ಅಯಾನ್ ಮನೆಯ ನೆಲಹಾಸನ್ನು ಎಬ್ಬಿ ಕವಡೆ ಹುಡುಕುತ್ತಾನೆ. ಅದರಲ್ಲಿ ಆಡುವಾಗ ಒಂದೊಂದಾಗಿ ಕವಡೆ‌ ಮಾಯ? ಅತ್ತ ಆಫೀಸರ್ ಕಣ್ಮುಂದೆಯೇ ಹುಡುಗರು ಜಾದೂ ರೀತಿ ಮಾಯವಾಗುತ್ತಿದ್ದಾರೆ?! ಮನುಷ್ಯ ಯೋಚನೆಗೆ ನಿಲುಕದ ಈ ಮಾಯೆಯ ಹಿಂದಿನ ಕಾರಣವೇನು?

ಭಯೋತ್ಪಾದನೆ, ಕಾಶ್ಮೀರಿ ಪಂಡಿತರು, ಕಲ್ಲೆಸೆಯೋ ಗ್ಯಾಂಗ್, ಫ್ಯಾಮಿಲಿ ಸೆಂಟಿಮೆಂಟ್!

ಇಕ್ಬಾಲ್ ದಿನವೂ ಮೀನು, ಅನ್ನ ಸಾರು ತೆಗೆದುಕೊಂಡು ಹೋಗಿ ಯಾರಿಗೋ ಕೊಡ್ತಾನೆ! ಆ ರೂಮ್ ಗೆ ಬಾಗಿಲು ಹಾಕಿದೆ. ಇತ್ತ ದಿನಗಳೆದಂತೆ ಪೊಲೀಸ್ ನ ಮಗಳೂ ಗಾಯಬ್! ಅಯ್ಯೋ, ವಿಧಿಯೇ ಎಂದು ಕೈ ಕಟ್ಟೋ ಹಾಗಿಲ್ಲ. ಹುಡುಕುತ್ತಾ ಹೋದವರಿಗೆ ಬಯಲಾಗುವುದು ಎರಡು ಕವಲಿನ ಸತ್ಯ ಆದರೆ ಎರಡಕ್ಕೂ ಮೂಲ ಒಂದೇ!ಇತ್ತ ಕಾಶ್ಮೀರದಲ್ಲಿ ಬಾಲ ಭಯೋತ್ಪಾದಕ ಸಮೂಹ ಹುಟ್ಟು ಹಾಕಲು ತಯಾರಾಗಿರುವ ಒಂದು ಗ್ಯಾಂಗ್, ಮನೆಯೊಳಗೆ ಹುದುಗಿರುವ ನಾನಾ ರಹಸ್ಯದಿಂದ ಉಂಟಾಗುತ್ತಿರುವ ತೊಂದರೆಗಳು, ಈ ತಿಕ್ಕಾಟದ ನಡುವೆ ಡಿಸಿಪಿ ಹಿಂದೊಮ್ಮೆ ಮಾಡಿರುವ ಅಕ್ಷಮ್ಯ ಅಪರಾಧದ ನೆನಪು ಜೊತೆಗೆ ಅಪ್ಪ-ಮಕ್ಕಳ ಮನಸ್ತಾಪ, ಕಲ್ಲು ಎಸೆಯುವ ಗ್ಯಾಂಗ್, ಭಯೋತ್ಪಾದನೆಯ ತಾಂತ್ರಿಕ ಮುಖ ಎಲ್ಲವೂ ಈ ಚಿತ್ರದಲ್ಲಿ ಅನಾವರಣವಾಗಿದೆ.

ನೆಟ್‌ ಫ್ಲಿಕ್ಸ್‌ ನಲ್ಲಿ ಲಭ್ಯ

ಕಾಶ್ಮೀರದ ಇಸ್ಲಾಂ ಮತಾಂಧತೆ, ಕಾಶ್ಮೀರಿ ಪಂಡಿತರ ಮೇಲಾದ ಘೋರ ಅನ್ಯಾಯ, ಈಗಲೂ ಕೂಡ ವಿಷಸರ್ಪಗಳ ಹಾಗೆ ಭುಸುಗುಟ್ಟುತ್ತಿರುವ ನಯವಂಚಕ ಗುಣದ ಜನಸಮೂಹ! ಆ ನಡುವೆ ಬಲಿಯಾಗಿ ಹೋದ ಕಾಶ್ಮೀರದ ಮೂಲ ನಿವಾಸಿ ಪಂಡಿತ, ಬಖರವಾಲ, ಗುಜ್ಜರ, ಚೋಪ, ಡೋಗ್ರ, ದದ್ರ ಕುಲಗಳು. ಇದೆಲ್ಲವನ್ನೂ ಒಂದು ಮಾಯಾವಿ ಮೂಸೆಯಲ್ಲಿ ಹಾಕಿ ನಿಷ್ಠವಾಗಿ ಪ್ರೇಕ್ಷಕನ ಮುಂದಿಡಲಾಗಿದೆ. ಆದಿತ್ಯ ಜಂಭಾಲೆ ನಿರ್ದೇಶನದ ಈ ಚಿತ್ರ ನಿಮಗೆ ನೆಟ್ ಫ್ಲಿಕ್ಸ್ ನಲ್ಲಿ ನೋಡಲು ಲಭ್ಯವಿದೆ. ನಿಮಗೆ ಸತ್ಯವನ್ನು ನೋಡಿ ಅರಗಿಸಿಕೊಳ್ಳುವ ಶಕ್ತಿ ಇದ್ದರೆ ಈ ಚಿತ್ರವನ್ನು ಖಂಡಿತ ನೋಡಿ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories