Puneeth Rajkumar Biography: ಪುನೀತ್ ರಾಜ್‍ಕುಮಾರ್ ಬಯೋಗ್ರಫಿ; ಆರ್ಡರ್ ಮಾಡುವುದು ಹೇಗೆ?

ಕನ್ನಡಿಗರ ಪಾಲಿನ ಕಣ್ಮಣಿ ಪುನೀತ್ ರಾಜ್‌ಕುಮಾರ್ ಅವರ ಜೀವನ ಗಾಥೆ ಲಕ್ಷಾಂತರ ಜನರಿಗೆ ಸ್ಪೂರ್ತಿಯಾಗಿದೆ. ಯಾರಿಗೂ ತಿಳಿಯದಂತೆ ಪ್ರಚಾರದ ಹಂಬಲವಿಲ್ಲದೇ ನೊಂದವರ ಪಾಲಿಗೆ ಬೆಳಕಾಗುತ್ತಿದ್ದ ಅಪ್ಪು ಅವರಂತೆ ಜೀವನ ನಡೆಸಬೇಕೆಂದು ಎಷ್ಟೋ ಜನರು ಹಂಬಲಿಸುತ್ತಿದ್ದಾರೆ. ಪುನೀತ್ ರಾಜ್‌ಕುಮಾರ್ ಇಲ್ಲ ಎಂಬ ಕಹಿಸತ್ಯವನ್ನು ಇನ್ನೂ ಎಷ್ಟೋ ಜನ ಅರಗಿಸಿಕೊಂಡಿಲ್ಲ. ಈ ಹೊತ್ತಲ್ಲೇ ಪುನೀತ್ ರಾಜ್‌ಕುಮಾರ್ ಜೀವನಗಾಥೆಯನ್ನು (Puneeth Rajkumar Biography) ಹೊತ್ತು ಪುಸ್ತಕವೊಂದು ಪ್ರಕಟವಾಗುತ್ತಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಓದುಗರ ಕೈಸೇರಲಿದೆ. ಹಿರಿಯ ಸಿನಿಮಾ ಪತ್ರಕರ್ತ ಡಾ. ಶರಣು ಹುಲ್ಲೂರು ಅವರು ಈ ಪುಸ್ತಕವನ್ನು ಬರೆದಿದ್ದು, ಪ್ರಸಿದ್ಧ ಪ್ರಕಾಶಕರಾದ ಸಾವಣ್ಣ ಪ್ರಕಾಶನ ಪುಸ್ತಕವನ್ನು ಪ್ರಕಟಿಸಿದೆ.

ಪುನೀತ್ ರಾಜ್‌ಕುಮಾರ್ ಅವರ ಜೀವನಗಾಥೆಯನ್ನು ಬರೆದ ಕುರಿತು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಹಿರಿಯ ಸಿನಿಮಾ ಪತ್ರಕರ್ತ ಡಾ.ಶರಣು ಹುಲ್ಲೂರು, ” ಅಪ್ಪು ಅವರನ್ನು ಹಲವಾರು ಬಾರಿ ಸಂದರ್ಶಿಸಿದ್ದೇನೆ. ಸಾಕಷ್ಟು ಬಾರಿ ಪತ್ರಿಕಾಗೋಷ್ಠಿಯಲ್ಲಿ ಎದುರಾಗಿದ್ದೇನೆ. ನಾನು ಬರೆದ ಕಿಚ್ಚ ಸುದೀಪ್ ಅವರ ಕನ್ನಡ ಮಾಣಿಕ್ಯ ಕಿಚ್ಚ ಪುಸ್ತಕವನ್ನು ಬಿಡುಗಡೆ ಮಾಡಿದ್ದೇ ಪುನೀತ್ ಸರ್. ಎರಡು ವರ್ಷಗಳ ಹಿಂದೆ ಪುನೀತ್ ರಾಜ್ ಕುಮಾರ್ ಕುರಿತು ಪುಸ್ತಕ ಬರೆಯಬೇಕು ಎಂದು ಕನಸು ತುಂಬಿದವರು ಹೆಸರಾಂತ ನಿರ್ಮಾಪಕ ಜಾಕ್ ಮಂಜು ಅವರು. ಅದೂ ಸುದೀಪ್ ಅವರ ಪುಸ್ತಕ ಬಿಡುಗಡೆ ದಿನದಂದು., ನನ್ನ ನೆಚ್ಚಿನ ವೀರಕಪುತ್ರ ಶ್ರೀನಿವಾಸ್ ಸರ್ ಕೂಡ ಅವತ್ತು ಜತೆ ಇದ್ದರು. ಆದರೆ, ಪುನೀತ್ ಸರ್ ಕುರಿತಾದ ಪುಸ್ತಕ ಇಂತಹ ಹೊತ್ತಿನಲ್ಲಿ ಬರುತ್ತದೆ ಎನ್ನುವ ಸಂಕಟದ ಮಧ್ಯ, ಒಬ್ಬ ಸಿನಿಮಾ ಪತ್ರಕರ್ತನಾಗಿ, ನಮ್ಮೆಲ್ಲ ಸಿನಿಮಾ ಪತ್ರಕರ್ತರ ಪರವಾಗಿ ಈ ಬಯೋಗ್ರಫಿ ಅವರಿಗೆ ಅರ್ಪಿಸುವೆ” ಎಂದು ಬರೆದುಕೊಂಡಿದ್ದಾರೆ.

ಮುಂದುವರೆದು ಇನ್ನಷ್ಟು ಮಾಹಿತಿಗಳನ್ನು ತೆರೆದಿಟ್ಟಿರುವ ಅವರು, “ಇದು ಕೇವಲ ಪುನೀತ್ ರಾಜ್‍ಕುಮಾರ್ ಅವರ ಜೀವನ ಕಥನವಲ್ಲ, ಈ ಮೂಲಕ ಕನ್ನಡ ಸಿನಿಮಾ ರಂಗದ ಚರಿತ್ರೆಯನ್ನೂ ಕೂಡ ನೀವು ಓದಬಲ್ಲರಿ. ಈಗಾಗಲೇ ಪುನೀತ್ ಸರ್ ನಿಮ್ಮೆಲ್ಲರ ಹೃದಯದಲ್ಲಿ ಇದ್ದಾರೆ. ಪುಸ್ತಕದ ಮೂಲಕ ನಿಮ್ಮ ಮನೆಯೊಳಗೂ ಇರಲಿ ಅನ್ನುವುದು ನನ್ನಾಸೆ. ಪುಸ್ತಕ ಬಿಡುಗಡೆಗೂ ಮುನ್ನ ಮಾರುಕಟ್ಟೆಯಲ್ಲಿ ಪುಸ್ತಕ ಲಭ್ಯ. ಕಾರಣವಿಷ್ಟೇ ಅತೀ ಶೀಘ್ರದಲ್ಲೇ ಪುಸ್ತಕ ಬಿಡುಗಡೆ ಆಗಲಿದೆ. ಈ ಹೊತ್ತಿನಲ್ಲಿ ನಿಮ್ಮ ಕೈಯಲ್ಲೂ ನೀನೇ ರಾಜಕುಮಾರ ಪುಸ್ತಕ ಇದ್ದರೆ, ನೀವೂ ಇದ್ದಲ್ಲಿಂದಲೇ ಈ ಪುಸ್ತಕ ಬಿಡುಗಡೆ ಮಾಡಬಹುದು ಎನ್ನುವ ಆಸೆ. ಬರೋಬ್ಬರಿ 265 ಪುಟಗಳ ಈ ಬೃಹತ್ ಹೊತ್ತಿಗೆ ಇದಾಗಿದ್ದು ಬಿಡುಗಡೆ ದಿನಾಂಕ ಶೀಘ್ರದಲ್ಲೇ ತಿಳಿಸುವುದಾಗಿ ಮಾಹಿತಿ ನೀಡಿದ್ದಾರೆ.

8660404034 ಈ ಸಂಖ್ಯೆಯನ್ನು ವಾಟ್ಸಾಪ್ ಮೂಲಕ ಸಂಪರ್ಕಿಸಿ ಒಟ್ಟು 34 ಅಧ್ಯಾಯಗಳನ್ನು ಒಳಗೊಂಡಿರುವ ಈ ಪುಸ್ತಕವು 265 ಪುಟಗಳನ್ನು ಹೊಂದಿರಲಿದೆ. ಪುನೀತ್ ರಾಜ್‌ಕುಮಾರ್ ಅವರ ಜೀವನವನ್ನು ಅಕ್ಷರ ರೂಪದಲ್ಲಿ ಓದುಗರ ಮುಂದೆ ಕಟ್ಟಿಕೊಡಲಿದೆ.

ಇದನ್ನೂ ಓದಿ: China: ಚೀನಾ ಹೆದರುವುದು ಈ ಎರಡು ವಿಷಯಕ್ಕೆ ಮಾತ್ರ!

(Puneeth Rajkumar Biography Film Journalist Dr Sharanu Hullur wrote published by Sawanna books)

Comments are closed.