ಮತ್ತೆ ಮುಂದೂಡಿಕೆಯಾಯ್ತು ಜಾಮೀನು ಅರ್ಜಿ ವಿಚಾರಣೆ…! ತುಪ್ಪದ ಬೆಡಗಿಗೆ ಜೈಲೇ ಗತಿ..!!

ಕಳೆದ ನಾಲ್ಕು ತಿಂಗಳಿನಿಂದ ಜೈಲಿನಲ್ಲೇ ಕಾಲ ಕಳೆಯುತ್ತಿರುವ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಇನ್ನಷ್ಟು ದಿನ ಜೈಲಿನಲ್ಲೇ ಮುದ್ದೆ ಮುರಿಯೋದು ಪಕ್ಕಾ ಎಂಬಂತಾಗಿದ್ದು, ಸುಪ್ರೀಂ ಕೋರ್ಟ್ ನಲ್ಲಿ ರಾಗಿಣಿ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆಯಾಗಿದೆ.

 ಜನವರಿ 8 ರಂದು ವಿಚಾರಣೆಗೆ ಬಂದಿದ್ದ ಪ್ರಕರಣದ ವಿಚಾರಣೆಯನ್ನು ನ್ಯಾಯಪೀಠ ಮುಂದೂಡಿದ್ದು, ಇಂದಾದರೂ ಜಾಮೀನು ಸಿಗಬಹುದೆಂಬ ಖುಷಿಯಲ್ಲಿದ್ದ ರಾಗಿಣಿಗೆ ಮತ್ತೆ ನಿರಾಸೆ ಎದುರಾಗಿದ್ದು, ಮತ್ತೆ ಅರ್ಜಿ ವಿಚಾರಣೆ ಮುಂದೂಡಲ್ಪಟ್ಟಿದೆ.

ಕರ್ನಾಟಕ ಹೈಕೋರ್ಟ್ ನಲ್ಲಿ ರಾಗಿಣಿ ಜಾಮೀನು ಅರ್ಜಿ ವಜಾಗೊಂಡ ಬಳಿಕ ರಾಗಿಣಿ ಜಾಮೀನಿಗಾಗಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ರಾಗಿಣಿ ಅರ್ಜಿ  ಡಿಸೆಂಬರ್ 26 ರಂದು ಪರಿಶೀಲನೆಗೊಂಡು ವಿಚಾರಣೆಗೆ ಫೈಲ್ ಆಗಿತ್ತು. ಬಳಿಕ ಜನವರಿ 4 ಹಾಗೂ 8 ರಂದು ವಿಚಾರಣೆ ನಡೆಸಲಾಗಿತ್ತು.

ರಾಗಿಣಿ ಪರ ವಕೀಲರಾದ ಶಾಹಿಲ್ ಭಾಲೈಕ್ ಸುಪ್ರೀಂ ಕೋರ್ಟ್ ಗೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿರುವ ರಾಗಿಣಿ ಕಳೆದ ಸಪ್ಟೆಂಬರ್ 3 ರಂದು ಬೆಂಗಳೂರು ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದರು. ‘

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದ ಪ್ರಮುಖ ಆರೋಪಿ ಶಿವಪ್ರಕಾಶ್ ಚಿಪ್ಪಿ ಕೂಡ ಇತ್ತೀಚಿಗೆ ಬಂಧನಕ್ಕೊಳಗಾಗಿರುವುದರಿಂದ ರಾಗಿಣಿ ಜಾಮೀನಿನ ಹಾದಿ ಸುಗಮವಾಗಿದೆ ಎಂದು ಭಾವಿಸಲಾಗಿತ್ತು. ಆದರೆ ತುಪ್ಪದ ಹುಡುಗಿಗೆ ಜೈಲಿನಿಂದ ಬಿಡುಗಡೆಯ ಭಾಗ್ಯವೇ ಇದ್ದಂತಿಲ್ಲ. ರಾಗಿಣಿ ಬಳಿಕ ಬಂಧನಕ್ಕೊಳಗಾಗಿದ್ದ ಸ್ಯಾಂಡಲ್ ವುಡ್ ನಟಿ ಸಂಜನಾ ಗಲ್ರಾನಿ ಅನಾರೋಗ್ಯದ ಕಾರಣ ಮುಂದಿಟ್ಟು ಬೇಲ್ ಪಡೆದು ಹೊರಬಂದಿದ್ದಾರೆ.

ಸಿಸಿಬಿ ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದ ತನಿಖೆ ಮುಂದುವರೆಸಿದ್ದು, ಇಂದು ಪ್ರಕರಣದ 6 ನೇ ಆರೋಪಿ ಆದಿತ್ಯ ಆಳ್ವರನ್ನು ಬಂಧಿಸಿದೆ.

Comments are closed.