ಸ್ಟಾರ್ ಗಳೇ ಅಭಿಮಾನಿಗಳನ್ನು ರಕ್ಷಿಸಿ…! ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ಪತ್ರ..!!

ಸ್ಯಾಂಡಲ್ ವುಡ್ ನಲ್ಲಿ ನೂರಾರು ಸ್ಟಾರ್ಸ್, ಲಕ್ಷಾಂತರ, ಕೋಟ್ಯಾಂತರ ಅಭಿಮಾನಿಗಳು. ಸ್ಟಾರ್ ಬರ್ತಡೇ ಗೆ ಕೇಕ್ ಹಿಡಿದು ಮನೆಮುಂದೇ ನಿಲ್ಲೋ ಅಭಿಮಾನಿಗಳು ಕೊರೋನಾದಿಂದ ಕಂಗೆಡುತ್ತಿದ್ದಾರೆ. ಹೀಗಾಗಿ ಈಗ ಸ್ಟಾರ್ ಗಳು ಅಭಿಮಾನಿಗಳನ್ನು ರಕ್ಷಿಸುವ,ಬದುಕಿಸಿಕೊಳ್ಳಬೇಕಾದ ಸಮಯ. ಹೀಗಾಗಿ ಅಭಿಮಾನಿಗಳಿಗೆ ಸಹಾಯ ಮಾಡೋಕಾಗತ್ತಾ ಮೈಡಿಯರ್ ಸ್ಟಾರ್ಸ್ ಅಂತ ಪ್ರಶ್ನಿಸಿದ ಪತ್ರವೊಂದು ವೈರಲ್ ಆಗಿದೆ.

ಸಾಹಸ ಸಿಂಹ ವಿಷ್ಣುವರ್ಧನ್ ಅವರ ಅಪ್ಪಟ ಅಭಿಮಾನಿ ವೀರಕಪುತ್ರ ಶ್ರೀನಿವಾಸ್ ಸ್ಟಾರ್ ನಟರಿಗೆ ಸೋಷಿಯಲ್‌ ಮೀಡಿಯಾದಲ್ಲಿ ಬಹಿರಂಗವಾಗಿ ಪತ್ರವೊಂದನ್ನು ಬರೆದು ಕೊವೀಡ್ ನಿಂದ ಸಂಕಷ್ಟಕ್ಕೆ ಒಳಗಾಗುತ್ತಿರುವವರ ಕಷ್ಟಕ್ಕೆ ಸ್ಪಂದಿಸುವಂತೆ ಮನವಿ ಮಾಡಿದ್ದಾರೆ. ಕೋಟಿ ಕೋಟಿ ಹಣ, ಕೋಟಿ ಕೋಟಿ ಅಭಿಮಾನಿಗಳ ನ್ನು ಸಂಪಾದಿಸಿದ ಸ್ಟಾರ್ ಗಳನ್ನು ಒಮ್ಮೆ ಚಿಂತನೆಗೀಡು ಮಾಡುವಂತೆ ಅರ್ಥಪೂರ್ಣವಾಗಿ ಶ್ರೀನಿವಾಸ್ ಬರೆದಿರುವ ಪತ್ರ ಸಖತ್ ವೈರಲ್ ಆಗಿದ್ದು ಜನಸಾಮಾನ್ಯರು ಸ್ಟಾರ್ ಗಳು ಅಭಿಮಾನಿಗಳನ್ನು ರಕ್ಷಿಸೋಕೆ ಇನ್ನಾದರೂ ಮುಂದೇ ಬರ್ತಾರಾ ಅಂತ ಪ್ರಶ್ನೆ ಮಾಡ್ತಿದ್ದಾರೆ.

ನೀವು ಅಕ್ಕಿ-ಬೇಳೆ ಕೊಡೋದು ಬೇಡ. ನಿಮಗೆ ಸೇರಿದ ಫಾರ್ಮ್ ಹೌಸ್, ಕಲ್ಯಾಣಮಂಟಪ, ಆಫೀಸ್ ಗಳಲ್ಲಿ ಕೊವೀಡ್-19 ಪೀಡಿತರಿಗಾಗಿ ಬೆಡ್ ವ್ಯವಸ್ಥೆ ಮಾಡಿಸಿ. ಸರ್ಕಾರದ ಜೊತೆ ಕೈಜೋಡಿಸಿ ಆಕ್ಸಿಜನ್, ಮೆಡಿಸಿನ್ ಕೊಡಿಸಿ ನಿಮ್ಮ ಅಭಿಮಾನಿಗಳನ್ನು ಸಾವಿನಿಂದ ರಕ್ಷಿಸಿ ಎಂದು ಬರೆದಿದ್ದು, ವೀರಕ್ ಪುತ್ರ ಶ್ರೀನಿವಾಸ ಪತ್ರದ ಯಥಾನಕಲು ಇಲ್ಲಿದೆ.

ಡಿಯರ್ ಸ್ಟಾರ್ ನಟರೇ.. ಕೋಟಿ ಕೋಟಿ ಅಭಿಮಾನಿಗಳನ್ನು ಪಡೆದ ಸಾಧಕರು ನೀವು. ತಾಯಿ ಪ್ರೀತಿ ನಂತರ ಅಭಿಮಾನಿಗಳ ಪ್ರೀತಿಯೇ ಅತ್ಯಂತ ಶ್ರೇಷ್ಠವಾದದ್ದು ಎಂಬುದು ನನ್ನ ನಂಬಿಕೆ. ನೀವು ಎಂದೂ ಅವರನ್ನು ನೋಡಲ್ಲ, ನೋಡಿದ್ರೂ ಮಾತನಾಡಿಸಲ್ಲ. ಮಾತನಾಡಿಸಿದ್ರೂ ನಿಮಗೆ ಆ ವ್ಯಕ್ತಿ ಅದರಾಚೆ ನೆನಪಿರಲ್ಲ. ಆದರೂ ಆ ಅಭಿಮಾನಿ ನಿಮ್ಮನ್ನು ಅವನ ಜೀವನದ ಆರಾಧ್ಯ ದೈವವನ್ನಾಗಿಸಿ ಕೊಳ್ತಾನೆ. ಜೀವನವಿಡೀ ನಿಮ್ಮನ್ನೇ ಧ್ಯಾನಿಸುತ್ತಾನೆ! ನಿಮ್ಮ ಬಗ್ಗೆ ಎಳ್ಳಷ್ಟು ಅಪಪ್ರಚಾರವಾದ್ರೂ ಹಿಂದೆ ಮುಂದೆ ಯೋಚಿಸ್ದೆ ನಿಮ್ಮ ಪರವಾಗಿ ನಿಂತುಬಿಡ್ತಾನೆ. ನಿಮಗೆ ಕಿಂಚಿತ್ತು ತೊಂದ್ರೆಯಾದ್ರೂ ನೊಂದು ಹೋಗ್ತಾನೆ. ಅಂತಹ ಅಭಿಮಾನಿ ಇವತ್ತು ಕಷ್ಟದಲ್ಲಿದ್ದಾನೆ..

ಸೋಂಕಿಗೆ ಒಳಗಾಗುತ್ತಿರುವ ಲಕ್ಷಾಂತರ ಜನರಲ್ಲಿ ನಿಮ್ಮ ಅಭಿಮಾನಿಗಳೂ ಇದ್ದಾರೆ. ಆದ್ರೆ ಅವರು ತಮ್ಮ ಕಷ್ಟವನ್ನು ನಿಮ್ಮ ತನಕ ತಲುಪಿಸಲಾರರು.ಏಕೆಂದರೆ ನೀವು ಅವರಿಗೆ ಗೊತ್ತೇ ವಿನಃ ಅವರು ನಿಮಗೆ ಗೊತ್ತಿಲ್ಲ. ನಿಮ್ಮ ಹುಟ್ದಬ್ಬಕ್ಕೆ ಗಂಟೆಗಟ್ಟಲೆ ಕ್ಯೂನಲ್ಲಿ ನಿಂತು ನಿಮ್ಗೆ ವಿಶ್ ಮಾಡಿ ಗೊತ್ತಿದೆಯೇ ಹೊರತು ನಿಮ್ಮ ಸಂಪರ್ಕದಲ್ಲಿರೋದು ಗೊತ್ತಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಪರವಾಗಿ ವರ್ಷಗಟ್ಟಲೆ ಪ್ರಚಾರ ಮಾಡೋದು, ಜಗಳ ಮಾಡೋದು ಗೊತ್ತೇ ವಿನಃ ನಿಮ್ಮಿಂದ ಏನನ್ನೂ ನಿರೀಕ್ಷಿಸಿ ಗೊತ್ತಿಲ್ಲ. ನಿಮ್ಮ ಸಿನಿಮಾ ಬಿಡುಗಡೆಯಾದಾಗ ಜಾತ್ರೆಯಂತೆ ಖರ್ಚುಮಾಡಿ ಸಂಭ್ರಮಿಸುವುದು ಗೊತ್ತಿದೆಯೇ ವಿನಃ ಅಷ್ಟೇ ಸಲೀಸಾಗಿ ಕೊರೋನಗೆ ಚಿಕಿತ್ಸೆ ಪಡೆಯುವುದು ಹೇಗೆಂದು ಗೊತ್ತಿಲ್ಲ .

ಅಂತಹವರಿಗಾಗಿ ಏನಾದ್ರೂ ಮಾಡ್ಲಿಕ್ಕಾಗುತ್ತಾ ಡಿಯರ್ ಸ್ಟಾರ್ಸ್?
ಕಷ್ಟದಲ್ಲಿರುವ ಅಭಿಮಾನಿಗಳನ್ನು ಹುಡುಕುವುದು ಕಷ್ಟ ಅನ್ನೋದು ಗೊತ್ತು. ನೀವೇನಾದ್ರೂ ಸಹಾಯ ಮಾಡ್ತೀನಿ ಅಂತ ಮುಂದೆ ಬಂದ್ರೆ ಆಕಾಂಕ್ಷಿಗಳು ಸಾವಿರಾರು ಸಂಖ್ಯೆಯಲ್ಲಿ ಬಂದ್ಬಿಡ್ತಾರೆ ಅನ್ನೋದು ಗೊತ್ತು. ಆದ್ರೂ ಏನಾದ್ರೂ ಮಾಡ್ಬಹುದಾ ಈ ಸಂದರ್ಭದಲ್ಲಿ ನೋಡಿ ಪ್ಲೀಸ್.. ಏಕೆಂದರೆ ಈ ಸಮಾಜ ನೀವು ಚೆನ್ನಾಗಿರಲು ಏನೆಲ್ಲಾ ಕೊಟ್ಟಿದೆ.. ಅಂತಹ ಸಮಾಜ ಇಂದು ಕಷ್ಟದಲ್ಲಿರುವಾಗ Stay Home, Stay Safe ಅಂತ ಉಚಿತ ಸಲಹೆಯೊಂದನ್ನು ಕೊಟ್ಟು ನಮ್ಮಂತಹ ಸಾಮಾನ್ಯರಂತೆ ನೀವೂ ಗೂಡು ಸೇರಿ ಕೂತುಬಿಡೋದು ಯಾವ ನ್ಯಾಯ? ನಿಮಗೆ ಈ ಅಭಿಮಾನಿಗಳು ಮತ್ತು ಸಮಾಜ ನೀಡಿರುವ ಸ್ಥಾನಮಾನ ಸಾಮಾನ್ಯದಲ್ಲವಲ್ಲ.. ಓಹ್ ಹೌದಾ.. ಹಾಗಾದ್ರೆ ಒಂದಷ್ಟು ಕುಟುಂಬಗಳಿಗೆ ಅಕ್ಕಿ ಕೊಡ್ತೀವಿ! ಒಂದಷ್ಟು ಹೊಟ್ಟೆಗಳಿಗೆ ಅನ್ನ ನೀಡ್ತೀವಿ! ಮಾಸ್ಕ್ ವಿತರಿಸ್ತೀವಿ..

ಒಂದಷ್ಟು ಜನರನ್ನು ಊರುಗಳಿಗೆ ತಲುಪಿಸೋಕೆ ಗಾಡಿ ಕಳಿಸ್ತೀವಿ.. ಅನ್ನೋ ಸಪ್ಪೆ ನಿರ್ಧಾರಗಳಿಗೆ ಬರಬೇಡಿ ಪ್ಲೀಸ್. ಇಲ್ಲಿ ಜನರ ಜೀವಗಳು ಹೋಗ್ತಿವೆ. ನಿಜಕ್ಕೂ ಏನಾದ್ರೂ ಮಾಡುವುದಿದ್ದರೆ ನಿಮ್ಮ ಸಂಪರ್ಕ, ಪ್ರಭಾವ ಬಳಸಿ ಜನರ ಜೀವಗಳನ್ನು ಕಾಪಾಡಿ. ನಿಮ್ಮ ತೋಟದ ಮನೆಯಲ್ಲೋ, ನಿಮ್ಮ ಹೋಟೆಲ್ ಗಳಲ್ಲೋ, ಅಥವಾ ನಿಮ್ಗೆ ಗೊತ್ತಿರುವ ಕಲ್ಯಾಣಮಂಟಪಗಳಲ್ಲೋ ಒಂದು ನೂರಿನ್ನೂರು ಬೆಡ್ ಗಳ ಕೋವಿಡ್ ಕೇರ್ ಸೆಂಟರ್ ಗಳನ್ನು ತೆರೆದಿಡಿ. ಎಷ್ಟೋ ಜನ ಸಣ್ಣ ಸಣ್ಣ ರೂಮುಗಳಲ್ಲಿ, ಸಿಂಗಲ್ ಬೆಡ್ ರೂಮ್ ಇರುವ ಮನೆಗಳಲ್ಲಿ ವಾಸಿಸ್ತಿದ್ದಾರೆ. ದುಡಿಯಲು ಹೊರಗಡೆ ಹೋಗುವ ಒಬ್ಬರಿಗೆ ಕೊರೋನ ಬಂದ್ರೆ ಮನೆಯವರೆಲ್ಲರೂ ಕೊರೋನ ಸೋಂಕಿಗೆ ಒಳಗಾಗಬೇಕಾದ ಪರಿಸ್ಥಿತಿ ಇದೆ. ಅಂತಹವರಿಗೆ ನಿಮ್ಮ ಕೋವಿಡ್ ಕೇರ್ ಸೆಂಟರ್ ಆದ್ಯತೆ ನೀಡಲಿ. ಜೊತೆಗೆ ಸರ್ಕಾರದ ಜೊತೆ ನಿರಂತರ ಸಂಪರ್ಕ ಸಾಧಿಸಿ ನಿಜಕ್ಕೂ ಅಗತ್ಯವಿರುವಂತಹವರಿಗೆ ಹಾಸಿಗೆ, ಆಕ್ಸಿಜನ್ ಗಳನ್ನು ದೊರಕಿಸಿಕೊಡಿ! ಕೊರೋನ ಬಂದಿದ್ದಕ್ಕೆ ಜನ ಸಾಯ್ತಿಲ್ಲ, ಸರ್ಕಾರ ಚಿಕಿತ್ಸೆನೀಡಲು ವಿಫಲವಾಗಿರುವ ಕಾರಣಕ್ಕೆ ಜನ ಸಾಯ್ತಿರೋದು. ಅಂತಹ ಅಸಹಾಯಕರಿಗೆ ತಮ್ಮ ಸಹಾಯಹಸ್ತ ಸಿಗಬಾರದೇಕೆ? ನಿಮ್ಮ ಮಾತನ್ನು ಅಷ್ಟು ಸಲೀಸಾಗಿ ಅಲ್ಲಗೆಳೆಯುವಂತಹ ಯಾವ ಮಂತ್ರಿಗಳೂ, ಆಸ್ಪತ್ರೆಗಳೂ ನಮ್ಮ ಕರ್ನಾಟಕದಲ್ಲಿಲ್ಲ. ಈ ನಿಟ್ಟಿನಲ್ಲಿ ಯೋಚಿಸಬಾರದೇಕೆ?

ಕೊನೇ ಮಾತು..
ಭಾರತದಲ್ಲಿ ಸುಮಾರು ಸ್ಟಾರ್ ನಟರಿದ್ದಾರೆ. ಆದ್ರೆ ಕೋವಿಡ್ ಬಂದ್ಮೇಲೆ ಜನ ರಿಯಲ್ ಸ್ಟಾರ್ ಎಂದು ಗುರುತಿಸಿದ್ದು ಮತ್ತು ಗೌರವಿಸಿದ್ದು ಸೋನುಸೂದ್ ಎಂಬೊಬ್ಬ ಪೋಷಕನಟನನ್ನು ಮಾತ್ರ! ನಿಮ್ಮ ಅಭಿಮಾನಿಗಳಿಗೆ ನೀವು ಮಾದರಿಯಾಗಿರುವ ಹಾಗೆ, ನಿಮಗೆ ಸೋನುಸೂದ್ ಮಾದರಿಯಾಗಲೆಂದು ಆಶಿಸುವೆ..

-ವೀರಕಪುತ್ರ ಶ್ರೀನಿವಾಸ.
ಇದಕ್ಕೆ ಸ್ಟಾರ್ ಗಳು ಸ್ಪಂದಿಸಿ ಅಭಿಮಾನಿಗಳ ಕಣ್ಣೀರು ಒರೆಸುತ್ತಾರಾ ಕಾದು ನೋಡಬೇಕಿದೆ.

Comments are closed.