“ದುಶ್ಚಟಗಳಿಗೆ ದಾಸನಾಗಿದ್ದೆ, ಆಕೆ ನನ್ನನ್ನು ಬದಲಿಸಿಬಿಟ್ಟಳು”: ರಜನಿಕಾಂತ್

ಬೆಂಗಳೂರಿನಲ್ಲಿ ಬಿಟಿಎಸ್ ಬಸ್ ಕಂಡೆಕ್ಟರ್ ಆಗಿದ್ದ ಶಿವಾಜಿರಾವ್ ಗಾಯಕ್‌ವಾಡ್ ಇಂದು ಸೂಪರ್ ಸ್ಟಾರ್ ರಜನಿಕಾಂತ್ (Superstar Rajinikanth) ಆಗಿ ನಮ್ಮ ಕಣ್ಮುಂದೆ ನಿಂತಿದ್ದಾರೆ. ಪರಿಶ್ರಮದಿಂದ ಏನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ರಜನಿಕಾಂತ್ ಉತ್ತಮ ಉದಾಹರಣೆ. ಎಷ್ಟೇ ಎತ್ತರಕ್ಕೆ ಏರಿದರೂ ಅವರ ಸರಳ ಸಜ್ಜನಿಕೆಗೆ ಮಾರು ಹೋಗದವರಿಲ್ಲ. ನೋಡಲು ಅಷ್ಟೇನು ಸುಂದರವಾಗಿ ಇರದ ರಜನಿಕಾಂತ್ ಹೀರೊ ಆಗುತ್ತಾರೆ,ಸೂಪರ್ ಸ್ಟಾರ್ ಆಗುತ್ತಾರೆ ಎಂದು ಯಾರು ಅಂದುಕೊಂಡಿರಲಿಲ್ಲ. ಖುದ್ದು ತಲೈವಾಗೂ ಈ ಬಗ್ಗೆ ಸುಳಿವು ಇರಲಿಲ್ಲ. ಸಣ್ಣ ಪುಟ್ಟ ಪಾತ್ರಗಳ ಮೂಲಕ ಸಿನಿರಂಗದಲ್ಲಿ ಗುರುತಿಸಿಕೊಂಡ ರಜನಿಕಾಂತ್ ಮುಂದೆ 150ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದರು. ಕಾಲೇಜು ಮ್ಯಾಗಜೀನ್‌ಗಾಗಿ ಸಂದರ್ಶನ ಮಾಡಲು ಹೋಗಿದ್ದ ಹುಡುಗಿಯಲ್ಲೇ ರಜನಿಕಾಂತ್ ಕೈ ಹಿಡಿದರು. ಮೊದಲ ನೋಟದಲ್ಲೇ ಆಕೆಯನ್ನು ನೋಡಿ ಮನಸೋತಿದ್ದ ತಲೈವಾ ಸಂದರ್ಶನ ಮುಗಿಯುವ ಹೊತ್ತಿಗೆ ಮದುವೆ ಪ್ರಪೋಸಲ್ ಇಟ್ಟಿದ್ದರು.

ರಜನಿಕಾಂತ್‌ ಹಾಗೂ ಲತಾ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು. ಅವರು ಕೂಡ ಸಿನಿರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ವಯಸ್ಸು 70 ದಾಟಿದರೂ ರಜನಿಕಾಂತ್ ಇವತ್ತಿಗೂ ಕಾಲಿವುಡ್‌ನ ನಂಬರ್ ಒನ್ ಹೀರೊ ಆಗಿ ಮೆರೆಯುತ್ತಿದ್ದಾರೆ. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಸೂಪರ್ ಸ್ಟಾತ್ ಇಂಟ್ರೆಸ್ಟಿಂಗ್ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್‌ಗೆ ತಮ್ಮ ಪತ್ನಿ ಅಂದ್ರೆ ಎಷ್ಟು ಇಷ್ಟ ಎನ್ನುವುದು ಗೊತ್ತೇಯಿದೆ. ಸಾಕಷ್ಟು ಸಂದರ್ಭಗಳಲ್ಲಿ ಅವರ ಬಗ್ಗೆ ಮಾತನಾಡಿದ್ದಾರೆ. ಆಕೆ ತಮ್ಮ ಬಾಳಿಗೆ ಬಂದ ಮೇಲೆ ಸಾಕಷ್ಟು ಬದಲಾವಣೆ ಆಯಿತು ಎಂದು ಕೂಡ ಹೇಳಿದ್ದಾರೆ. ನಿನ್ನೆ(ಜನವರಿ 26) ಕಾರ್ಯಕ್ರಮವೊಂದರಲ್ಲಿ ರಜನಿಕಾಂತ್ ಮತ್ತೊಮ್ಮೆ ಮಡದಿ ಬಗ್ಗೆ ಮಾತನಾಡಿದ್ದಾರೆ. ‘ಲತಾ ನನ್ನ ಜೀವನದಲ್ಲಿ ಪ್ರವೇಶ ಆದಮೇಲೆ ಬಹಳ ಬದಲಾವಣೆ ಆಯಿತು, ಮುಖ್ಯವಾಗಿ ನಾನು ಶಿಸ್ತುಬದ್ಧ ಶಿಕ್ಷಣ ಕಲಿತೆ’ ಎಂದಿದ್ದಾರೆ.

‘ಬಸ್ ಕಂಡೆಕ್ಟರ್ ಆಗಿದ್ದಾಗ ನಾನು ಪ್ರತಿದಿನ ಮದ್ಯ ಸೇವಿಸುತ್ತಿದ್ದೆ. ಅದೆಷ್ಟು ಸಿಗರೇಟ್ ಸೇದುತ್ತಿದ್ದೆ ಎನ್ನುವುದರ ಲೆಕ್ಕವೇ ಇರುತ್ತಿರಲಿಲ್ಲ. ಬೆಳಗ್ಗೆ ಮಾಂಸಹಾರದೊಂದಿಗೆ ದಿನಚರಿ ಶುರುವಾಗುತ್ತಿತ್ತು. ದಿನಕ್ಕೆ 2 ಬಾರಿ ಮಾಂಸಾಹಾರ ತಪ್ಪುತ್ತಿರಲಿಲ್ಲ. ಸಸ್ಯಾಹಾರಿಗಳನ್ನು ಕಂಡರೆ ಬೇಸರ ಎನಿಸುತ್ತಿತ್ತು. ಆದರೆ ಇದು ಮೂರು ಕೂಡ ಹೆಚ್ಚಾದರೆ ಆರೋಗ್ಯಕ್ಕೆ ಒಳ್ಳೆಯದಲ್ಲ. ನನ್ನ ಪ್ರಕಾರ ಮಧ್ಯ, ಸಿಗರೇಟ್, ಮಾಂಸ ಈ ಮೂರನ್ನು ಬಹಳ ಸಮಯದವರೆಗೂ ತೆಗೆದುಕೊಳ್ಳುತ್ತಿದ್ದರೆ 60 ವರ್ಷ ವಯಸ್ಸಿನ ನಂತರ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ.ನನ್ನ ಪತ್ನಿ ಲತಾ ತನ್ನ ಪ್ರೀತಿಯಿಂದ ಆ ದುಶ್ಚಟಗಳಿಗೆ ನನ್ನನ್ನು ದೂರ ಮಾಡಿದಳು. ಆಕೆಯಿಂದಲೇ ನಾನು ಈಗ ಶಿಸ್ತುಬದ್ಧ ಶಿಕ್ಷಣದಿಂದ ಆರೋಗ್ಯವಾಗಿ ಜೀವನ ನಡೆಸುತ್ತಿದ್ದೇನೆ’ ಎಂದು ಸೂಪರ್ ಸ್ಟಾರ್ ವಿವರಿಸಿದ್ದಾರೆ. ಪತ್ನಿ ಕುರಿತು ರಜನಿಕಾಂತ್ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ : ಥಿಯೇಟರ್‌ನಲ್ಲಷ್ಟೇ ಅಲ್ಲ.. ಕಿರುತೆರೆಯಲ್ಲೂ ಇತಿಹಾಸ ಸೃಷ್ಟಿಸಿದ ‘ಕಾಂತಾರ’ : ಎಲ್ಲಾ ಪಂಜುರ್ಲಿ ಮಹಿಮೆ!

ಇದನ್ನೂ ಓದಿ : Let’s Get Married movie : ಧೋನಿ ಎಂಟರ್ಟೈನ್ಮೆಂಟ್ಸ್ ಮೊದಲ ತಮಿಳು ಸಿನಿಮಾಕ್ಕೆ ‘ಲೆಟ್ಸ್ ಗೆಟ್ ಮ್ಯಾರೀಡ್’ ಟೈಟಲ್ ಫಿಕ್ಸ್

ಇದನ್ನೂ ಓದಿ : ಅಪರೂಪಕ್ಕೆ ರಾಕಿಂಗ್ ಸ್ಟಾರ್ ಯಶ್ ದರ್ಶನ : ಅಭಿಮಾನಿಗಳು ಕೇಳಿದ್ದು ಒಂದೇ ಪ್ರಶ್ನೆ!

ಸದ್ಯ ರಜನಿಕಾಂತ್ 2 ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ‘ಜೈಲರ್’ ಸಿನಿಮಾದಲ್ಲಿ ಹೀರೊ ಆಗಿ ಬಣ್ಣ ಹಚ್ಚಿದ್ದಾರೆ. ಈ ಸಿನಿಮಾದಲ್ಲಿ ಕನ್ನಡ ನಟ ಶಿವರಾಜ್‌ಕುಮಾರ್ ಕೂಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಮಗಳು ಐಶ್ವರ್ಯ ನಿರ್ದೇಶನದ ‘ಲಾಲ್ ಸಲಾಂ’ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನಲಾಗುತ್ತಿದೆ. ವಿಷ್ಣು ವಿಶಾಲ್ ಈ ಸಿನಿಮಾದಲ್ಲಿ ಹೀರೊ ಆಗಿ ಮಿಂಚುತ್ತಿದ್ದಾರೆ. ಲೈಕಾ ಸಂಸ್ಥೆ ಈ ಸಿನಿಮಾಕ್ಕೆ ಬಂಡವಾಳ ಹೂಡಿದೆ.

Superstar Rajinikanth said, “I was a slave to vices, she changed me.”

Comments are closed.