Vijay Devarakonda: ‘ಲೈಗರ್’ ಚಿತ್ರತಂಡಕ್ಕೆ ಸೋಲಿನ ನಡುವೆಯೇ ಇಡಿ ಶಾಕ್; ವಿಚಾರಣೆಗೆ ಹಾಜರಾದ ವಿಜಯ ದೇವರಕೊಂಡ

ಹೈದರಾಬಾದ್: ಟಾಲಿವುಡ್ ನ ಹೆಸರಾಂತ ನಟ ವಿಜಯ ದೇವರಕೊಂಡ (Vijay Devarakonda) ಜಾರಿ ನಿರ್ದೇಶನಾಲಯ ಕಚೇರಿಗೆ ತೆರಳಿ ವಿಚಾರಣೆಗೆ ಹಾಜರಾಗಿದ್ದಾರೆ. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯ ನಿಯಮ ಉಲ್ಲಂಘನೆ (FEMA) ಆರೋಪದಡಿ ನೀಡಲಾಗಿದ್ದ ನೋಟಿಸ್ ಹಿನ್ನೆಲೆ ಹೈದರಾಬಾದ್ ನಲ್ಲಿರುವ ಇಡಿ ಕಚೇರಿಗೆ ತೆರಳಿ ಅವರು ವಿಚಾರಣೆಯನ್ನು ಎದುರಿಸಿದರು.

ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ವಿಜಯ್ ದೇವರಕೊಂಡ ಅಭಿನಯಿಸಿದ್ದ ಲೈಗರ್ ಸಿನಿಮಾ ಬಾಲಿವುಡ್ ನಲ್ಲಿ ಅಷ್ಟೇನೂ ಸಕ್ಸಸ್ ಕಾಣಲಿಲ್ಲ. ದೊಡ್ಡಮಟ್ಟದಲ್ಲಿ ಪ್ರಚಾರ ಮಾಡಿಕೊಂಡಿದ್ದ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಹೀನಾಯ ಸೋಲು ಕಂಡಿತ್ತು. ಈ ಬೆನ್ನಲ್ಲೇ ಲೈಗರ್ ಸಿನಿಮಾಕ್ಕೆ ಹೂಡಿದ್ದ ಬಂಡವಾಳದ ಬಗ್ಗೆ ಅನುಮಾನ ಶುರುವಾಗಿತ್ತು. ಹೀಗಾಗಿ ನಿರ್ದೇಶಕ ಪುರಿ ಜಗನ್ನಾಥ್ ಹಾಗೂ ನಿರ್ಮಾಪಕ ಚಾರ್ಮಿ ಕೌರ್ ಹಾಗೂ ನಟ ವಿಜಯ ದೇವರಕೊಂಡ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ನೋಟಿಸ್ ನೀಡಿತ್ತು. ಅಂತೆಯೇ ನಟ ವಿಜಯ್ ಇಂದು ಹೈದರಾಬಾದ್ ನಲ್ಲಿರುವ ಇಡಿ ಕಚೇರಿಗೆ ತೆರಳಿ ವಿಚಾರಣೆಗೆ ಹಾಜರಾದರು.

ಇದನ್ನೂ ಓದಿ: Rishab Shetty Photoshoot: ‘ಹ್ಯಾಷ್ ಟ್ಯಾಗ್’ ಮ್ಯಾಗಜಿನ್ ಮುಖಪುಟದಲ್ಲಿ ರಿಷಬ್ ಶೆಟ್ಟಿ; ಫೋಟೋಶೂಟ್ ನಲ್ಲಿ ಮಿಂಚಿದ್ದು ಹೀಗೆ..

ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯ ಆಪಾದಿತ ಉಲ್ಲಂಘನೆಯ ಕುರಿತು ಕೇಂದ್ರೀಯ ತನಿಖಾ ಸಂಸ್ಥೆ ವಿಚಾರಣೆ ನಡೆಸುತ್ತಿದೆ. ಲೈಗರ್ ಸಿನಿಮಾ ನಿರ್ಮಾಣಕ್ಕೆ ಹೂಡಲಾಗಿದ್ದ ಬಂಡವಾಳದ ಮೂಲ ಹಾಗೂ ವಿಜಯ ದೇವರಕೊಂಡ ಅವರ ಸಂಭಾವನೆ, ಅಮೆರಿಕನ್ ಬಾಕ್ಸರ್ ಮೈಕ್ ಟೈಸನ್ ಅವರಿಗೆ ನೀಡಲಾಗಿದ್ದ ಸಂಭಾವನೆ ಸೇರಿದಂತೆ ಚಿತ್ರದಲ್ಲಿನ ಇತರ ನಟರಿಗೆ ಪಾವತಿಸಲಾದ ಸಂಭಾವನೆ ಬಗ್ಗೆಯೂ ಇಡಿ ಅಧಿಕಾರಿಗಳು ನಟನಿಗೆ ಪ್ರಶ್ನೆಗಳನ್ನು ಕೇಳಿದ್ದಾರೆ ಎನ್ನಲಾಗಿದೆ. ನ.17ರಂದು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪುರಿ ಜಗನ್ನಾಥ್ ಮತ್ತು ಚಾರ್ಮಿ ಕೌರ್ ವಿಚಾರಣೆ ಎದುರಿಸಿದ್ದರು.

ಲೈಗರ್ ಸಿನಿಮಾದ ಸೋಲಿನ ಬೆನ್ನಲ್ಲೇ ಸಿನಿಮಾ ನಿರ್ಮಾಣಕ್ಕೆ ವಿದೇಶದಿಂದ ಹಣ ಹರಿದುಬಂದಿರುವ ಶಂಕೆ ವ್ಯಕ್ತವಾಗಿತ್ತು. ಹಣ ವರ್ಗಾವಣೆ ನಿಯಮ ಉಲ್ಲಂಘನೆ ಆಗಿರುವ ಆರೋಪದ ಮೇರೆಗೆ ಪುರಿ ಜಗನ್ನಾಥ್, ಚಾರ್ಮಿ ಕೌರ್, ವಿಜಯ್ ದೇವರಕೊಂಡ ಸೇರಿದಂತೆ ಇನ್ನೂ ಕೆಲವರನ್ನು ಇಡಿ ವಿಚಾರಣೆಗೆ ಒಳಪಡಿಸಿದೆ.

ಇದನ್ನೂ ಓದಿ: ವಿಜಯ್‌ ಹಜಾರೆ ಟ್ರೋಫಿ : ಬ್ಯಾಟಿಂಗ್ ವೈಫಲ್ಯಕ್ಕೆ ಬೆಲೆ ತೆತ್ತ ಕರ್ನಾಟಕಕ್ಕೆ ಸೆಮಿಫೈನಲ್’ನಲ್ಲಿ ಸೋಲು

ಲೈಗರ್ ಸಿನಿಮಾಗೆ ದೊಡ್ಡ ಮೊತ್ತದಲ್ಲಿ ಹಣ ಹೂಡಿಕೆ ಮಾಡಲಾಗಿತ್ತು. ಅಂತಾರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್ ಮೈಕ್ ಟೈಸನ್ ಅವರು ಈ ಸಿನಿಮಾದಲ್ಲಿ ನಟಿಸಿದ್ದರು. ಟೈಸನ್ ಭಾಗದ ಚಿತ್ರೀಕರಣ ವಿದೇಶದಲ್ಲೇ ನಡೆದಿತ್ತು. ಇದೇ ಕಾರಣಕ್ಕೆ ಚಿತ್ರತಂಡ ಅಮೆರಿಕಾಗೆ ತೆರಳಿತ್ತು. ಆಗಸ್ಟ್ 25ರಂದು ಈ ಸಿನಿಮಾ ರಿಲೀಸ್ ಆಗಿತ್ತು. ಈ ಚಿತ್ರದ ಮೂಲಕ ವಿಜಯ ದೇವರಕೊಂಡ ಮೊದಲ ಬಾರಿಗೆ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟಿದ್ದರು. ಅನನ್ಯಾ ಪಾಂಡೆ ವಿಜಯ ದೇವರಕೊಂಡಗೆ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿದ್ದ ಈ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆ ಇಡಲಾಗಿತ್ತು. ಆದರೆ ಪ್ರೇಕ್ಷಕರನ್ನು ರಂಜಿಸುವಲ್ಲಿ ವಿಫಲವಾಗಿ ಈ ಸಿನಿಮಾ ಸೋತು ಹೋಗಿತ್ತು. ಇದೀಗ ಸೋಲಿನ ಬೇಸರದ ನಡುವೆಯೇ ಇಡಿ ಚಿತ್ರತಂಡಕ್ಕೆ ದೊಡ್ಡ ಶಾಕ್ ಕೊಟ್ಟಿದೆ.

Vijay Devarakonda: ED grills actor Vijay Devarakonda in FEMA case linked to tiger movie

Comments are closed.