6 arrested in Fazil murder : ಫಾಜಿಲ್‌ ಹತ್ಯೆ 6 ಮಂದಿ ಬಂಧನ ; ಹೇಗಿತ್ತು ಗೊತ್ತಾ ಪೊಲೀಸರ ಕಾರ್ಯಾಚರಣೆ

ಮಂಗಳೂರು : (6 arrested in Fazil murder) ಸುರತ್ಕಲ್‌ನಲ್ಲಿ ನಡೆದಿದ್ದ ಫಾಜಿಲ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಸಿಸಿಬಿ ಪೊಲೀಸರು ಇದೀಗ ಮತ್ತೆ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಮೂಲಕ ಬಂಧಿತ ಆರೋಪಿಗಳ ಸಂಖ್ಯೆ ಇದೀಗ 7 ಕ್ಕೆ ಏರಿಕೆಯಾಗಿದೆ ಎಂದು ಮಂಗಳೂರು ನಗರ ಪೊಲೀಸ್‌ ಆಯುಕ್ತ ಎನ್.‌ ಶಶಿಕುಮಾರ್‌ ಅವರು ತಿಳಿಸಿದ್ದಾರೆ.

ಮಂಗಳೂರು ನಗರ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಫಾಜಿಲ್‌ ಹತ್ಯೆಯ ಆರೋಪಿಗಳಾದ ಸುಹಾಸ್‌ ಶೆಟ್ಟಿ, ಮೋಹನ್‌ ಅಲಿಯಾಸ್‌ ಮೋಹನ್‌ ಸಿಂಗ್‌, ಗಿರಿಧರ್‌, ಅಭಿಷೇಕ್‌ ಶ್ರೀನಿವಾಸ ಹಾಗೂ ದೀಕ್ಷಿತ್‌ ಎಂಬವರನ್ನು ಬಂಧಿಸಲಾಗಿದೆ. ಆರೋಪಿಗಳು ಜುಲೈ 28 ರಂದು ಸುರತ್ಕಲ್‌ನ ಮಂಗಲಪೇಟೆ ಎಂಬಲ್ಲಿ ಫಾಜಿಲ್‌ ಎಂಬಾತ ನನ್ನು ಹತ್ಯೆ ಮಾಡಿದ್ದರು. ಘಟನೆಯ ಸಿಸಿ ಕ್ಯಾಮರಾ ಆಧರಿಸಿ ತನಿಖೆಗೆ ಆರಂಭಿಸಿದ್ದ ಮಂಗಳೂರು ನಗರ ಪೊಲೀಸರು ಕೃತ್ಯದಲ್ಲಿ ಭಾಗಿಯಾಗಿದ್ದ ಕಾರನ್ನು ವಶಕ್ಕೆ ಪಡೆದು ಕೊಂಡಿದ್ದರು. ನಂತರದ ಕಾರು ಮಾಲೀಕ ಅಜಿತ್‌ ಕಾಸ್ಟಾ ನೀಡಿದ ಮಾಹಿತಿಯ ಆಧಾರದ ಮೇಲೆ ಆರು ಆರೋಪಿಗಳನ್ನು ಬಂಧಿಸಲಾಗಿದೆ ಎಂದಿದ್ದಾರೆ.

ಫಾಜಿಲ್‌ ಹತ್ಯೆಗೆ ಶಾಲೆಯಲ್ಲಿ ಕುಳಿತು ಸ್ಕೆಚ್ ?

ಬಜೆಪೆಯಲ್ಲಿ ಬಾಡಿಗೆ ಮನೆಯೊಂದನ್ನು ಮಾಡಿಕೊಂಡು ವಾಸವಾಗಿದ್ದ ಸುಹಾಸ್‌ ಶೆಟ್ಟಿ ತನ್ನ ಸ್ನೇಹಿತನಾಗಿರುವ ಅಭಿಷೇಕ್‌ ಜೊತೆಯಲ್ಲಿ ಯಾರನ್ನಾದ್ರೂ ಕೊಲೆ ಮಾಡಬೇಕು ಅಂತಾ ಹೇಳಿಕೊಂಡಿದ್ದಾನೆ. ಆದರೆ ಯಾರನ್ನು ಕೊಲ್ಲಬೇಕು ಅನ್ನೋ ನಿರ್ಧಾರಕ್ಕೆ ಬರೋದಕ್ಕೆ ಇಬ್ಬರಿಂದಲೇ ಸಾಧ್ಯವಾಗಿರಲಿಲ್ಲ. ಇದೇ ಕಾರಣಕ್ಕೆ ಜುಲೈ 27ರಂದು ಸುಹಾಸ್‌ ಶೆಟ್ಟಿ ಗಿರಿಧರ್‌ ಹಾಗೂ ಮೋಹನ್‌ ಜೊತೆಯಲ್ಲಿ ಮತ್ತೊಮ್ಮೆ ಮಾತುಕತೆಯನ್ನು ನಡೆಸಿದ್ದ. ಆದರೆ ಇತರ ಆರೋಪಿಗಳಾದ ಅಭಿಷೇಕ್‌, ಶ್ರೀನಿವಾಸ್‌ ಹಾಗೂ ದೀಕ್ಷಿತ್‌ ಸಿಕ್ಕಿರಲಿಲ್ಲ. ಆದ್ರೆ ಮರು ದಿನ ರಾತ್ರಿಯ ಒಳಗಾಗಿ ಯಾರನ್ನಾದ್ರೂ ಕೊಲ್ಲಲೇ ಬೇಕು ಅನ್ನೋ ನಿರ್ಧಾರಕ್ಕೆ ಬಂದಿದ್ದರು. ಕೊಲೆಗೆ ಸ್ಕೆಚ್‌ ಹಾಕಿದ ನಂತರದಲ್ಲಿ ಬಾಡಿಗೆ ಕಾರನ್ನು ಪಡೆದುಕೊಂಡಿದ್ದ ಸುಹಾಸ್‌ ಶೆಟ್ಟಿ ಆ ದಿನ ರಾತ್ರಿ ಕಾವೂರಿನಲ್ಲಿನ ಸ್ನೇಹಿತನ ಮನೆಯಲ್ಲಿ ಉಳಿದುಕೊಂಡಿದ್ದ. ಮರುದಿನ ಮಾರಕಾಸ್ತ್ರಗಳನ್ನು ಕಾರಿನಲ್ಲಿ ತುಂಬಿಸಿಕೊಂಡು ಬಂಟ್ವಾಳ ಸಮೀಪದ ಕಾರಿಂಜೇಶ್ವರ ದೇವಸ್ಥಾನಕ್ಕೆ ಹೋಗಿ ಬಂದಿದ್ದ.

ಆರೋಪಿ ಸುಹಾಸ್‌ ಶೆಟ್ಟಿ ಸೇರಿದಂತೆ ಇತರ ಆರೋಪಿಗಳಿಗೆ ಮತ್ತೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಅಲ್ಲದೇ ನ್ಯಾಯಾಲಯದ ಪಕ್ಕದಲ್ಲಿಯೇ ಇದ್ದ ಶಾಲೆಯೊಂದರಲ್ಲಿ ಕುಳಿತ ಆರು ಮಂದಿ ಆರೋಪಿಗಳು ಫಾಜಿಲ್‌ ಹತ್ಯೆಗೆ ಸ್ಕೆಚ್‌ ಹಾಕಿದ್ದಾರೆ. ಕೋರ್ಟ್‌ ಕಾರ್ಯ ಮುಗಿದ ನಂತರದಲ್ಲಿ ಸುರತ್ಕಲ್‌ ಸಮೀಪದ ಬಾರ್‌ ವೊಂದರಲ್ಲಿ ಮಧ್ಯಾಹ್ನ ಊಟ ಮಾಡಿದ ಆರೋಪಿಗಳು ಈ ವೇಳೆಯಲ್ಲಿ ಫಾಜಿಲ್‌ ಕುರಿತು ಮಾಹಿತಿಯನ್ನು ಪಡೆದುಕೊಂಡಿದ್ದರು. ನಂತರದಲ್ಲಿ ಫಾಜಿಲ್‌ ಮಂಗಲಪೇಟೆಗೆ ಬರುವ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಅಲ್ಲದೇ ಸಂಜೆಯ ಹೊತ್ತಲ್ಲೇ ಫಾಜಿಲ್‌ ಮಂಗಲಪೇಟೆಯ ಅಂಗಡಿಯ ಮುಂಭಾಗದಲ್ಲಿ ಇರುವುದು ಖಚಿತ ಪಡಿಸಿಕೊಂಡ ಆರೋಪಿಗಳು ಜಂಕ್ಷನ್‌ನಲ್ಲಿ ಒಂದೆರಡು ಬಾರಿ ಕಾರಿನಲ್ಲಿ ಓಡಾಡಿದ್ದಾರೆ.

ಕಾರಿನಲ್ಲಿ ಬಂದಿದ್ದ ಆರು ಮಂದಿ ಆರೋಪಿಗಳ ಪೈಕಿ ಸುಹಾಸ್‌ ಶೆಟ್ಟಿ, ಮೋಹನ್‌ ಹಾಗೂ ಅಭಿಷೇಕ್‌ ಎಂಬವರು ಮಾರಕಾಸ್ತ್ರಗಳನ್ನು ಹಿಡಿದು ಕಾರಿನಿಂದ ಇಳಿದಿದ್ದಾರೆ. ಅಲ್ಲದೇ ಅಂಗಡಿಯ ಮುಂಭಾಗದಲ್ಲಿ ನಿಂತಿದ್ದ ಫಾಜಿಲ್‌ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ. ಹತ್ಯೆ ನಡೆಯುತ್ತಲೇ ಆರು ಮಂದಿ ಆರೋಪಿಗಳು ಸ್ಥಳದಿಂದ ಎಸ್ಕೇಪ್‌ ಆಗಿದ್ದಾರೆ. ಇನ್ನು ಆರೋಪಿಗಳು ಐದರಿಂದ ಆರು ಜನರನ್ನು ಹತ್ಯೆ ಮಾಡಲು ಸ್ಕೆಚ್‌ ಹಾಕಿದ್ದರು. ಅಂತಿಮವಾಗಿ ಫಾಜಿಲ್‌ ನನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸ್‌ ಆಯುಕ್ತರಾದ ಎನ್.‌ ಶಶಿಕುಮಾರ್‌ ಅವರು ಮಾಹಿತಿ ನೀಡಿದ್ದಾರೆ.

15 ಸಾವಿರ ರೂಪಾಯಿ ಕೊಟ್ಟು ಕಾರು ಬಾಡಿಗೆಗೆ ಪಡೆದ ಆರೋಪಿಗಳು

ಫಾಜಿಲ್‌ ಹತ್ಯೆಗೆ ಸಂಬಂಧಿಸಿದಂತೆ ಅಜಿತ್‌ ಕಾಸ್ಟಾ ಎಂಬವರಿಂದ ಒಂದು ಸಾವಿರ ರೂಪಾಯಿ ಹಣವನ್ನು ಮುಂಗಡವಾಗಿ ನೀಡಿ ಕಾರನ್ನು ಪಡೆದುಕೊಂಡಿದ್ದರು. ಒಂದೊಮ್ಮೆ ಕಾರ್ಯ ನಡೆದ್ರೆ ತಾವು ಹದಿನೈದು ಸಾವಿರ ರೂಪಾಯಿ ಹಣವನ್ನು ನೀಡುವುದಾಗಿ ಆಮಿಷವೊಡ್ಡಿದ್ದಾರೆ. ಹಣದ ಆಸೆಗೆ ಬಿದ್ದ ಕಾರಿನ ಮಾಲೀಕ ಕಾರನ್ನು ಆರೋಪಿಗಳಿಗೆ ಬಾಡಿಗೆಗೆ ನೀಡಿದ್ದ.

ಮುಂಜಾನೆ ಉದ್ಯಾವರದಲ್ಲಿ ಆರೋಪಿಗಳು ಅಂದರ್‌

ಸುರತ್ಕಲ್‌ನಲ್ಲಿ ಫಾಜಿಲ್‌ ಹತ್ಯೆ ಮಾಡಿದ ಬೆನ್ನಲ್ಲೇ ಆರೋಪಿಗಳು ಮೂಡಬಿದಿರೆ, ಕಾರ್ಕಳ ಮೂಲಕವಾಗಿ ಇನ್ನಾ ಗ್ರಾಮಕ್ಕೆ ತೆರಳಿದ್ದರು. ನಿರ್ಜನ ಪ್ರದೇಶವೊಂದರಲ್ಲಿ ಕಾರನ್ನು ನಿಲ್ಲಿಸಿದ್ದರು. ನಂತರದಲ್ಲಿ ಆರೋಪಿ ಶ್ರೀನಿವಾಸ್‌ ತನ್ನ ಸ್ನೇಹಿತನಿಂದ ಕಾರನ್ನು ತರಿಸಿಕೊಂಡು ಎಸ್ಕೇಪ್‌ ಆಗಿದ್ದರು. ಸಾಕಷ್ಟು ಕಡೆಗಳಲ್ಲಿ ವಾಸ್ತವ್ಯ ಹೂಡಲು ಆರೋಪಿಗಳು ಯತ್ನಿಸಿದ್ದರು, ಆದರೆ ಇದು ಸಾಧ್ಯವಾಗಿರಲಿಲ್ಲ. ಆರೋಪಿಗಳು ಉದ್ಯಾವರ ಬಳಿಯಲ್ಲಿ ಇರುವ ಕುರಿತು ಮಾಹಿತಿಯನ್ನು ಪಡೆದುಕೊಂಡಿದ್ದ ಮಂಗಳೂರು ಪೊಲೀಸರು ಮುಂಜಾನೆ ೨ ರಿಂದ ೩ ಗಂಟೆಯ ಸುಮಾರಿಗೆ ಆರೋಪಿಗಳನ್ನು ಬಂಧಿಸಿದ್ದಾರೆ. ಎಲ್ಲಾ ಆರೋಪಿಗಳನ್ನು ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದು, ನಂತರ ಮತ್ತೆ ಕಸ್ಟಡಿಗೆ ಪಡೆಯಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.

ರೋಚಕವಾಗಿತ್ತು ಪೊಲೀಸರ ಕಾರ್ಯಾಚರಣೆ

ಫಾಜಿಲ್‌ ಹತ್ಯೆ ನಡೆಯುತ್ತಲೇ ಖುದ್ದು ಫೀಲ್ಡಿಗೆ ಇಳಿದಿದ್ದ ಮಂಗಳೂರ ನಗರ ಪೊಲೀಸ್‌ ಆಯುಕ್ತರಾದ ಎನ್.‌ ಶಶಿಕುಮಾರ್‌ ನಗರದಾದ್ಯಂತ ನಿಷೇಧಾಜ್ಞೆಯನ್ನು ಜಾರಿಗೊಳಿಸಿದ್ದರು. ಆರೋಪಿಗಳು ಪತ್ತೆಯಾಗಬಾರದು ಅನ್ನೋ ಕಾರಣಕ್ಕೆ ಮಂಗಳೂರು ನಗರ ಪೊಲೀಸ್‌ ಆಯುಕ್ತರ ವ್ಯಾಪ್ತಿಯಲ್ಲಿ ಚೆಕ್‌ಪೋಸ್ಟ್‌ಗಳನ್ನು ತೆರೆದಿದ್ದರು. ನಗರದ ಒಳಗೆ ಹಾಗೂ ಹೊರಗೆ ಹೋಗುವ ವಾಹನಗಳನ್ನು ತಪಾಸಣೆಗೆ ಒಳಪಡಿಸಿದ್ದರು. ಸಿಸಿ ಕ್ಯಾಮರಾದಲ್ಲಿ ಹತ್ಯೆಗೆ ಇಯಾನ್‌ ಕಾರು ಬಳಕೆ ಮಾಡಿರುವುದು ಪತ್ತೆಯಾದ ಬೆನ್ನಲ್ಲೇ ಎಂಟಕ್ಕೂ ಅಧಿಕ ಇಯಾನ್‌ ಕಾರುಗಳನ್ನು ವಶಕ್ಕೆ ಪಡೆದು ಮಾಲೀಕರನ್ನು ವಿಚಾರಣೆಗೆ ಒಳಪಡಿಸಿದ್ದರು. ನಂತರದಲ್ಲಿ ದುಷ್ಕರ್ಮಿಗಳು ಬಳಸಿದ್ದ ಕಾರನ್ನು ಪತ್ತೆ ಮಾಡಿದ ಪೊಲೀಸರು, ಮಾಲೀಕನ ಮೂಲಕ ಆರೋಪಿಗಳ ಮಾಹಿತಿ ಪಡೆದಿದ್ದಾರೆ. ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಕೇರಳದಲ್ಲಿ ಆರೋಪಿಗಳಿಗಾಗಿ ಶೋಧ ಕಾರ್ಯವನ್ನು ನಡೆಸಿದ್ದಾರೆ. ಅಂತಿಮವಾಗಿ ಉಡುಪಿ ಜಿಲ್ಲೆಯಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.‌

ಇದನ್ನೂ ಓದಿ : Heavy rain hill collapse : ಭಾರೀ ಮಳೆ ಪರ್ವತಮುಖಿ ಬಳಿ ಗುಡ್ಡ ಕುಸಿತ : ಇಬ್ಬರು ಮಕ್ಕಳ ಸಾವು

ಇದನ್ನೂ ಓದಿ : Heavy rain in Kukke Subramanya : ಕುಕ್ಕೆಯ ಆದಿ ಸುಬ್ರಹ್ಮಣ್ಯ ಜಲಾವೃತ : ನಾಗರ ಪಂಚಮಿಯಂದು ಭಕ್ತರಿಗಿಲ್ಲ ಕುಕ್ಕೆ ದರ್ಶನ

6 arrested in Fazil murder How was the operation of the police

Comments are closed.