ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ವಿವರ ಫಲಕ ಕಡ್ಡಾಯ : ಉಡುಪಿ ಡಿಸಿ

ಉಡುಪಿ : ಖಾಸಗಿ ಆಸ್ಪತ್ರೆ ಮತ್ತು ಕ್ಲಿನಿಕ್‌ಗಳು ತಮ್ಮಲ್ಲಿ ಲಭ್ಯವಿರುವ ಚಿಕಿತ್ಸೆಯ ವಿವರ, ವೈದ್ಯರ ಮಾಹಿತಿ, ಚಿಕಿತ್ಸೆ ದರ, ಚಿಕಿತ್ಸಾ ವಿಧಾನ ಸೇರಿದಂತೆ ಎಲ್ಲಾ ವಿವರಗಳನ್ನು ಒಳಗೊಂಡ ಚಿಕಿತ್ಸಾ ಮಾಹಿತಿ ಫಲಕವನ್ನು ಕಡ್ಡಾಯವಾಗಿ ಅಳವಡಿಸಬೇಕೆಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್‌ ಸೂಚನೆಯನ್ನು ನೀಡಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಜಿಲ್ಲಾ ಖಾಸಗಿ ವೈದ್ಯಕೀಯ ಸಂಸ್ಥೆಗಳ ನೋಂದಣಿ ಪ್ರಾಧಿಕಾರದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ಕೆಪಿಎಂಇ ಕಾಯ್ದೆಯಡಿಯಲ್ಲಿ ನೋಂದಾಯಿತ ಎಲ್ಲಾ ಖಾಸಗಿ ಆಸ್ಪತ್ರೆ ಹಾಗೂ ಕ್ಲಿನಿಕ್‌ಗಳು ಚಿಕಿತ್ಸಾ ವಿವರದ ಫಲಕವನ್ನು ಆಸ್ಪತ್ರೆ ಹಾಗೂ ಕ್ಲಿನಿಕ್‌ನಲ್ಲಿ ಅವಳವಡಿಸಬೇಕು. ಈ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಬೇಕೆಂದು ಅವರು ಸೂಚಿಸಿದ್ದಾರೆ.

ಆಸ್ಪತ್ರೆ ಹಾಗೂ ಕ್ಲಿನಿಕ್‌ಗಳ ಪರವಾನಗಿ ನವೀಕರಣದ ಸಂದರ್ಭದಲ್ಲಿ ಕಾಯ್ದೆಯಲ್ಲಿರುವ ಎಲ್ಲಾ ಷರತ್ತುಗಳನ್ನು ಪೂರೈಸಿದ್ದಾರೆಯೇ ಅನ್ನುವ ಕುರಿತು ಪರಿಶೀಲನೆ ನಡೆಸಬೇಕು. ನಂತರವೇ ಪರವಾನಗಿಯನ್ನು ನವೀಕರಣ ಮಾಡಬೇಕು. ಇನ್ನು ಜಿಲ್ಲೆಯಲ್ಲಿ ಯಾವುದೇ ನಕಲಿ ವೈದ್ಯರು ಕ್ಲಿನಿಕ್‌ ತೆರೆದು ಚಿಕಿತ್ಸೆ ನೀಡದಂತೆ ಪರಿಶೀಲನೆಯನ್ನು ನಡೆಸಬೇಕು. ಒಂದೊಮ್ಮೆ ಪರವಾನಗಿಯನ್ನು ನವೀಕರಿಸದ ಆಸ್ಪತ್ರೆಗಳ ಪರವಾನಗಿಯನ್ನೇ ರದ್ದು ಮಾಡಬೇಕು. ಆಸ್ಪತ್ರೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

Comments are closed.