30ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು : ಯೆನಪೋಯಾ ವಿವಿಯ 9 ಶಿಕ್ಷಣ ಸಂಸ್ಥೆಗಳು ಬಂದ್ ..!

ಮಂಗಳೂರು : ಕರಾವಳಿ ಭಾಗದಲ್ಲಿ ಕೊರೊನಾ ಸೋಂಕಿನ ಆರ್ಭಟ ಹೆಚ್ಚಿದೆ. ಮಂಗಳೂರು ನಗರದ ಹೊರವಲಯದಲ್ಲಿರುವ ಯೆನಪೋಯಾ ವಿಶ್ವ ವಿದ್ಯಾಲಯಕ್ಕೆ ಸೇರಿದ ಕಾಲೇಜಿನ 30ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ವಿವಿಗೆ ಸೇರಿದ 9 ಶಿಕ್ಷಣ ಸಂಸ್ಥೆಗಳನ್ನು ಬಂದ್ ಮಾಡಲಾಗಿದೆ.

ದೇರಳಕಟ್ಟೆಯಲ್ಲಿರುವ ಯೆನಪೋಯಾ ಕಾಲೇಜಿನ ಸುಮಾರು 30ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ವಿದ್ಯಾರ್ಥಿಗಳನ್ನು ಐಸೋಲೇಷನ್ ಗೆ ಓಲಪಡಿಸಿದ್ದಾರೆ. ಅಲ್ಲದೇ ಕೊರೊನಾ ಪೀಡಿತ ವಿದ್ಯಾರ್ಥಿಗಳ ಸಂಪರ್ಕದಲ್ಲಿದ್ದ ವಿದ್ಯಾರ್ಥಿಗಳನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.
ಇದರ ಬೆನ್ನಲ್ಲೇ ಯೆನಪೋಯಾ ಡೀಮ್ಡ್ ವಿಶ್ವ ವಿದ್ಯಾನಿಲಯಕ್ಕೆ ಒಳಪಟ್ಟಿರುವ 9 ಶಿಕ್ಷಣ ಸಂಸ್ಥೆಗಳನ್ನು ಬಂದ್ ಮಾಡುವ ಕುರಿತು ಯೇನಪೋಯ ವಿವಿಯ ರಿಜಿಸ್ಟ್ರಾರ್ ಡಾ. ಗಂಗಾಧರ ಸೋಮಯಾಜಿ ಆಯಾ ಕಾಲೇಜುಗಳಿಗೆ ಸುತ್ತೋಲೆ ಕಳುಹಿಸಿದ್ದು ಮುಂದಿನ ಆದೇಶದ ವರೆಗೆ ಕಾಲೇಜು ಮುಚ್ಚುವಂತೆ ಸೂಚನೆ ನೀಡಿದ್ದಾರೆ.

ಯೇನಪೋಯ ಮೆಡಿಕಲ್ ಕಾಲೇಜು, ಯೇನಪೋಯ ಡೆಂಟಲ್, ನರ್ಸಿಂಗ್, ಫಿಸಿಯೋಥೆರಪಿ, ಫಾರ್ಮಸಿ ಮತ್ತು ರೀಸರ್ಚ್ ಸೆಂಟರ್, ಅಲೈಡ್ ಹೆಲ್ತ್ ಕೇರ್ ಪ್ರೊಫೆಶನಲ್, ಆಯುರ್ವೇದ ಕಾಲೇಜು, ಹೋಮಿಯೋಪತಿ ಮತ್ತು ನ್ಯಾಚುರೋಪತಿ ಕಾಲೇಜು ವಿಭಾಗವನ್ನು ಮುಚ್ಚುವಂತೆ ಆದೇಶದಲ್ಲಿ ಸೂಚಿಸಲಾಗಿದೆ. ಆದರೆ ಪಿಜಿ ಕಲಿಯುವ ವಿದ್ಯಾರ್ಥಿಗಳು ಮತ್ತು ನರ್ಸಿಂಗ್ ಸ್ಟಾಫ್ ಕಾಲೇಜಿಗೆ ಹಾಜರಾಗಲು ಸೂಚಿಸಲಾಗಿದೆ.

ಇನ್ನು ಮೆಡಿಕಲ್ ಕಾಲೇಜು ಆಸ್ಪತ್ರೆಯೂ ಎಂದಿನಂತೆ ಕಾರ್ಯ ನಿರ್ವಹಿಸಲಿದೆ. ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದ್ದು, ವಿದ್ಯಾರ್ಥಿಗಳಿಗೆ ಆನ್ ಲೈನ್ ಮೂಲಕ ಶಿಕ್ಷಣ ವನ್ನು ಮುಂದುವರಿಸುವಂತೆಯೂ ಆದೇಶದಲ್ಲಿ ಹೇಳಲಾಗಿದೆ. ಯೇನಪೋಯಾ ಶಿಕ್ಷಣ ಸಂಸ್ಥೆಯ ಕಾಲೇಜಿನಲ್ಲಿ ನಿನ್ನೆ ಸುಮಾರು 30 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಅಲ್ಲದೇ ಸೋಂಕು ಇನ್ನಷ್ಟು ವ್ಯಾಪಿಸಿರೋ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಪರಿಶೀಲನೆಯನ್ನು ನಡೆಸುತ್ತಿದ್ದಾರೆ.

Comments are closed.