ಭೂ ಹಗರಣದಲ್ಲಿ ಮಾಜಿಸಿಎಂಗೆ ಸಂಕಷ್ಟ…! ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ ಸಿಐಡಿ…!

ನೂತನ ರಾಜಧಾನಿ ನಿರ್ಮಾಣಕ್ಕಾಗಿ ವಶಪಡಿಸಿಕೊಂಡ ಭೂಮಿಯನ್ನು ದುರುಪಯೋಗ ಪಡಿಸಿಕೊಂಡಿರೋ ಆರೋಪ ಎದುರಿಸುತ್ತಿರುವ ಮಾಜಿಸಿಎಂ ಚಂದ್ರಬಾಬು ನಾಯ್ಡುಗೆ ಸಿಐಡಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ.

ಮಾರ್ಚ್ 23 ರಂದು ವಿಜಯವಾಡದಲ್ಲಿರೋ ಸಿಐಡಿ ಪ್ರಾದೇಶಿಕ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ತನಿಖಾಧಿಕಾರಿ ಲಕ್ಷ್ಮೀನಾರಾಯಣ ನೊಟೀಸ್ ನೀಡಿದ್ದಾರೆ. ಅಮರಾವತಿ ರಾಜಧಾನಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಭೂಮಿ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂಬ ಆರೋಪ ಮಾಜಿ ಮುಖ್ಯಮಂತ್ರಿ ಹಾಗೂ ಟಿಡಿಪಿ ಮುಖಂಡ ಚಂದ್ರಬಾಬು ನಾಯ್ಡು ಮೇಲೆ ಕೇಳಿಬಂದಿದೆ.

ವೈಎಸ್ಆರ್ ಕಾಂಗ್ರೆಸ್ ಪಕ್ಷದ ಶಾಸಕ ಅಲ್ಲ ರಾಮಕೃಷ್ಣ ರೆಡ್ಡಿ ಚಂದ್ರಬಾಬು ನಾಯ್ಡು ವಿರುದ್ಧ ಮಾರ್ಚ್ 12 ರಂದು ದೂರು ನೀಡಿದ್ದರು. ಟಿಡಿಪಿಯ ಮುಖಂಡ ಹಾಗೂ ಮಾಜಿ ಸಚಿವ ಪಿ.ನಾರಾಯಣ ಹೆಸರು ಕೂಡ  ಈ ದೂರಿನಲ್ಲಿ ಉಲ್ಲೇಖಿಸಲಾಗಿದೆ.

2015 ರಲ್ಲಿ ಅಮರಾವತಿಯನ್ನು ನೂತನ ರಾಜಧಾನಿಯಾಗಿಸುವ ಉದ್ದೇಶದಿಂದ ವಶಪಡಿಸಿಕೊಳ್ಳಲಾದ ಭೂಮಿಯನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬ ಆರೋಪವಿದೆ. ಆದರೆ ಇದೊಂದು ರಾಜಕೀಯ ಪ್ರೇರಿತ ಹೋರಾಟ ಎಂದು ತೆಲುಗು ದೇಶಂ ಪಾರ್ಟಿ ಆರೋಪಿಸಿದೆ.

ಈ ಹಿಂದೆಯೂ  ಪ್ರಕರಣ ದಾಖಲಾಗಿದ್ದು, ಹೈಕೋರ್ಟ್ ವಿಚಾರಣೆ ನಡೆಸಿ ಅರ್ಜಿ ವಜಾಗೊಳಿಸಿತ್ತು. ಇದೀಗ ಮತ್ತೆ ಸಿಐಡಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಆರಂಭಿಸಿದೆ. ಹೀಗಾಗಿ ಇದು ರಾಜಕೀಯ ಪ್ರೇರಿತ ಎಂಬ ಆರೋಪ ನಾಯ್ಡು ಬೆಂಬಲಿಗರಿಂದ ಕೇಳಿಬಂದಿದೆ.  

Comments are closed.