ಕೋಡಿ -ಕನ್ಯಾನದಲ್ಲಿ ಚುನಾವಣಾ ಬಹಿಷ್ಕಾರ : ಗ್ರಾಮಸ್ಥರ ಮನವೊಲಿಕೆಗೆ ಮುಂದಾದ ಜಿಲ್ಲಾಧಿಕಾರಿ

ಕೋಟ : ಸಿಆರ್ ಝಡ್ ಸಮಸ್ಯೆ, ಜಟ್ಟಿ ನಿರ್ಮಾಣದ ವಿಳಂಭ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಡಿ -ಕನ್ಯಾನದ ಗ್ರಾಮಸ್ಥರು ಚುನಾವಣೆಯನ್ನು ಬಹಿಷ್ಕರಿಸಿದ್ದಾರೆ. ಇದರ ಬೆನ್ನಲ್ಲೇ ಜಿಲ್ಲಾಧಿಕಾರಿಗಳು ಗ್ರಾಮಸ್ಥರ ಮನವೊಲಿಕೆಗೆ ಮುಂದಾಗಿದ್ದಾರೆ.

ಉಡುಪಿ ಜಿಲ್ಲೆಯ ಕೋಡಿ, ಕನ್ಯಾನ, ಕೋಡಿ ತಲೆ ಸುತ್ತಮುತ್ತಲಿನ ಜನರು ಹಲವು ವರ್ಷಗಳಿಂದಲೂ ಸಿಆರ್ ಝಡ್ ಸಮಸ್ಯೆಯಿಂದಾಗಿ ಹಕ್ಕು ಪತ್ರದಿಂದ ವಂಚಿತರಾಗಿದ್ದಾರೆ. ಅಲ್ಲದೇ ಕಳೆದ ಕೆಲ ದಶಕಗಳಿಂದಲೂ ಜಟ್ಟಿ ನಿರ್ಮಾಣದ ಬೇಡಿಕೆಯನ್ನು ಮುಂದಿಟ್ಟಿದ್ದರೂ ಕೂಡ ಜನಪ್ರತಿನಿಧಿಗಳು ಮೀನಾಮೇಷ ಎಣಿಸುತ್ತಲೇ ಇದ್ದಾರೆ. ಜೊತೆಗೆ ಉಪ್ಪು ನೀರಿನ ಸಮಸ್ಯೆಯಿಂದಾಗಿ ಬದುಕೇ ದುಸ್ಥರವಾಗಿದೆ. ಈ ನಿಟ್ಟಿನಲ್ಲಿ ಈ ಬಾರಿ ನಡೆಯಲಿರುವ ಗ್ರಾಮ ಪಂಚಾಯತ್ ಚುನಾವಣೆಯನ್ನೇ ಗ್ರಾಮಸ್ಥರು ಬಹಿಷ್ಕರಿಸಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಮತ ಕೇಳಲು ಬರುವ ಜನಪ್ರತಿನಿಧಿಗಳು ನಂತರದಲ್ಲಿ ಆಶ್ವಾಸನೆಯನ್ನೇ ಮರೆಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲಾ ಪಕ್ಷಗಳ ಸ್ಥಳೀಯ ಜನಪ್ರತಿನಿಧಿಗಳು ಸೇರಿ ಯಾರೊಬ್ಬರು ಈ ಬಾರಿಯ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸದೇ ಇರಲು ತೀರ್ಮಾನ ಕೈಗೊಂಡಿದ್ದಾರೆ. ಸ್ವತಂತ್ರರಾಗಿ ಸ್ಪರ್ಧಿಸಲು ಮುಂದಾದ್ರೂ ಕೂಡ ಗ್ರಾಮಸ್ಥರು ಅವರ ಮನವೊಲಿಸುವ ನಿರ್ಧಾರಕ್ಕೆ ಬಂದಿದ್ದರು.

ಕೋಡಿಯಲ್ಲಿ ಚುನಾವಣಾ ಬಹಿಷ್ಕಾರದ ಕೂಗು ಕೇಳಿ ಬಂದ ಬೆನ್ನಲ್ಲೇ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ಭೇಟಿ ನೀಡಿ ಕೋಡಿ -ಕನ್ಯಾನ ಶಾಲೆಯಲ್ಲಿ ಗ್ರಾಮಸ್ಥರಿಂದ ಸಮಸ್ಯೆಯನ್ನು ಆಲಿಸಿದರು. ಸಮಸ್ಯೆಗಳ ಪರಿಹಾರಕ್ಕೆ ಚುನಾವಣೆ ಬಹಿಷ್ಕಾರ ಪರಿಹಾರವಲ್ಲ. ಚುನಾವಣೆ ಬಹಿಷ್ಕರಿಸಿದರೆ ಮುಂದೆ ಗ್ರಾಮದ ಅಭಿವೃದ್ಧಿಗೆ ಸಾಕಷ್ಟು ಹಿನ್ನಡೆಯಾಗಲಿದೆ. ನಿಮ್ಮ ಸಮಸ್ಯೆ ಬಗೆಹರಿಸಲು ಈಗಾಗಲೇ ಪ್ರಕ್ರಿಯೆಗಳು ನಡೆಯುತ್ತಿದ್ದು ಜನಪ್ರತಿನಿಧಿಗಳು ಕೂಡ ಶ್ರಮಿಸುತ್ತಿದ್ದಾರೆ. ಆದ್ದರಿಂದ ದಯವಿಟ್ಟು ತಮ್ಮ ನಿಲುವಿನಿಂದ ಹಿಂದೆ ಸರಿಯಬೇಕು ಎಂದು ಗ್ರಾಮಸ್ಥರಿಗೆ ಮನವಿ ಮಾಡಿದರು.

ಗ್ರಾಮಸ್ಥರ ಪರವಾಗಿ ಮಾತನಾಡಿದ ಅಂತೋನಿ ಡಿಸೋಜ, ಹಕ್ಕು ಪತ್ರ ಸಮಸ್ಯೆ, ಜೆಟ್ಟಿ ಕಾಮಗಾರಿ ಸ್ಥಗಿತ, ಕೃಷಿಗೆ ಉಪ್ಪು ನೀರಿನ ಸಮಸ್ಯೆ, ಜನಪ್ರತಿನಿಧಿಗಳ ಅಸಹಕಾರ ಮುಂತಾದ ಕಾರಣಗಳಿಗಾಗಿ ಚುನಾವಣೆ ಬಹಿಷ್ಕಾರಕ್ಕೆ ಕರೆ ನೀಡಿದ್ದೇವೆ. ಜೆಟ್ಟಿ ಹೊಳೆತ್ತಲು ಎಲ್ಲಾ ಕಡೆಗಳಲ್ಲಿ ಸಾಧ್ಯವಾದರೂ ಕೋಡಿಕನ್ಯಾಣದಲ್ಲಿ ಕೆಲಸವಾಗಿಲ್ಲ. ಉಪ್ಪು ನೀರಿನ ತಡೆಗೆ ವ್ಯವಸ್ಥೆ ಇಲ್ಲದೆ ಪ್ರತಿ ವರ್ಷ ನಮ್ಮ ಕೃಷಿ ಹಾನಿ ಯಾಗುತ್ತಿದೆ. ಹತ್ತಾರು ವರ್ಷಗಳ ನಮ್ಮ ಸಮಸ್ಯೆಗೆ ಸರಕಾರ ಪೂರಕವಾಗಿ ಸ್ಪಂದನೆ ನೀಡದಿರುವುದರಿಂದ ಈ ಬಾರಿ ಚುನಾವಣೆ ಬಹಿಷ್ಕರಿಸುತ್ತೇವೆ. ನಮ್ಮ ಸಮಸ್ಯೆಗಳನ್ನು ಆಲಿಸಬೇಕಾದ ಜನಪ್ರತಿನಿಧಿಗಳು ಮೌನವಾಗಿರುವುದು ಶೋಚನೀಯ.

ಸಿ.ಆರ್.ಝಡ್. ನಿಯಮಗಳನ್ನು ಪರಿಶೀಲಿಸಿ ಹಕ್ಕುಪತ್ರ ನೀಡುವಂತೆ ಈ ಹಿಂದೆ ಸರಕಾರ ಆದೇಶದಲ್ಲಿ ತಿಳಿಸಿದ್ದರಿಂದ ಹಿನ್ನಡೆಯಾಗಿದೆ. ನಿಮ್ಮ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪೊರಂಬೋಕು ಶೀಷಿಕೆಯನ್ನು ಕಡಿತಗೊಳಿಸುವ ಸಲುವಾಗಿ ಸರಕಾರಕ್ಕೆ ಮನವಿ ಸಲ್ಲಿಸುವ ಕಾರ್ಯವನ್ನು 15 ದಿನಗಳಲ್ಲಿ ನಡೆಯಲಿದೆ. ಸರ್ವೆ ನಂಬರ್ ಸೃಷ್ಟಿಸುವ ಸಲುವಾಗಿ ಸರ್ವೆ ನಡೆಸಿದ್ದು ಹೊಸ ನಂಬರ್ ನೀಡಿ ಹಕ್ಕುಪತ್ರ ವಿತರಿಸಲಾಗುತ್ತದೆ. ಕೃಷಿಭೂಮಿಗೆ ಹಕ್ಕುಪತ್ರ ನೀಡಲು ಸಿ.ಆರ್.ಝಡ್.ನಲ್ಲಿ ಯಾವುದೇ ಸಮಸ್ಯೆ ಇಲ್ಲ ಈ ಬಗ್ಗೆ ಕ್ರಮೈಗೊಳ್ಳಲಾಗು ವುದು. ಹಕ್ಕು ಪತ್ರಕ್ಕಾಗಿ ಪಾವತಿಸಬೇಕಾದ ಮೊತ್ತವನ್ನು ಕಡಿತಗೊಳಿಸಲು ಸೂಚಿಸಿದ್ದು ಈ ಬಗ್ಗೆ ಸರಕಾರಕ್ಕೆ ಮನವಿ ಮಾಡಲಾಗಿದೆ.

ಜೆಟ್ಟಿ ಸಮಸ್ಯೆಗೆ ಸಂಬಂಧಿಸಿ ತಜ್ಞರೊಂದಿಗೆ ಮಾತುಕತೆ ನಡೆಸಿ ಕ್ರಮಕೈಗೊಳ್ಳಲಾಗುವುದು. ಹೀಗೆ ನಿಮ್ಮ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮುಂಚೂಣಿಯಲ್ಲಿ ನಿಂತು ಕಾರ್ಯ ನಿರ್ವಹಿಸುತ್ತದೆ. ಆದ್ದರಿಂದ ಚುನಾವಣೆ ಬಹಿಷ್ಕಾರದ ನಿರ್ಧಾರದಿಂದ ಹೊರಬಂದು ಜನಪ್ರತಿನಿಧಿಗಳ ಆಯ್ಕೆಯಾಗುವಂತೆ ಸಹಕರಿಸಿ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ನಮ್ಮ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕೆಲಸಗಳು ನಡೆಯಲಿ. ಮರು ಚುನಾವಣೆಯಲ್ಲಿ ನಾವೆಲ್ಲ ಒಮ್ಮತದ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತೇವೆ. ನಮ್ಮ ಈ ಸಮಸ್ಯೆ ಹತ್ತಾರು ವರ್ಷಗಳಿಂದ ಇದ್ದು ಐದಾರು ಜಿಲ್ಲಾಧಿಕಾರಿಗಳು ಬದಲಾವಣೆಯಾಗಿದ್ದಾರೆ. ಆದರೆ ಸಮಸ್ಯೆಗೆ ಪರಿಹಾರ ಲಭಿಸಿಲ್ಲ. ಇದೀಗ ನೀವು ಸಮಸ್ಯೆಯನ್ನು ಪರಿಹರಿಸುವ ಭರವಸೆಯಿದೆ. ಆದರೆ ಚುನಾವಣಾ ಬಹಿಷ್ಕಾರದಿಂದ ಹಿಂದೆ ಸರಿಯುವುದಿಲ್ಲ ಎಂದಿದ್ದಾರೆ. ಒಂದೊಮ್ಮೆ ಸ್ವಯಂಪ್ರೇರಿತವಾಗಿ ನಾಮಪತ್ರ ಸಲ್ಲಿಸಲು ಮುಂದಾದವರಿಗೆ ಅಡ್ಡಿಪಡಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದರು.

ಬ್ರಹ್ಮಾವರ ತಹಶೀಲ್ದಾರ್ ಕಿರಣ್ ಗೋರಯ್ಯ, ಕುಂದಾಪುರ ಸಹಾಯಕ ಉಪವಿಭಾಗಧಿಕಾರಿ ರಾಜು, ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತಪದ್ಮನಾಭ , ಕೋಟ ಕಂದಾಯ ಅಧಿಕಾರಿ ರಾಜು, ಸಿ.ಆರ್.ಝಡ್. ಅಧಿಕಾರಿ ಸವಿತಾ ಖಾದ್ರಿ, ಮೀನುಗಾರಿಕೆ ಇಲಾಖೆಯ ದಿವಾಕರ ಖಾರ್ವಿ, ಕೋಡಿ ಗ್ರಾಮಸ್ಥರ ಪರವಾಗಿ ಮಹಾಬಲ ತಿಂಗಳಾಯ,ಲಕ್ಷ್ಮಣ ಸುವರ್ಣ, ಅಶೋಕ ತಿಂಗಳಾಯ, ಜಗನಾಥ ಅಮೀನ್, ಶಂಕರ್ ಬಂಗೇರ, ಉದಯ ತಿಂಗಳಾಯ, ಕೃಷ್ಣ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.

Comments are closed.