ಪರ್ಯಾಯ ಸಂಭ್ರಮದಲ್ಲಿ ಕೃಷ್ಣನಗರಿ ಉಡುಪಿ: ರವಿವಾರ ಸರ್ವಜ್ಞಪೀಠ ಏರಲಿರುವ ಶೀರೂರು ಶ್ರೀಗಳು

ಉಡುಪಿ: ಕೃಷ್ಣನಗರಿ ಉಡುಪಿಯಲ್ಲಿ ಪರ್ಯಾಯೋತ್ಸವದ ಸಂಭ್ರಮ ಗರಿಗೆದರಿದ್ದು, ಶ್ರೀ ಶೀರೂರು ಮಠದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ರವಿವಾರ (ಜ.18) ಬೆಳಿಗ್ಗೆ ಸರ್ವಜ್ಞಪೀಠ ಏರಿ ಮುಂದಿನ ಎರಡು ವರ್ಷಗಳ ಅವಧಿಗೆ ಶ್ರೀ ಕೃಷ್ಣ ಪೂಜಾ ಕೈಂಕರ್ಯವನ್ನು ವಹಿಸಿಕೊಳ್ಳಲಿದ್ದಾರೆ. ಇದು ಶ್ರೀ ವೇದವರ್ಧನ ತೀರ್ಥ ಶ್ರೀಪಾದರಿಗೆ ಪ್ರಥಮ ಪರ್ಯಾಯವಾಗಿದೆ.
ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರ ಬಳಿಕ ಶೀರೂರು ಮಠದ 31ನೇ ಯತಿಯಾಗಿ ನೇಮಕಗೊಂಡಿರುವ ಶ್ರೀ ವೇದವರ್ಧನ ತೀರ್ಥ ಶ್ರೀಪಾದರಿಗೆ, ದ್ವಂದ್ವಮಠವಾದ ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಪ್ರಣವೋಪದೇಶ ನೀಡಿ ಪೀಠಾಧಿಪತ್ಯ ಅನುಗ್ರಹಿಸಿದ್ದರು.
ಶ್ರೀಪಾದರ ಪೂರ್ವಾಶ್ರಮದ ಹೆಸರು ಅನಿರುದ್ಧ. ಅವರು 2005ರ ಸೆಪ್ಟೆಂಬರ್ 30ರಂದು ಉಡುಪಿಯಲ್ಲಿ ಜನಿಸಿದ್ದು, ವಿದ್ಯೋದಯ ಪಬ್ಲಿಕ್ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿವರೆಗೂ ಲೌಕಿಕ ಶಿಕ್ಷಣ ಪಡೆದಿದ್ದಾರೆ. ಉಪನಯನದ ನಂತರ ಮಹಾನಾಮ್ನಿ, ಮಹಾಬೃತ, ಉಪನಿಷತ್, ಗೋದಾನ ಸೇರಿದಂತೆ ನಾಲ್ಕು ಸಂಸ್ಕಾರಗಳನ್ನು ಪೂರೈಸಿ ವಿದ್ಯಾ ಸಮಾವರ್ತನೆ ನೆರವೇರಿಸಿಕೊಂಡು ಸನ್ಯಾಸ ಸ್ವೀಕರಿಸಿದ್ದಾರೆ.
ಶಾಲೆಯಲ್ಲಿ ಲೌಕಿಕ ವಿದ್ಯಾಭ್ಯಾಸದ ಜೊತೆಗೆ, ಮನೆಯಲ್ಲಿ ಶಾಸ್ತ್ರಪಾಠಗಳು, ವೇದಾಧ್ಯಯನ, ತಾತ್ಪರ್ಯ ನಿರ್ಣಯ, ವ್ಯಕ್ತಿಮಲ್ಲಿಕಾ ಸೇರಿದಂತೆ ಹಲವು ಗ್ರಂಥಗಳ ಅಧ್ಯಯನ ನಡೆಸಿದ್ದರು. ಅನುಷ್ಠಾನ, ದೇವರ ಜಪತಪಗಳಲ್ಲಿ ಸದಾ ನಿರತರಾಗಿದ್ದ ಶ್ರೀಪಾದರಿಗೆ ಸನ್ಯಾಸ ಜೀವನವೇ ವಿಶೇಷ ಆಸಕ್ತಿಯ ಕ್ಷೇತ್ರವಾಗಿತ್ತು.

ಇದನ್ನೂ ಓದಿ: ಪರ್ಯಾಯ ಪ್ರಯುಕ್ತ ಶ್ರೀಕೃಷ್ಣ ಮಠಕ್ಕೆ ಮಟ್ಟು ಗುಳ್ಳ ಹೊರೆಕಾಣಿಕೆ ಸಮರ್ಪಣೆ

“ನಮ್ಮ ಮಗನ ಆಸಕ್ತಿಯೇ ಸನ್ಯಾಸತ್ವವಾಗಿದ್ದರಿಂದ, ಅವನನ್ನು ಕೃಷ್ಣ ಪೂಜಾ ಕೈಂಕರ್ಯಕ್ಕೆ ಸಮರ್ಪಿಸಿದ್ದೇವೆ” ಎಂದು ಶ್ರೀಮಠದ ದಿವಾನರೂ ಆಗಿರುವ ಶ್ರೀಪಾದರ ಪೂರ್ವಾಶ್ರಮದ ತಂದೆ ಡಾ. ಉದಯ ಕುಮಾರ್ ಅವರು ಸರಳವಾಗಿ ತಿಳಿಸಿದ್ದಾರೆ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories