MLA Election 2023 : ಉಡುಪಿ, ದಕ್ಷಿಣ ಕನ್ನಡ 4 ಬಿಲ್ಲವ, 2 ಮೊಗವೀರ ಅಭ್ಯರ್ಥಿಗಳು : ಹೇಗಿದೆ ಗೊತ್ತಾ ಕಾಂಗ್ರೆಸ್‌ ಹೈಕಮಾಂಡ್‌ ಲೆಕ್ಕಾಚಾರ

ಉಡುಪಿ/ಮಂಗಳೂರು : ಮುಂದಿನ ವರ್ಷ ರಾಜ್ಯ ವಿಧಾನಸಭಾ ಚುನಾವಣೆ (MLA Election 2023) ನಡೆಯಲಿದೆ. ಶತಾಯಗತಾಯ ಕಳೆದು ಕೊಂಡಿರುವ ಅಧಿಕಾರವನ್ನು ಮರಳಿ ಪಡೆಯಲು ಕಾಂಗ್ರೆಸ್‌ ಭರ್ಜರಿ ಸಿದ್ದತೆ ನಡೆಸುತ್ತಿದೆ. ಅದ್ರಲ್ಲೂ ಕರಾವಳಿ ಭಾಗದಲ್ಲಿ ಅತೀ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಸಲುವಾಗಿ ಸದ್ದಿಲ್ಲದೇ ಲೆಕ್ಕಾಚಾರ ವನ್ನು ಶುರುಮಾಡಿದೆ. ಕಾಂಗ್ರೆಸ್‌ ಪಕ್ಷ ಕರಾವಳಿ ಭಾಗದಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿರುವ ಬಿಲ್ಲವರು ಹಾಗೂ ಮೊಗವೀರ ಮತಗಳನ್ನು ಸೆಳೆಯುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಆರು ಸ್ಥಾನಗಳನ್ನು ಬಿಲ್ಲವರು ಹಾಗೂ ಮೊಗವೀರ ಸಮುದಾಯದವರಿಗೆ ಟಿಕೆಟ್‌ ನೀಡಲು ಮುಂದಾಗಿದೆ.

ಒಂದು ಕಾಲದಲ್ಲಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್‌ ಶಾಸಕರಿದ್ದರು. ಜೊತೆಗೆ ಸಂಸದರೂ ಕೂಡ ಕಾಂಗ್ರೆಸ್‌ ಪಕ್ಷದಿಂದಲೇ ಆಯ್ಕೆ ಯಾಗುತ್ತಿದ್ದರು. ಆದರೆ ಕಾಲ ಬದಲಾದಂತೆ ಕಾಂಗ್ರೆಸ್‌ ಕರಾವಳಿಯಲ್ಲಿ ತನ್ನ ಪ್ರಾಬಲ್ಯವನ್ನು ಕಳೆದುಕೊಂಡಿದೆ. ಸ್ಥಳೀಯಾಡಳಿತ ಚುನಾವಣೆಯಲ್ಲಿಯೂ ಕಾಂಗ್ರೆಸ್‌ ಭಾರೀ ನಿರಾಸೆಯನ್ನು ಕಂಡಿತ್ತು. ಆದ್ರೀಗ ಮತ್ತೆ ಕಾಂಗ್ರೆಸ್‌ ಪಕ್ಷ ಕರಾವಳಿಯಲ್ಲಿ ಪ್ರಾಬಲ್ಯ ಸಾಧಿಸಲು ಸಜ್ಜಾಗಿದೆ. ಕಾಂಗ್ರೆಸ್‌ ಹೈಕಮಾಂಡ್‌ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕರಾವಳಿ ಭಾಗದಲ್ಲಿ ಬಿಲ್ಲವರು ಹಾಗೂ ಮೊಗವೀರ ಸಮುದಾಯಕ್ಕೆ ಹೆಚ್ಚಿನ ಸ್ಥಾನವನ್ನು ನೀಡಲು ಮುಂದಾಗಿದೆ. ಅದ್ರಲ್ಲೂ ಈಗಾಗಲೇ ಕಾಂಗ್ರೆಸ್‌ ಹೈಕಮಾಂಡ್‌ ಆಂತರಿಕ ಸಮೀಕ್ಷೆಯನ್ನು ನಡೆಸಿದೆ, ಹೀಗಾಗಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿನ ಒಟ್ಟು ವಿಧಾನ ಸಭಾ ಕ್ಷೇತ್ರಗಳ ಪೈಕಿ ಬಿಲ್ಲವ ಸಮುದಾಯಕ್ಕೆ 4 ಹಾಗೂ ಮೊಗವೀರ ಸಮುದಾಯಕ್ಕೆ 2 ಸ್ಥಾನಗಳನ್ನು ನೀಡಲು ಗಂಭೀರ ಚಿಂತನೆ ನಡೆಸಿದೆ.

ಹೇಗಿದೆ ಕಾಂಗ್ರೆಸ್‌ ಹೈಕಮಾಂಡ್‌ ಲೆಕ್ಕಾಚಾರ ?

ಕರಾವಳಿಯ ಕಾಂಗ್ರೆಸ್‌ ಪ್ರಭಾವಿ ನಾಯಕರಾಗಿದ್ದ ಆಸ್ಕರ್‌ ಫರ್ನಾಂಡಿಸ್‌ ಈಗಾಗಲೇ ಇಹಲೋಕದ ಯಾತ್ರೆ ಮುಗಿಸಿದ್ದಾರೆ. ಇನ್ನು ಜನಾರ್ಧನ ಪೂಜಾರಿ ಅವರು ಸಕ್ರೀಯ ರಾಜಕಾರಣದಿಂದ ದೂರ ಉಳಿದಿರುವುದು ಕರಾವಳಿ ಕಾಂಗ್ರೆಸ್‌ಗೆ ದೊಡ್ಡ ಮಟ್ಟಿನ ಹೊಡೆತ ಕೊಟ್ಟಿದೆ. ಜೊತೆ ಜೊತೆಗೆ ಕಾಂಗ್ರೆಸ್‌ ಪಕ್ಷದಲ್ಲಿನ ಆತಂರಿಕ ಕಚ್ಚಾಟ ಪಕ್ಷದ ಕಾರ್ಯಕರ್ತರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಇದೇ ಕಾರಣಕ್ಕೆ ಕಾಂಗ್ರೆಸ್‌ ಹೈಕಮಾಂಡ್‌ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತೀ ಹೆಚ್ಚು ಮತದಾರರನ್ನು ಹೊಂದಿರುವ ಬಿಲ್ಲವರು ಹಾಗೂ ಮೊಗವೀರರ ಓಲೈಕೆಗೆ ಮುಂದಾಗಿದೆ.

ಉಡುಪಿ ಜಿಲ್ಲೆಯ ಬೈಂದೂರು, ಕಾಪು, ಕಾರ್ಕಳ, ಉಡುಪಿ ವಿಧಾನ ಸಭಾ ಕ್ಷೇತ್ರಗಳ ಮೇಲೆ ಕಾಂಗ್ರೆಸ್‌ ಕಣ್ಣಿಟ್ಟಿದೆ. ಅಲ್ಲದೇ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ, ಬಂಟ್ವಾಳ, ಬೆಳ್ತಂಗಡಿ, ಮಂಗಳೂರು ಉತ್ತರ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಬಿಲ್ಲವ ಹಾಗೂ ಮೊಗವೀರ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಸಿದ್ದತೆ ನಡೆಸಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ವಸಂತ ಬಂಗೇರ, ಬೈಂದೂರು ಕ್ಷೇತ್ರದಿಂದ ಗೋಪಾಲ ಪೂಜಾರಿ, ಕಾಪು ವಿಧಾನಸಭಾ ಕ್ಷೇತ್ರದಿಂದ ವಿನಯಕುಮಾರ್‌ ಸೊರಕೆ ಬಿಲ್ಲವ ಸಮುದಾಯದಿಂದ ಸ್ಪರ್ಧೆ ಮಾಡಿದ್ದರು. ಇನ್ನು ಮೊಗವೀರ ಸಮುದಾಯದಿಂದ ಉಡುಪಿ ವಿಧಾನ ಸಭಾ ಕ್ಷೇತ್ರದಲ್ಲಿ ಪ್ರಮೋದ್‌ ಮಧ್ವರಾಜ್‌ ಅವರಿಗೆ ಟಿಕೆಟ್‌ ನೀಡಲಾಗಿತ್ತು.

ಆದರೆ ಈ ಬಾರಿ ಬೈಂದೂರು, ಕಾರ್ಕಳ, ಬಂಟ್ವಾಳ, ಮೂಡಬಿದಿರೆ ಹಾಗೂ ಬೆಳ್ತಂಗಡಿ ಈ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಲ್ಲವ ಸಮುದಾಯದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿದ್ರೆ, ಮಂಗಳೂರು ಉತ್ತರ, ಕಾಪು ಕ್ಷೇತ್ರ ಹಾಗೂ ಉಡುಪಿ ಈ ಮೂರು ಕ್ಷೇತ್ರಗಳ ಪೈಕಿ ಎರಡು ಕ್ಷೇತ್ರಗಳಿಂದ ಮೊಗವೀರ ಸಮುದಾಯದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಯೋಜನೆ ರೂಪಿಸಿದೆ. ವಿನಯ ಕುಮಾರ್‌ ಸೊರಕೆ, ಗೋಪಾಲ ಪೂಜಾರಿ, ವಸಂತ ಬಂಗೇರ, ರಕ್ಷಿತ್‌ ಶಿವರಾಮ್‌, ಪದ್ಮರಾಜ್‌, ರಾಜಶೇಖರ ಕೋಟ್ಯಾನ್‌, ಪ್ರಮೋದ್‌ ಕಾಂಚನ್‌, ಯು.ಆರ್.‌ ಸಭಾಪತಿ, ಹರೀಶ್‌ ಕುಮಾರ್‌ ಅವರುಗಳ ಹೆಸರು ಬಲವಾಗಿ ಕೇಳಿಬರುತ್ತಿದೆ.

ಮತಗಳ ಲೆಕ್ಕಾಚಾರ :

ಕರಾವಳಿ ಭಾಗದ ವಿಧಾನ ಸಭಾ ಕ್ಷೇತ್ರಗಳ ಪೈಕಿ ಬಿಲ್ಲವ ಹಾಗೂ ಮೊಗವೀರ ಮತಗಳ ಲೆಕ್ಕಾಚಾರವನ್ನು ನೋಡುವುದಾದ್ರೆ, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ 80 ಸಾವಿರ, ಮೊಡಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ 72 ಸಾವಿರ, ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ 75 ಸಾವಿರ, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 60, ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ 65 ಸಾವಿರ ಹಾಗೂ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ 70 ಸಾವಿರ ಬಿಲ್ಲವ ಸಮುದಾಯದ ಮತದಾರರಿದ್ದಾರೆ. ಇನ್ನು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದಲ್ಲಿ 35 ಸಾವಿರ ಹಾಗೂ ಕಾಪು ವಿಧಾನಸಭಾ ಕ್ಷೇತ್ರದಲ್ಲಿ 50 ಸಾವಿರ ಮೊಗವೀರ ಸಮುದಾಯದ ಮತದಾರರಿದ್ದಾರೆ. ಜೊತೆಗೆ ಮಂಗಳೂರು ಉತ್ತರ ಕ್ಷೇತ್ರದಿಂದಲೂ ಮೊಗವೀರ ಸಮುದಾಯದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಸಾಧ್ಯತೆಯಿದೆ.

ಇದನ್ನೂ ಓದಿ : MLA Basana Gowda Patil Yatnal : ಮಂತ್ರಿ ಸ್ಥಾನಕ್ಕೆ ಕ್ಷೇತ್ರ ಬಿಟ್ಟು ವರಿಷ್ಠರ ಮನೆ ಅಲೆಯಬೇಕು : ಬಸನಗೌಡ ಪಾಟೀಲ್​ ಯತ್ನಾಳ್​

ಇದನ್ನೂ ಓದಿ : EXCLUSIVE : ಶಾಸಕ ಜಮೀರ್‌ ಖಾನ್‌ ಗೆ ಐಎಂಎ ಉರುಳು : ಇತಿಹಾಸದಲ್ಲೇ ಎಂಎಲ್‌ಎ ಮನೆ ಕದ ತಟ್ಟಿದ ಎಸಿಬಿ

MLA Election 2023 : Udupi, Dakshina Kannada 4 Billava, 2 Mogaveera Candidates: How is the Congress High Command calculation ?

Comments are closed.