ಹೋಮಕುಂಡದಲ್ಲಿ ಉದ್ಯಮಿಯನ್ನು ಸುಟ್ಟ ಪ್ರಕರಣ : ತೀರ್ಪು ಮುಂದೂಡಿದ ಉಡುಪಿ ನ್ಯಾಯಾಲಯ

ಉಡುಪಿ : ಉದ್ಯಮಿಯೋರ್ವರನ್ನು ತನ್ನ ಪತ್ನಿಯೇ ಪುತ್ರ ಹಾಗೂ ಪ್ರಿಯಕರನ ಜೊತೆ ಸೇರಿ ಕೊಲೆ ಮಾಡಿ ನಂತರ ಹೋಮ ಕುಂಡದಲ್ಲಿ ಸುಟ್ಟು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ನ್ಯಾಯಾಲಯ ತೀರ್ಪನ್ನು ಮುಂದೂಡಿಕೆ ಮಾಡಿದೆ.

ದುಬೈನಲ್ಲಿ ಉದ್ಯಮಿಯಾಗಿದ್ದ ಭಾಸ್ಕರ ಶೆಟ್ಟಿ ಅವರು 2016ರ ಜೂನ್ ತಿಂಗಳಲ್ಲಿ ಇಂದ್ರಾಳಿಯಲ್ಲಿರುವ ತನ್ನ ಮನೆಗೆ ಬಂದಿದ್ದ ವೇಳೆಯಲ್ಲಿ ಪತ್ನಿ ರಾಜೇಶ್ವರಿ ಶೆಟ್ಟಿ, ಪ್ರಿಯಕರ ನಿರಂಜನ್​ ಭಟ್​, ಪುತ್ರ ನವನೀತ್ ಶೆಟ್ಟಿ  ಭೀಕರವಾಗಿ ಹತ್ಯೆ ಮಾಡಿದ್ದರು. ಪತ್ನಿ ರಾಜೇಶ್ವರಿ ಶೆಟ್ಟಿ ತನ್ನ ಪ್ರಿಯಕರನ ಜೊತೆಗೆ ಇರುವ ಪೋಟೋವನ್ನು ಗಮನಿಸಿ, ತಮ್ಮ ಎಲ್ಲ ಆಸ್ತಿಯನ್ನು ತಾಯಿಯ ಹೆಸರಿಗೆ ನೋಂದಣಿ ಮಾಡಿಸಲು ಭಾಸ್ಕರ ಶೆಟ್ಟಿ ಮುಂದಾಗಿದ್ದರು. ಇದರಿಂದ ಕೆರಳಿದ ಪತ್ನಿ ರಾಜೇಶ್ವರಿ ಪ್ರಿಯಕರ ನ ಜತೆ ಸೇರಿ ಕೊಲೆಗೆ ಸಂಚು ರೂಪಿಸಿದ್ದಳು.

ಭಾಸ್ಕರ ಶೆಟ್ಟಿ ಅವರನ್ನು ಕೊಲೆ ಮಾಡಿ ನಂತರ ನಂದಳಿಕೆಯಲ್ಲಿರುವ ನಿರಂಜನ ಭಟ್ ಮನೆಗೆ ಶವವನ್ನು ತಂದಿದ್ದಾರೆ. ನಂತರ ಹೋಮ ಕುಂಡದಲ್ಲಿ ಪತಿಯ ದೇಹವನ್ನು ಸುಟ್ಟು ಹಾಕಲಾಗಿತ್ತು.ಈ ಕುರಿತು ಉಡುಪಿ ಪೊಲೀಸರು ತನಿಖೆ ನಡೆಸಿದಾಗ ಹೋಮ ಕುಂಡದಲ್ಲಿ ಹತ್ಯೆ ಮಾಡಿರುವ ವಿಚಾರ ಬಯಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಯನ್ನು ಬಹುತೇಕವಾಗಿ ಪೂರ್ಣಗೊಳಿಸಿದ್ದು, ಲಾಕ್​ಡೌನ್​ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಸತ್ರ ನ್ಯಾಯಾಧೀಶರಾದ  ಸುಬ್ರಹ್ಮಣ್ಯ ಅವರು ಜೂ. 8ಕ್ಕೆ ಮುಂದೂಡಿಕೆ ಮಾಡಿದ್ದಾರೆ. ಪ್ರಮುಖ ಆರೋಪಿ ರಾಜೇಶ್ವರಿ ‌ಶೆಟ್ಟಿ ಹಾಗೂ ಸಾಕ್ಷ್ಯ ನಾಶ ಆರೋಪಿ ರಾಘವೇಂದ್ರ ‌ಅವರು ಜೂ.8ಕ್ಕೆ ಹಾಜರಾಗುವಂತೆ ಹಾಗೂ ಜೈಲಿನಲ್ಲಿರುವ ಆರೋಪಿಗಳಾದ ನವನೀತ್‌ ಶೆಟ್ಟಿ‌ ಹಾಗೂ‌ ನಿರಂಜನ್ ವೀಡಿಯೋ ಕಾನ್ಫರೆನ್ಸ್​ ಮೂಲಕ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ.

Comments are closed.