ಉಡುಪಿ : ಉದ್ಯಮಿಯೋರ್ವರನ್ನು ಅಪಹರಿಸಿ ಎರಡು ಲಕ್ಷ ರೂಪಾಯಿ ಸುಲಿಗೆ ಮಾಡಿ, ಲಕ್ಷಾಂತರ ರೂಪಾಯಿಗೆ ಬೇಡಿಕೆಯಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಉಡುಪಿ ಜಿಲ್ಲೆಯ ಸಾಸ್ತಾನ ಕೋಡಿ ತಲೆಯ ನಿವಾಸಿ ಮಣಿ ಯಾನೆ ಮಣಿಕಂಠ ಖಾರ್ವಿ, ನಂದಳಿಕೆಯ ಸಂತೋಷ್ ಖಾರ್ವಿ ಹಾಗೂ ಕಾರ್ಕಳ ನಿಟ್ಟೆಯ ಅನಿಲ್ ಪೂಜಾರಿ ಎಂಬವರೇ ಬಂಧಿತ ಆರೋಪಿಗಳು.
ಜುಲೈ 16ರಂದು ಉಡುಪಿ ನಗರದ ವಾದಿರಾಜ ಕಾಂಪ್ಲೆಕ್ಸ್‌ನಲ್ಲಿ ಷೇರು ವ್ಯವಹಾರ ಮಾಡುತ್ತಿದ್ದ ಮೂಲತಃ ತುಮಕೂರು ನಿವಾಸಿ ಅಶೋಕ್ ಕುಮಾರ್ ಎಂಬವರ ಕಚೇರಿಗೆ ವ್ಯವಹಾರದ ಕುರಿತು ಮಾತನಾಡಲು ಸಂತೋಷ್ ಬೋವಿ ಬಂದಿದ್ದ. ನಂತರ ಮಾತನಾಡುವ ಸಲುವಾಗಿ ಕಾರಿನಲ್ಲಿ ಹೊರಗೆ ಕರೆದುಕೊಂಡು ಹೋಗಿದ್ದಾನೆ. ನಂತರ ಇಬ್ಬರು ಆರೋಪಿಗಳಾದ ಅನಿಲ್ ಪೂಜಾರಿ ಹಾಗೂ ಮಣಿಕಂಠ ಖಾರ್ವಿ ಕಾರು ಹತ್ತಿದ್ದಾರೆ.
ಇದನ್ನೂ ಓದಿ : ವಿಶಾಲ ಗಾಣಿಗ ಕೊಲೆ ಪತಿ, ಸೇರಿ ಸುಫಾರಿ ಕಿಲ್ಲರ್ ಬಂಧನ : ದುಬೈನಲ್ಲೇ ಕುಳಿತು ಕೊಲೆಗೆ ಸ್ಕೆಚ್
ಅಶೋಕ್ ಕುಮಾರ್ ಅವರಿಗೆ ಪಿಸ್ತೂಲು, ತಲವಾರು ತೋರಿಸಿ ಬೆದರಿಸಿದ್ದಾರೆ. ಅಲ್ಲದೇ ಅವರ ಬಳಿಯಲ್ಲಿದ್ದ ಎರಡು ಲಕ್ಷ ರೂಪಾಯಿ ಹಣವನ್ನು ಪಡೆದುಕೊಂಡು, ರೆಸಾರ್ಟ್‌ವೊಂದಕ್ಕೆ ಕರೆದೊಯ್ದು ಕೂಡಿ ಹಾಕಿದ್ದಾರೆ. ಅಲ್ಲದೇ 70ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ. ಅಂತೆಯೇ ಅಶೋಕ್ ಕುಮಾರ್ ಆರೋಪಿಗಳ ಜೊತೆಗೆ ಹಣ ತೆಗೆಯುವ ಸಲುವಾಗಿ ಬ್ಯಾಂಕಿಗೆ ಬಂದಿದ್ದಾರೆ. ಬ್ಯಾಂಕಿನ ಒಳಗೆ ಅಶೋಕ್ ಕುಮಾರ್ ಕಳ್ಳರು ಎಂದು ಕೂಗಿ ಕೊಂಡಿದ್ದಾರೆ. ಈ ವೇಳೆಯಲ್ಲಿ ಮೂವರು ಆರೋಪಿಗಳು ಪರಾರಿಯಾಗಿದ್ದಾರೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡ ಉಡುಪಿ ಪೊಲೀಸರು ಮೂವರು ಆರೋಪಿಗಳನ್ನು ಕಟಪಾಡಿಯ ಬಳಿಯಲ್ಲಿ ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಪಿಸ್ತೂಲ್, ತಲವಾರು, ಸುಲಿಗೆ ಮಾಡಿದ 1.35 ಲಕ್ಷ ರೂಪಾಯಿ, ಮೊಬೈಲನ್ನು ಪೊಲೀಸರು ವಶಪಡಿಸಿ ಕೊಂಡಿದ್ದಾರೆ.