ಕೋಟ : ಮತಾಂತರ ಕೇಂದ್ರಕ್ಕೆ ಹಿಂಜಾವೇ ಮುತ್ತಿಗೆ : ನಾಲ್ವರು ಅರೆಸ್ಟ್‌

ಕೋಟ : ಕರಾವಳಿ ಭಾಗದಲ್ಲಿಯೂ ಮತಾಂತರದ ಆರೋಪ ಕೇಳಿಬಂದಿದೆ. ಕೋಟ ಪೊಲೀಸ್‌ ಠಾಣಾ ವ್ಯಾಪ್ತಿಯ ಶಿರಿಯಾರ ಸಮೀಪದ ಹಳ್ಳಾಡಿಯಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರ ನಡೆಸುತ್ತಿದ್ದ ಕೇಂದ್ರ ಮೇಲೆ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಉಡುಪಿ ಜಿಲ್ಲೆಯ ಹಳ್ಳಾಡಿ, ಶಿರಿಯಾರ, ಕಾಜ್ರಳ್ಳಿ ಮುಂತಾದ ಪ್ರದೇಶಗಳಲ್ಲಿ ಜನರಿಗೆ ಆಮಿಷವೊಡ್ಡಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲಾಗುತ್ತಿತ್ತು. ಖಚಿತ ಮಾಹಿತಿಯ ಮೇರೆಗೆ ಹಿಂದೂ ಜಾಗರಣಾ ವೇದಿಕೆಯ ಮುಖಂಡರು ಮನೆಯೊಂದರ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆಯಲ್ಲಿ ಮತಾಂತರ ಮಾಡುತ್ತಿರುವುದು ಬೆಳಕಿಗೆ ಬಂದಿದೆ ಕೂಡಲೇ ಕೋಟ ಠಾಣೆಯ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಮತಾಂತರ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಕ್ರೈಸ್ತ ಮಿಷನರಿಗಳಾದ ಪ್ರಕಾಶ್‌, ಮನೋಹರ, ಜ್ಯೋತಿ ಹಾಗೂ ರವಿ ಎಂಬವರನ್ನು ಬಂಧಿಸಿದ್ದಾರೆ.

ಈ ನಾಲ್ವರು ಕೂಡ ಈ ಹಿಂದೆಯೇ ಕ್ರೈಸ್ತ ಧರ್ಮಕ್ಕೆ ಮತಾಂತರ ಗೊಂಡಿದ್ದು, ಬೋವಿ ಹಾಗೂ ಮೊಗವೀರ ಕುಟುಂಬಗಳನ್ನು ಆರೋಪಿಗಳು ಮತಾಂತರ ಮಾಡಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ. ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ಕೋಟ ಪೊಲೀಸ್‌ ಠಾಣೆಯ ಮುಂಭಾಗದಲ್ಲಿ ಪ್ರತಿಭಟನೆಯನ್ನು ನಡೆಸಿದ್ದಾರೆ.ಕೋಟ ಠಾಣೆಯ ಪಿಎಸ್‌ಐ ಅವರು ಪ್ರತಿಭಟನಾನಿರತರ ಜೊತೆಗೆ ಮಾತುಕತೆ ನಡೆಸಿದ್ದಾರೆ. ಅಲ್ಲದೇ ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸುವುದಾಗಿ ಒಪ್ಪಿಕೊಂಡ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಹಿಂಪಡೆಯಲಾಗಿದೆ.

ಹಿಂದೂ ಜಾಗರಣಾ ವೇದಿಕೆಯ ಪ್ರಮುಖರಾದ ಪ್ರಕಾಶ್‌ ಕುಕ್ಕೆಹಳ್ಳಿ, ಶಂಕರ್‌ ಸ್ಕಂದ, ವಕೀಲರಾದ ಶ್ಯಾಮಸುಂದರ ನಾಯರಿ, ಪ್ರವೀಣ್‌ ಯಕ್ಷಿಮಠ, ಶಿರಿಯಾರ ಚಂದ್ರ ಆಚಾರ್ಯ, ಪ್ರಮೋದ್‌ ಶೆಟ್ಟಿ, ಸಂಗಮ್‌ ಪ್ರದೀಪ್‌, ಸುರೇಶ್‌ ಸಮತಾ, ಪ್ರಮೋದ್‌ ಹಂದೆ ಸೇರಿದಂತೆ ಬೋವಿ ಸಮಾಜದ ಮುಖಂಡರು ಉಪಸ್ಥಿತಿತರಿದ್ದರು.

( Attack on Hindu Jagarn vedike, four case filed against conversion center in Halladi near Udupi )

Comments are closed.