NATIONAL FLAG : ಪಾಲಿಸ್ಟರ್​ ಧ್ವಜ ನೀಡಿ ರಾಷ್ಟ್ರಧ್ವಜದ ಪಾವಿತ್ರ್ಯತೆ ಹಾಳು ಮಾಡಿದ್ದಾರೆ : ಯು.ಟಿ ಖಾದರ್​

ಮಂಗಳೂರು : NATIONAL FLAG : ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷಗಳು ಪೂರೈಸಿರುವ ಹಿನ್ನೆಲೆಯಲ್ಲಿ ಆಗಸ್ಟ್​ 15ರಂದು ಆಜಾದಿ ಕಾ ಅಮೃತ್​ ಮಹೋತ್ಸವದ ಸಂದರ್ಭದಲ್ಲಿ ಮನೆ ಮನೆಯಲ್ಲಿಯೂ ತ್ರಿವರ್ಣ ಧ್ವಜವನ್ನು ಹಾರಿಸುವಂತೆ ಕೇಂದ್ರ ಸರ್ಕಾರವು ಕರೆ ನೀಡಿದೆ. ಇದಕ್ಕಾಗಿ ರಾಷ್ಟ್ರಧ್ವಜ ಸಂಹಿತೆಯಲ್ಲಿ ತಿದ್ದುಪಡಿಯನ್ನೂ ತರಲಾಗಿದೆ. ಧ್ವಜಕ್ಕೆ ಖಾದಿ ಬಟ್ಟೆಯ ಬದಲು ಪಾಲಿಸ್ಟರ್​ ಬಟ್ಟೆಗಳನ್ನು ಬಳಕೆ ಮಾಡಲು ಅನುಮತಿ ಕೂಡ ಸಿಕ್ಕಿದೆ. ಕೇಂದ್ರಸರ್ಕಾರದ ಈ ಕ್ರಮವನ್ನು ವಿಧಾನಸಭಾ ವಿರೋಧಪಕ್ಷದ ಉಪನಾಯಕ ಯು,ಟಿ ಖಾದರ್​ ಖಂಡಿಸಿದ್ದಾರೆ.


ಮಂಗಳೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು ,ಕೇಂದ್ರ ಸರ್ಕಾರವು ಪಾಲಿಸ್ಟರ್​ ಬಟ್ಟೆಗಳಲ್ಲಿ ರಾಷ್ಟ್ರಧ್ವಜವನ್ನು ತಯಾರಿಸಲು ಅನುಮತಿ ನೀಡುವ ಮೂಲಕ ಸ್ವಾತಂತ್ರ್ಯ ಚಳವಳಿಗೆ ಅವಮಾನವನ್ನು ಮಾಡಿದೆ. ರಾಷ್ಟ್ರಧ್ವಜವನ್ನು ಕೇವಲ ಒಂದು ಬಟ್ಟೆಯಂತೆ ನೋಡಬಾರದು, ಬಾವುಟಕ್ಕೆ ಅದರದ್ದೇ ಆದ ಪಾವಿತ್ರ್ಯತೆ ಇದೆ. ದೇಶಕ್ಕಾಗಿ ಅನೇಕರು ರಕ್ತವನ್ನು ಸುರಿಸಿ ಸಿಕ್ಕ ಸ್ವಾತಂತ್ರ್ಯ ಹೋರಾಟದ ಸಂಕೇತವಿದಾಗಿದೆ . ಇದರ ಪಾವಿತ್ರ್ಯತೆಯನ್ನು ಕಾಪಾಡುವ ಜವಾಬ್ದಾರಿ ಸರ್ಕಾರಕ್ಕೆ ಇರಬೇಕಿತ್ತು ಎಂದು ಆಕ್ರೋಶ ಹೊರ ಹಾಕಿದ್ದಾರೆ.

ವಿದೇಶದಿಂದ ಬರುತ್ತಿದ್ದ ಪಾಲಿಸ್ಟರ್​ನಂತಹ ಬಟ್ಟೆಗಳಿಗೆ ನಿಷೇಧ ಹೇರಿ ಮಹಾತ್ಮಾ ಗಾಂಧಿ ಖಾದಿ ಬಟ್ಟೆಯನ್ನೇ ಮುಂದಿಟ್ಟುಕೊಂಡು ಸ್ವರಾಜ್ಯ ಹಾಗೂ ಸ್ವದೇಶಿ ಚಳವಳಿಯನ್ನು ಮಾಡಿದ್ದಾರೆ. ದೇಶದ ಸ್ವಾತಂತ್ರ್ಯ ಚಳವಳಿಗಳ ತಾಯಿಬೇರು ಖಾದಿಯಾಗಿದೆ. ಈವರೆಗೆ ಬಂದ ಎಲ್ಲಾ ಸರ್ಕಾರಗಳು ಖಾದಿಗೆ ಗೌರವವನ್ನು ನೀಡಿವೆ. ಆದರೆ ದೇಶದ 75ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಖಾದಿಗೆ ಮಹತ್ವವನ್ನು ನೀಡುವಂತ ಕಾರ್ಯವನ್ನು ಈ ಸರ್ಕಾರ ಮಾಡಬೇಕಿತ್ತು. ಪ್ರತಿಯೊಬ್ಬರೂ ಖಾದಿ ಬಟ್ಟೆ ಧರಿಸಿ ಎಂದು ಸಂದೇಶ ಸಾರಬೇಕಿತ್ತು ಎಂದು ಅಸಮಾಧಾನ ಹೊರ ಹಾಕಿದ್ದಾರೆ .


ರಾಷ್ಟ್ರಧ್ವಜವನ್ನು ತಯಾರಿಸಲು ವಿದೇಶಿ ಬಟ್ಟೆಗಳನ್ನು ಆಮದು ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಕೇಂದ್ರವು ಬಾಯಲ್ಲಿ ಮಾತ್ರ ಸ್ವದೇಶಿ ಮಂತ್ರ ನುಡಿಯುತ್ತೆ. ಆದರೆ ವಿದೇಶಿ ತಂತ್ರವನ್ನು ಪಾಲಿಸುತ್ತದೆ. ಪಾಲಿಸ್ಟರ್​ನಿಂದ ಧ್ವಜ ತಯಾರಾದರೆ ಚೀನಾದ ಕಂಪನಿಗಳಿಗೆ ಲಾಭವಾಗುತ್ತದೆ. ಚೀನಾದ ಆ್ಯಪ್​ಗಳಿಗೆ ನಿರ್ಬಂಧ ಹೇರುವುದು ಇದೇ ಕೇಂದ್ರ ಸರ್ಕಾರ. ಬಳಿಕ ಚೀನಾದಿಂದ ಬಟ್ಟೆ ತರಿಸಿ ಅಲ್ಲಿನ ವ್ಯಾಪಾರಿಗಳಿಗೆ ಲಾಭ ಮಾಡಿಕೊಡುವುದೂ ಇದೇ ಕೇಂದ್ರ ಸರ್ಕಾರ ಎಂದು ಕಿಡಿಕಾರಿದರು.

ಇದನ್ನು ಓದಿ : Nitish Kumar resigns : ಬಿಜೆಪಿಯೊಂದಿಗಿನ ಮೈತ್ರಿ ಮುರಿದುಕೊಂಡ ಬೆನ್ನಲ್ಲೇ ಬಿಹಾರ ಸಿಎಂ ಸ್ಥಾನಕ್ಕೆ ನಿತೀಶ್​ ಕುಮಾರ್​ ರಾಜೀನಾಮೆ

ಇದನ್ನೂ ಓದಿ : KL Rahul Vs Rohit Sharma : ರಾಹುಲ್ ದಾಖಲೆಗಾಗಿ ಆಡುತ್ತಾರಾ..? ಟೀಕಾಕಾರರಿಗೆ ಸಾಕ್ಷಿ ಸಮೇತ ಉತ್ತರ ಕೊಟ್ಟ ನಿಯತ್ತಿನ ಅಭಿಮಾನಿ

UT KHADER OPPOSES TO USE POLYESTER CLOTH TO MAKE NATIONAL FLAG

Comments are closed.