Corona 3rd wave : ಕೇರಳದಲ್ಲಿ 3 ನೇ ಅಲೆ : ಕಾಲೇಜು ಆರಂಭದ ಬೆನ್ನಲ್ಲೇ ಕರ್ನಾಟಕದಲ್ಲಿ ಹೆಚ್ಚಾಯ್ತು ಕೊರೊನಾ

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್‌ ಸೋಂಕಿನ ಆರ್ಭಟ ಕಡಿಮೆಯಾಗಿದೆ. ಹೀಗಾಗಿ ಸರಕಾರ ಲಾಕ್‌ಡೌನ್‌ ಆದೇಶವನ್ನು ಸಂಪೂರ್ಣವಾಗಿ ಹಿಂಪಡೆದಿದೆ. ಅಲ್ಲದೇ ವಿದ್ಯಾರ್ಥಿಗಳಿಗೆ ಲಸಿಕೆ ನೀಡಿ ಕಾಲೇಜುಗಳನ್ನು ಆರಂಭಿಸಲಾಗಿದೆ. ಇದರ ಬೆನ್ನಲ್ಲೇ ಇದೀಗ ಕೊರೊನಾ ಸೋಂಕು ರಾಜ್ಯದಲ್ಲಿ ಹೆಚ್ಚಳವಾಗುತ್ತಿದೆ.

ಕಳೆದ ಬಾರಿ ಕೊರೊನಾ ನಿಯಂತ್ರಣದ ಮೂಲಕ ಕೇರಳ ರಾಷ್ಟ್ರಕ್ಕೆ ಮಾದರಿಯಾಗಿತ್ತು. ಆದ್ರೀಗ ಕೇರಳದಲ್ಲಿ ಕೊರೊನಾ ವೈರಸ್‌ ಸೋಂಕು ನಿಯಂತ್ರಣಕ್ಕೆ ಸಿಗುತ್ತಿಲ್ಲ. ದಿನ ಕಳೆದಂತೆ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಏರಿಕೆಯನ್ನು ಕಾಣುತ್ತಿದೆ. ಅಲ್ಲದೇ ಕೇರಳಕ್ಕೆ ಮೂರನೇ ಅಲೆ ವ್ಯಾಪಿಸಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ.

ಇನ್ನೊಂದೆಡೆ ಮಹಾರಾಷ್ಟ್ರ ಕಳೆದ ಎರಡು ವರ್ಷಗಳಿಂದಲೂ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ಜೊತೆಗೆ ಮೂರನೇ ಅಲೆ ಆತಂಕವನ್ನು ಸೃಷ್ಟಿಸಿದೆ. ಇದರ ಬೆನ್ನಲ್ಲೇ ರಾಜ್ಯ ಸರಕಾರ ಕೊರೊನಾ ವಿಚಾರದಲ್ಲಿ ಮೈ ಮರೆತಿದೆ. ಆತುರಾತುರಾಗಿ ಅನ್‌ಲಾಕ್‌ ತೆರವು ಮಾಡಿ ಎಡವಟ್ಟು ಮಾಡಿಕೊಂಡಿದೆ. ಕಾಲೇಜು ವಿದ್ಯಾರ್ಥಿಗಳಿಗೆ, ಸಿಬ್ಬಂಧಿಗಳಿಗೆ ಹಾಗೂ ಬೋಧಕ ಸಿಬ್ಬಂದಿಗಳಿಗೆ ಕೊರೊನಾ ಲಸಿಕೆಯನ್ನು ನೀಡಿ ಕಾಲೇಜು ಆರಂಭಿಸಿದೆ. ರಾಜ್ಯದ ಪದವಿ, ಸ್ನಾತಕೋತ್ತರ, ವೈದ್ಯಕೀಯ ಕಾಲೇಜುಗಳು ಈಗಾಗಲೇ ಆರಂಭ ವಾಗಿದ್ದು, ಭೌತಿಕ ತರಗತಿಗಳು ನಡೆಯುತ್ತಿವೆ.

ಆದರೆ ವಿಶ್ವದ ಹಲವು ರಾಷ್ಟ್ರಗಳಲ್ಲಿ ಕೊರೊನಾ ಲಸಿಕೆ ಪಡೆದವರನ್ನು ಕೊರೊನಾ ಮೂರನೇ ಅಲೆ ಕಾಡಿದೆ. ಈ ಕುರಿತು ಹಲವು ರಾಷ್ಟ್ರಗಳಲ್ಲಿ ಈ ಕುರಿತು ಸಂಶೋಧನೆಯೂ ನಡೆಯುತ್ತಿದೆ. ಇನ್ನೊಂದೆಡೆಯಲ್ಲಿ ವಿದ್ಯಾರ್ಥಿಗಳಿಗೆ ಲಸಿಕೆ ನೀಡಿರುವ ಸರಕಾರ ಪೋಷಕರಿಗೆ ಲಸಿಕೆ ನೀಡುವ ವಿಚಾರದಲ್ಲಿ ನಿರ್ಲಕ್ಷ್ಯವನ್ನು ವಹಿಸುತ್ತಿದೆ. ರಾಜ್ಯದಲ್ಲಿ ಕೊರೊನಾ ಲಸಿಕೆ ಯ ಅಭಾವ ತೀವ್ರವಾಗಿ ಕಾಡುತ್ತಿದ್ದು, ಎಲ್ಲಾ ಜಿಲ್ಲೆಗಳಲ್ಲಿನ ಸರಕಾರ ಆಸ್ಪತ್ರೆಗಳಲ್ಲಿ ಲಸಿಕೆ ಇಲ್ಲಾ ಅನ್ನೋ ನಾಮಫಲಕಗಳೇ ಕಂಡುಬರುತ್ತಿದೆ. ಹೀಗಾಗಿ ವಿದ್ಯಾರ್ಥಿಗಳ ಮೂಲಕವೂ ಕೊರೊನಾ ಮನೆಯವರನ್ನು ಬಾಧಿಸುವ ಸಾಧ್ಯತೆಯೂ ಇದೆ.

ಕೇರಳ, ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದ್ದು, ನಿತ್ಯವೂ ಎರಡೂ ರಾಜ್ಯಗಳಿಂದಲೂ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಉದ್ಯೋಗಿಗಳು ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ. ಅಲ್ಲದೇ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಕಾಲೇಜು ಆರಂಭದ ಬೆನ್ನಲ್ಲೇ ಸೋಂಕು ಹೆಚ್ಚಳವಾಗಿದೆ. ಈ ನಿಟ್ಟಿನಲ್ಲಿ ಸರಕಾರ ಎಚ್ಚೆತ್ತುಕೊಳ್ಳಬೇಕಾದ ಅಗತ್ಯವಿದೆ. ಗಡಿ ಜಿಲ್ಲೆಗಳಲ್ಲಿನ ಕಾಲೇಜುಗಳಲ್ಲಿ ಬಹುತೇಕ ಹೊರ ರಾಜ್ಯಗಳ ವಿದ್ಯಾರ್ಥಿಗಳೇ ವಿದ್ಯಾಭ್ಯಾಸ ಮಾಡುತ್ತಿರುವುದರಿಂದಾಗಿ ಕೊರೊನಾ ಮೂರನೇ ಅಲೆ ರಾಜ್ಯಕ್ಕೆ ಬಹುಬೇಗನೆ ವ್ಯಾಪಿಸೋ ಆತಂಕ ಎದುರಾಗಿದೆ.

Comments are closed.