ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಮಹಾಮಾರಿ ಅಬ್ಬರಿಸುತ್ತಿದೆ. ಕೊರೊನಾ ನಿಯಂತ್ರಣದಲ್ಲಿದ್ದ ಜಿಲ್ಲೆಗಳಲ್ಲೇ ಕೊರೊನಾ ಸೋಂಕು ಹೆಚ್ಚಾಗಿದೆ. ದಾವಣಗೆರೆ, ಮಂಡ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಒಮ್ಮಿಂದೊಮ್ಮೆಲೆ ಏರಿಕೆಯಾಗಿದೆ. ಆದರೆ ಸಿಲಿಕಾನ್ ಸಿಟಿಯ ಪಾಲಿಗೆ ಇಂದು ಶುಭ ಶುಕ್ರವಾರ.

ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಕೊರೊನಾ ಸೋಂಕು ವ್ಯಾಪಿಸುತ್ತಿರುವುದು ಆತಂಕ ಮೂಡಿಸಿತ್ತು. ಅದರಲ್ಲೂ ಪಾದರಾಯನಪುರ ಸೇರಿದಂತೆ ಹಲವು ಕಡೆಗಳಲ್ಲಿ ನಡೆಸಿರೊ ರಾಪಿಡ್ ಟೆಸ್ಟ್ ನಲ್ಲಿ ಶುಕ್ರವಾರ ಒಂದೂ ಪಾಸಿಟಿವ್ ರಿಪೋರ್ಟ್ ಬಂದಿಲ್ಲ.

ಹೀಗಾಗಿ ಸಿಲಿಕಾನ್ ಸಿಟಿಯ ಮಂದಿ ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ. ಆದ್ರೆ ಸಕ್ಕರೆ ನಾಡು ಮಂಡ್ಯ ಹಾಗೂ ದಾವಣಗೆರೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ ದುಪ್ಪಟ್ಟಾಗಿದೆ. ಮಂಡ್ಯದಲ್ಲಿ 8 ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದರೆ, ದಾವಣಗೆರೆಯಲ್ಲಿ 6 ಮಂದಿಗೆ ಕೊರೊನಾ ಒಕ್ಕರಿಸಿದೆ.

ಇನ್ನು ಬೆಳಗಾವಿಯಲ್ಲಿ 3, ಕಲಬುರಗಿಯಲ್ಲಿ 2, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2 ಹಾಗೂ ಚಿಕ್ಕಬಳ್ಳಾಪುರ ಮತ್ತು ವಿಜಯಪುರದಲ್ಲಿ ತಲಾ ಒಬ್ಬೊಬ್ಬರಿಗೆ ಕೊರೊನಾ ಸೋಂಕು ವ್ಯಾಪಿಸಿದೆ. ರಾಜ್ಯದಲ್ಲಿ ಇಂದು ಒಂದೇ ದಿನ 24 ಪ್ರಕರಣಗಳು ದಾಖಲಾಗಿದ್ದು, ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ 589ಕ್ಕೆ ಏರಿಕೆಯಾಗಿದೆ.